IPL 2025: ಪಂಜಾಬ್ ಪಾಲಿಗೆ ದುಬಾರಿಯಾದ ಯುಜ್ವೇಂದ್ರ ಚಹಲ್
IPL 2025 Yuzvendra Chahal: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. ಈವರೆಗೆ 162 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಚಹಲ್ ಒಟ್ಟು 206 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ ಕಳೆದ ಸೀಸನ್ನಿಂದ ಯುಜ್ವೇಂದ್ರ ಚಹಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದ ಅತ್ಯಂತ ಯಶಸ್ವಿ ಬೌಲರ್ ಯುಜ್ವೇಂದ್ರ ಚಹಲ್ (Yuzvendra Chahal) ಲಯ ತಪ್ಪಿದ್ದಾರೆ. ಹೀಗೆ ತಪ್ಪಿದ ಲಯದೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಚಹಲ್ ಈವರೆಗೆ ಪಡೆದಿರುವುದು ಕೇವಲ 1 ವಿಕೆಟ್ ಮಾತ್ರ. ಇದಕ್ಕೂ ಮುನ್ನ ಐಪಿಎಲ್ ಮೆಗಾ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಯುಜ್ವೇಂದ್ರ ಚಹಲ್ ಅವರನ್ನು ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿದ್ದರು.
ಅದರಂತೆ ಪಂಜಾಬ್ ಕಿಂಗ್ಸ್ ಪರ ಈವರೆಗೆ 3 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಯುಜ್ವೇಂದ್ರ ಚಹಲ್ ಈವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಅವರು ಒಂದು ವಿಕೆಟ್ ಮಾತ್ರ ಕಬಳಿಸಿದ್ದಾರೆ ಎಂದರೆ ನಂಬಲೇಬೇಕು.
ಪಂಜಾಬ್ ಕಿಂಗ್ಸ್ ಕಣಕ್ಕಿಳಿದ 3 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ ಒಟ್ಟು 10 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ ಬರೋಬ್ಬರಿ 102 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಪ್ರತಿ ಓವರ್ನಲ್ಲಿ 10.20 ರನ್ ನೀಡಿದ್ದಾರೆ.
ಒಂದೆಡೆ ದುಬಾರಿಯಾಗುತ್ತಿದ್ದರೆ, ಮತ್ತೊಂದೆಡೆ ವಿಕೆಟ್ ಪಡೆಯುವಲ್ಲಿ ಸಹ ವಿಫಲರಾಗುತ್ತಿದ್ದಾರೆ. ಈ ಮೂಲಕ ಯುಜ್ವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ತಂಡದ ಚಿಂತೆಯನ್ನು ಹೆಚ್ಚಿಸುತ್ತಿದ್ದಾರೆ.
ತಲೆಕೆಳಗಾದ ಪಂಜಾಬ್ ಕಿಂಗ್ಸ್ ಲೆಕ್ಕಾಚಾರ:
ಯುಜ್ವೇಂದ್ರ ಚಹಲ್ ಖರೀದಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡಿತ್ತು. ಆದರೆ ಈ ಲೆಕ್ಕಾಚಾರ ನಡುವೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೆಲ ಅಂಕಿ ಅಂಶಗಳತ್ತ ಗಮನಹರಿಸಿರುವ ಸಾಧ್ಯತೆಯಿಲ್ಲ.
ಏಕೆಂದರೆ ಯುಜ್ವೇಂದ್ರ ಚಹಲ್ ಕೊನೆಯ 15 ಐಪಿಎಲ್ ಪಂದ್ಯಗಳಲ್ಲಿ ಪಡೆದಿರುವುದು ಕೇವಲ 13 ವಿಕೆಟ್ಗಳು ಮಾತ್ರ. ಅಲ್ಲದೆ ಕಳೆದ 15 ಪಂದ್ಯಗಳಲ್ಲಿ 10.2 ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು ಈ ಬಾರಿ ಬಿಡುಗಡೆ ಮಾಡಿತ್ತು.
ಇತ್ತ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಯುಜ್ವೇಂದ್ರ ಚಹಲ್ಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 18 ಕೋಟಿ ರೂ. ವ್ಯಯಿಸಿದೆ. ಆದರೆ ಕಳೆದ ವರ್ಷದಂತೆ ಈ ಬಾರಿ ಕೂಡ ಚಹಲ್ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾರೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಕಳೆದ 15 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ 9 ಮ್ಯಾಚ್ಗಳಲ್ಲಿ ಪ್ರತಿ ಓವರ್‌ಗೆ 10 ಕ್ಕಿಂತ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದಾರೆ. ಇನ್ನು 15 ಪಂದ್ಯಗಳಲ್ಲಿ 12 ರಲ್ಲಿ 1 ಅಥವಾ ಯಾವುದೇ ವಿಕೆಟ್ ಪಡೆದಿಲ್ಲ ಎಂಬುದೇ ಅಚ್ಚರಿ.
ಇದನ್ನೂ ಓದಿ: KL Rahul: CSK ವಿರುದ್ಧ ಭರ್ಜರಿ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್
ಇದೀಗ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಣಕ್ಕಿಳಿಯುತ್ತಿರುವ ಯುಜ್ವೇಂದ್ರ ಚಹಲ್ ಮುಂದೆ ಇನ್ನೂ 11 ಲೀಗ್ ಪಂದ್ಯಗಳಿವೆ. ಈ ಪಂದ್ಯಗಳ ಮೂಲಕ ಹಿಂದಿನಂತೆ ಸ್ಪಿನ್ ಮೋಡಿ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
Published On - 11:04 am, Sun, 6 April 25