AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ

KKR Breaks Losing Streak: ಐಪಿಎಲ್ 2026 ರ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ರಾಜಸ್ಥಾನ್ ರಾಯಲ್ಸ್ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತು. ಆರು ಪಂದ್ಯಗಳಲ್ಲಿ ಸೋತಿದ್ದ ಕೆಕೆಆರ್​ಗೆ ಇದು ಆಶಾಕಿರಣ. ರಾಜಸ್ಥಾನ್ ಕಳಪೆ ಫಿಲ್ಡಿಂಗ್‌ನ ಲಾಭ ಪಡೆದ ಕೆಕೆಆರ್​ ಕೊನೆಯ ಓವರ್​ನಲ್ಲಿ 156 ರನ್‌ಗಳ ಗುರಿಯನ್ನು ಬೆನ್ನಟ್ಟಿ ಪಾಯಿಂಟ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿತು. ಇದು ಕೆಕೆಆರ್ ಅಭಿಮಾನಿಗಳಿಗೆ ಸಮಾಧಾನ ತಂದ ಗೆಲುವು.

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ
Kkr
ಪೃಥ್ವಿಶಂಕರ
|

Updated on:Apr 19, 2026 | 7:57 PM

Share

ಐಪಿಎಲ್ 2026 (IPL 2026) ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ (KKR vs RR) ನಡುವೆ ನಡೆಯಿತು. ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಅಂದರೆ ಕೆಕೆಆರ್​ ತಂಡದ ತವರು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಕೆಕೆಆರ್​ ಈ ಆವೃತ್ತಿಯಲ್ಲಿ ಕೊನೆಗೂ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೆಕೆಆರ್ ಈ ಪಂದ್ಯದ ಗೆಲುವಿನೊಂದಿಗೆ ಒಂದು ಸ್ಥಾನ ಮೇಲೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು. ಕೆಕೆಆರ್​ನ ಈ ಗೆಲುವಿನಲ್ಲಿ ರಾಜಸ್ಥಾನ್ ತಂಡದ ಕಳಪೆ ಫಿಲ್ಡಿಂಗ್ ಕೂಡ ಪ್ರಮುಖ ಪಾತ್ರವಹಿಸಿತು.

ರಾಜಸ್ಥಾನ್​ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್​ಗೆ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಉತ್ತಮ ಆರಂಭವನ್ನು ನೀಡಿದರು. ಇವರಿಬ್ಬರು ಮೊದಲ ವಿಕೆಟ್​ಗೆ 81 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ವೈಭವ್ 28 ಎಸೆತಗಳಲ್ಲಿ 46 ರನ್ ಗಳಿಸಿ ವರುಣ್​ಗೆ ಬಲಿಯಾದರು. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಸ್ಪಿನ್ನರ್ ವರುಣ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ, ನಾಲ್ಕು ಓವರ್ ಗಳಲ್ಲಿ ಕೇವಲ 14 ರನ್ ನೀಡಿ ರಾಜಸ್ಥಾನದ ನಾಲ್ಕು ಪ್ರಮುಖ ವಿಕೆಟ್​ಗಳಲ್ಲಿ ಮೂರು ವಿಕೆಟ್​ಗಳನ್ನು ಕಬಳಿಸಿದರು. ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ಕೂಡ ಬಿಗಿಯಾಗಿ ಬೌಲಿಂಗ್ ಮಾಡಿ, ರಾಜಸ್ಥಾನವನ್ನು ಕೇವಲ 155 ರನ್ ಗಳಿಗೆ ಸೀಮಿತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವೈಭವ್ (46) ಮತ್ತು ಯಶಸ್ವಿ (39) ಹೊರತುಪಡಿಸಿ, ರಾಜಸ್ಥಾನದ ಬೇರೆ ಯಾವುದೇ ಬ್ಯಾಟ್ಸ್​ಮನ್​ಗೆ ಗಮನಾರ್ಹ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.

ಕೆಕೆಆರ್​ಗೆ ಕಳಪೆ ಆರಂಭ

ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಕಳಪೆ ಆರಂಭವನ್ನೇ ಪಡೆಯಿತು. ಮೊದಲ ಎಸೆತದಲ್ಲೇ ಆರಂಭಿಕ ಟಿಮ್ ಸೀಫರ್ಟ್ ಅವರನ್ನು ಜೋಫ್ರಾ ಆರ್ಚರ್ ಔಟ್ ಮಾಡಿದರು. ನಾಯಕ ರಹಾನೆ ಸತತ ಎರಡನೇ ಪಂದ್ಯದಲ್ಲೂ ಖಾತೆ ತೆರೆಯಲು ವಿಫಲರಾದರು. ಏಳನೇ ಓವರ್ ವೇಳೆಗೆ, ಕ್ಯಾಮರೂನ್ ಗ್ರೀನ್ ಮತ್ತು ಅಂಗ್ಕ್ರಿಶ್ ರಘುವಂಶಿ ಕೂಡ ಪೆವಿಲಿಯನ್​ಗೆ ಮರಳಿದರು. ಇದರ ನಂತರವೂ ಕೋಲ್ಕತ್ತಾದ ಅದೃಷ್ಟ ಸುಧಾರಿಸಲಿಲ್ಲ, ಕೇವಲ 85 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. ಹೀಗಾಗಿ ಈ ಆವೃತ್ತಿಯಲ್ಲಿ ತಂಡದ ಆರನೇ ಸೋಲು ಖಚಿತವಾಗಿತ್ತು.

ಜೀವದಾನದ ಲಾಭ ಪಡೆದ ರಿಂಕು

ಈ ವೇಳೆ ರಿಂಕು ಸಿಂಗ್ ತಂಡದ ಪರ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದರು. ಆದಾಗ್ಯೂ ಇಲ್ಲಿ ರಾಜಸ್ಥಾನ್ ಕೂಡ ದೊಡ್ಡ ತಪ್ಪು ಮಾಡಿತು. ರಿಂಕು ಒಂದಂಕಿ ಕಲೆಹಾಕಿದ್ದಾಗಲೇ ಕ್ಯಾಚ್ ನೀಡಿದ್ದರು. ಆದರೆ ಈ ಸುಲಭ ಕ್ಯಾಚ್ ಅನ್ನು ನಾಂದ್ರೆ ಬರ್ಗರ್ ಕೈಚೆಲ್ಲಿದರು. ಈ ಜೀವದಾನದ ಲಾಭ ಪಡೆದ ರಿಂಕು ಅರ್ಧಶತಕ ಬಾರಿಸುವುದರ ಜೊತೆಗೆ ತಂಡವನ್ನು ಗೆಲುವಿನ ದಡ ಕೂಡ ಮುಟ್ಟಿಸಿದರು.

KKR vs RR: ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ

ಕೆಕೆಆರ್​​ಗೆ ಮೊದಲ ಜಯ

ಈ ಹಂತದಲ್ಲಿ ರಿಂಕು ಸಿಂಗ್ ಜೊತೆಯಾದ ಅನುಕುಲ್ ರಾಯ್ ಕೂಡ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರಿಂಕು ಮತ್ತು ಅನುಕುಲ್ ಅಂತಿಮವಾಗಿ 20 ನೇ ಓವರ್​ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. 19 ನೇ ಓವರ್​ನಲ್ಲಿ ಆರ್ಚರ್ ಬೌಲಿಂಗ್​ನಲ್ಲಿ ಅನುಕುಲ್ ಅದ್ಭುತ ಸಿಕ್ಸರ್ ಬಾರಿಸಿದರೆ, ಅಂತಿಮ ಓವರ್​ನಲ್ಲಿ ರಿಂಕು ಸತತ ಎರಡು ಬೌಂಡರಿಗಳನ್ನು ಬಾರಿಸಿದರು. 20 ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ, ರಿಂಕು ತಂಡಕ್ಕೆ ಗೆಲುವು ತಂದುಕೊಟ್ಟರು ಮತ್ತು ಈ ಆವೃತ್ತಿಯ ಮೊದಲ ಅರ್ಧಶತಕವನ್ನು 34 ಎಸೆತಗಳಲ್ಲಿ ಪೂರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 19 April 26

Follow Us