AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Champions Trophy 2025: ಟೀಂ ಇಂಡಿಯಾದಲ್ಲಿ ಯಾರು ಇನ್? ಯಾರು ಔಟ್?

Champions Trophy 2025: ಬಿಸಿಸಿಐ, 2025ರ ಚಾಂಪಿಯನ್ಸ್ ಟ್ರೋಫಿಗೆ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಶಮಿ ಮತ್ತು ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ದೊರೆತಿದೆ. ಆದರೆ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್ ಮತ್ತು ಕರುಣ್ ನಾಯರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

Champions Trophy 2025: ಟೀಂ ಇಂಡಿಯಾದಲ್ಲಿ ಯಾರು ಇನ್? ಯಾರು ಔಟ್?
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on: Jan 18, 2025 | 6:36 PM

Share

2025 ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಆಟಗಾರರನ್ನು ಈ ಟೂರ್ನಿಗೆ ಬಿಸಿಸಿಐ ಆಯ್ಕೆ ಮಾಡಿದ್ದು, ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಲ್ಲೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬೇಕೆಂದರೆ ದೇಶೀ ಟೂರ್ನಿಯಲ್ಲಿ ಪ್ರತಿಯೊಬ್ಬರು ಆಡಲೇಬೇಕು ಇದರ ಜೊತೆಗೆ ತಮ್ಮ ಪ್ರದರ್ಶನದಲ್ಲೂ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂಬ ಷರತ್ತು ಹೊರಡಿಸಿರುವ ಬಿಸಿಸಿಐ, ಇದೀಗ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡುವಾಗ ತನ್ನ ಹಳೆಯ ಸಂಪ್ರದಾಯವನ್ನೇ ಮುಂದುವರೆಸಿದೆ. ದೇಶೀ ಟೂರ್ನಿ ರಣಜಿಯಲ್ಲಾಗಲಿ ಅಥವಾ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಾಗಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾಗಶಃ ಆಟಗಾರರಿಗೆ ಅವಕಾಶ ನೀಡಲಾಗಿಲ್ಲ.

ಯಾರಿಗೆ ಅವಕಾಶ ಸಿಕ್ಕಿಲ್ಲ?

ಮೊಹಮ್ಮದ್ ಸಿರಾಜ್: ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿರುವ 15 ಸದಸ್ಯರಲ್ಲಿ ಒಂದು ಹೆಸರಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಮೂರು ಮಾದರಿಯ ಕ್ರಿಕೆಟ್​ನಲ್ಲೂ ಟೀಂ ಇಂಡಿಯಾದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್​ರನ್ನು ಟೂರ್ನಿಯಿಂದ ಕೈಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಿರಾಜ್ ಪ್ರದರ್ಶನ ಅಷ್ಟಕಷ್ಟೆ ಇದ್ದರೂ, ಈ ಹಿಂದೆ ನಡೆದಿದ್ದ ಏಷ್ಯಾಕಪ್, ಏಕದಿನ ವಿಶ್ವಕಪ್‌ನಲ್ಲಿ ಸಿರಾಜ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದಾಗ್ಯೂ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಸಂಜು ಸ್ಯಾಮ್ಸನ್; ಟಿ20 ತಂಡದಲ್ಲಿ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್​ರನ್ನು ಬ್ಯಾಕ್ ಅಪ್ ವಿಕೆಟ್ ಕೀಪರ್​ ಆಗಿ ತಂಡಕ್ಕೆ ಆಯ್ಕೆ ಮಾಡುವ ನಿರೀಕ್ಷೆಗಳಿದ್ದವು. ಏಕೆಂದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕೆಎಲ್ ರಾಹುಲ್ ಆಡುವ ಕಾರಣ ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಸಂಜು ಅವರನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ರಿಷಬ್​ ಪಂತ್​ಗೆ ಹೋಲಿಸಿದರೆ ಸಂಜು ಅವರ ಪ್ರದರ್ಶನ ಉತ್ತಮವಾಗಿತ್ತು. ಆದರೂ ಪಂತ್​ ಮೇಲೆ ನಂಬಿಕೆ ಇರಿಸಿ ಸಂಜುರನ್ನು ಕೈಬಿಡಲಾಗಿದೆ.

ಕರುಣ್ ನಾಯರ್; ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್​ಗಳ ಮಳೆಯನ್ನೇ ಹರಿಸಿರುವ ಕರುಣ್ ನಾಯರ್ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಬೇಕೆಂದು ಟೀಂ ಇಂಡಿಯಾದ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು. ಸಚಿನ್ ತೆಂಡೂಲ್ಕರ್ ಸೇರಿದಂತೆ ಮಾಜಿ ಆಟಗಾರರು ಕರುಣ್ ಪರ ಬ್ಯಾಟ್ ಬೀಸಿದ್ದರು. ಆದರೆ ಅವರ ದೇಶೀ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳದ ಬಿಸಿಸಿಐ ಮತ್ತೊಮ್ಮೆ ಅವರನ್ನು ಕಡೆಗಣಿಸಿದೆ.

ಯಾರಿಗೆ ಅವಕಾಶ?

ಯಶಸ್ವಿ ಜೈಸ್ವಾಲ್: ಈ ಮೊದಲೇ ಊಹಿಸಿದಂತೆ ಯಶಸ್ವಿ ಜೈಸ್ವಾಲ್​ಗೆ ಚೊಚ್ಚಲ ಅವಕಾಶ ಸಿಕ್ಕಿದೆ. ಅವರನ್ನು ಚಾಂಪಿಯನ್ಸ್ ಟ್ರೋಫಿಯ ಜೊತೆಗೆ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೂ ಆಯ್ಕೆ ಮಾಡಲಾಗಿದೆ. ಜೈಸ್ವಾಲ್ ಆಯ್ಕೆಗೆ ಕಾರಣವೂ ಇದ್ದು, ಈ ಆಟಗಾರ ಪ್ರತಿ ಮಾದರಿಯಲ್ಲೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾನೆ. ಹೀಗಾಗಿ ಜೈಸ್ವಾಲ್​ರನ್ನು ಬ್ಯಾಕ್​ಅಪ್ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.

ಮೊಹಮ್ಮದ್ ಶಮಿ: 2023 ರ ಏಕದಿನ ವಿಶ್ವಕಪ್ ಬಳಿಕ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಬುಮ್ರಾ ಟೂರ್ನಿ ಆರಂಭಕ್ಕೂ ಮುನ್ನ ಇಂಜುರಿಯಿಂದ ಚೇತರಿಸಿಕೊಳ್ಳದಿದ್ದರೆ, ವೇಗದ ಬೌಲಿಂಗ್ ವಿಭಾಗವನ್ನು ಶಮಿ ಮುನ್ನಡೆಸಲಿದ್ದಾರೆ.

ಶ್ರೇಯಸ್ ಅಯ್ಯರ್: 2023 ರ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಬಹಳ ದಿನಗಳ ನಂತರ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದ ಅಯ್ಯರ್​ಗೆ ಆಡುವ ಹನ್ನೊಂದರ ಬಳಗದಲ್ಲೂ ಆಡುವ ಅವಕಾಶ ಸಿಗುವುದು ಖಚಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ