VIDEO: ನಿಕೋಲಸ್ ಪೂರನ್ ಸಿಕ್ಸರ್ಗೆ ಅಭಿಮಾನಿಯ ಹಣೆ ಓಪನ್
IPL 2025 LSG vs GT: ಐಪಿಎಲ್ನ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೂಪರ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ 180 ರನ್ ಕಲೆಹಾಕಿತು. ಈ ಗುರಿಯನ್ನು 19.3 ಓವರ್ಗಳಲ್ಲಿ ಚೇಸ್ ಮಾಡಿ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ಗಳ ಗೆಲುವು ದಾಖಲಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 26ನೇ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಬ್ಯಾಟರ್ ನಿಕೋಲಸ್ ಪೂರನ್ (,Nicholas Pooran) ಬಾರಿಸಿದ ಸಿಕ್ಸ್ನಿಂದಾಗಿ ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ (60) ಹಾಗೂ ಸಾಯಿ ಸುದರ್ಶನ್ (56) ಉತ್ತಮ ಆರಂಭ ಒದಗಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು.
181 ರನ್ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಐಡೆನ್ ಮಾರ್ಕ್ರಾಮ್ (58) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ನಿಕೋಲಸ್ ಪೂರನ್. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ 34 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 61 ರನ್ ಬಾರಿಸಿದ್ದರು.
ಈ ಏಳು ಸಿಕ್ಸರ್ಗಳಲ್ಲಿ ಒಂದು ಸಿಕ್ಸ್ ನೇರವಾಗಿ ಸ್ಟೇಡಿಯಂನಲ್ಲಿ ಕೂತಿದ್ದ ಕ್ರಿಕೆಟ್ ಪ್ರೇಮಿಯೊಬ್ಬರ ಹಣೆಗೆ ಹೋಗಿ ಬಡಿದಿದೆ. ರಭಸದಿಂದ ತೂರಿ ಬಂದ ಚೆಂಡು ಬಡಿದು ಅವರ ಹಣೆಯು ಓಪನ್ ಆಗಿದ್ದು, ತಕ್ಷಣವೇ ಸ್ಟೇಡಿಯಂ ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸೆ ಒದಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೀಗ ಗಂಭೀರವಾಗಿ ಗಾಯಗೊಂಡಿರುವ ಅಭಿಮಾನಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಾಯಗೊಂಡಿರುವ ಅಭಿಮಾನಿಯ ವಿಡಿಯೋ:
ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿದ 181 ರನ್ಗಳ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 19.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ. ಈ ಮೂಲಕ ರಿಷಭ್ ಪಂತ್ ಮುಂದಾಳತ್ವದ ಲಕ್ನೋ ಪಡೆ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಂ , ನಿಕೋಲಸ್ ಪೂರನ್ , ರಿಷಭ್ ಪಂತ್ (ನಾಯಕ) , ಹಿಮ್ಮತ್ ಸಿಂಗ್ , ಡೇವಿಡ್ ಮಿಲ್ಲರ್ , ಅಬ್ದುಲ್ ಸಮದ್ , ಶಾರ್ದೂಲ್ ಠಾಕೂರ್ , ಆಕಾಶ್ ದೀಪ್ , ದಿಗ್ವೇಶ್ ಸಿಂಗ್ ರಾಠಿ , ಅವೇಶ್ ಖಾನ್ , ರವಿ ಬಿಷ್ಣೋಯ್.
ಇದನ್ನೂ ಓದಿ: IPL 2025: ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ‘ತಲಾ’ ಪಡೆ
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಶುಭ್ಮನ್ ಗಿಲ್ (ನಾಯಕ) , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಶೆರ್ಫೇನ್ ರದರ್ಫೋರ್ಡ್ , ಶಾರುಖ್ ಖಾನ್ , ರಾಹುಲ್ ತೆವಾಟಿಯಾ , ಅರ್ಷದ್ ಖಾನ್ , ರಶೀದ್ ಖಾನ್ , ಸಾಯಿ ಕಿಶೋರ್ , ಮೊಹಮ್ಮದ್ ಸಿರಾಜ್.