ಮಧ್ಯರಾತ್ರಿ ಅಭಿಮಾನಿಗಳ ಕ್ರೇಝ್ ನೋಡಿ RCB ಆಟಗಾರರು ಪುಳಕ: ಕಪ್ ಗೆಲ್ಲಲು ಶಪಥ
IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ ಮ್ಯಾಚ್ಗಳಲ್ಲಿ ರಾಯಲ್ ಪಡೆ ಸೋತಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ 8 ಪಂದ್ಯಗಳಲ್ಲಿ ಜಯಗಳಿಸಿರುವ ಆರ್ಸಿಬಿ ತಂಡ ಒಟ್ಟು 16 ಅಂಕಗಳನ್ನು ಕಲೆಹಾಕಿದ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

IPL 2025: 17 ವರ್ಷಗಳು…ಒಂದೇ ಒಂದು ಕಪ್ ಗೆದ್ದಿಲ್ಲ…ಪ್ರತಿ ಸೀಸನ್ನಲ್ಲೂ ಲೆಕ್ಕಾಚಾರ…ಕೊನೆಗೆ ನೋವಿನ ವಿದಾಯ…ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಆರ್ಸಿಬಿ ಅಭಿಮಾನಿಗಳಿಂದ ಭರಪೂರ ಬೆಂಬಲ ವ್ಯಕ್ತವಾಗುತ್ತಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಬಗ್ಗು ಬಡಿದ ರಾಯಲ್ ಪಡೆಗೆ ಅಭಿಮಾನಿಗಳು ಮಧ್ಯರಾತ್ರಿ ನೀಡಿದ ಸ್ವಾಗತ ನೋಡಿ ಖುದ್ದು ಆರ್ಸಿಬಿ ಆಟಗಾರರೇ ರೋಮಾಂಚನಗೊಂಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 52ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್ಗಳಲ್ಲಿ 211 ರನ್ಗಳಿಸಿ ನಿಯಂತ್ರಿಸಿ ಆರ್ಸಿಬಿ ತಂಡ 2 ರನ್ಗಳ ರೋಚಕ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಆರ್ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಷ್ಟೇ ಅಲ್ಲದೆ ಆರ್ಸಿಬಿ ಆಟಗಾರರು ಚಿನ್ನಸ್ವಾಮಿ ಸ್ಟೇಡಿಯಂನಿಂದ ಹೊರಬರುವ ತನಕ ಕಾದು ನಿಂತಿದ್ದರು. ರಸ್ತೆಯುದ್ದಕ್ಕೂ ಕಾದು ನಿಂತಿದ್ದ ಅಭಿಮಾನಿಗಳು ಘೋಷವ್ಯಾಕ್ಯದೊಂದಿಗೆ ಆರ್ಸಿಬಿ ತಂಡದ ಬಸ್ ಅನ್ನು ಸ್ವಾಗತಿಸಿ ತಮ್ಮ ಅಭಿಮಾನ ಮರೆದಿದ್ದಾರೆ.
ಮಧ್ಯರಾತ್ರಿಯವರೆಗೆ ಕಾದು ನಿಂತು ತೋರಿದ ಈ ಅಭಿಮಾನಕ್ಕೆ ಆರ್ಸಿಬಿ ಆಟಗಾರರು ಪುಳಕಿತರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಕ್ರೇಝ್ ನೋಡಿ ರೋಮಾಂಚನಗೊಂಡ ಕೃನಾಲ್ ಪಾಂಡ್ಯ, ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದಾರೆ. ಇದೀಗ ಆರ್ಸಿಬಿ ಅಭಿಮಾನಿಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
RCB ಅಭಿಮಾನಿಗಳ ವಿಡಿಯೋ:
ಇನ್ನು ಈಗಾಗಲೇ 11 ಪಂದ್ಯಗಳನ್ನಾಡಿರುವ ಆರ್ಸಿಬಿ ತಂಡವು 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಈ ಮೂಲಕ ಒಟ್ಟು 16 ಅಂಕಗಳನ್ನು ಪಡೆದುಕೊಂಡಿದೆ. ಇನ್ನುಳಿದ ಮೂರು ಮ್ಯಾಚ್ಗಳಲ್ಲಿ ಒಂದು ಗೆಲುವು ಸಾಧಿಸಿದರೂ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಈ ಬಾರಿ ಆರ್ಸಿಬಿ ಪಡೆ ಪ್ಲೇಆಫ್ ಆಡುವುದನ್ನು ಎದುರು ನೋಡಬಹುದು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಆರ್ಸಿಬಿ ತಂಡದ ಮುಂದಿನ ಎದುರಾಳಿಗಳು ಯಾರು?
ಲೀಗ್ ಹಂತದಲ್ಲಿ ಆರ್ಸಿಬಿ ತಂಡಕ್ಕೆ ಉಳಿದಿರುವುದು ಕೇವಲ 3 ಮ್ಯಾಚ್ಗಳು ಮಾತ್ರ. ಈ ಪಂದ್ಯಗಳಲ್ಲಿ ಆರ್ಸಿಬಿ ಲಕ್ನೋ ಸೂಪರ್ ಜೈಂಟ್ಸ್ (ಮೇ.9), ಸನ್ರೈಸರ್ಸ್ ಹೈದರಾಬಾದ್ (ಮೇ.13) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಮೇ.17) ತಂಡಗಳನ್ನು ಎದುರಿಸಲಿದೆ. ಈ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಆರ್ಸಿಬಿ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಲಿದೆ.




