MI vs CSK: ಐಪಿಎಲ್‌ನಲ್ಲಿ ದಾಖಲೆಯ ಐದನೇ ಶತಕ ಸಿಡಿಸಿದ ಸಂಜು ಸ್ಯಾಮ್ಸನ್
Sanju Samson IPL century: ಐಪಿಎಲ್ 2026 ರ 33 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 207 ರನ್ ಗಳಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದು ಅಜೇಯ ಶತಕ ಬಾರಿಸಿದ ಸಂಜು, ಇದು ಅವರ ಐಪಿಎಲ್ ವೃತ್ತಿಜೀವನದ ಐದನೇ ಶತಕವಾಗಿದೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಅವರು ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ.

ಐಪಿಎಲ್ 2026 (IPL 2026) ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ನಡುವೆ ನಡೆಯಿತು. ಮುಂಬೈನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡ 20 ಓವರ್ಗಳಲ್ಲಿ 207 ರನ್ ಕಲೆಹಾಕಿತು. ತಂಡ ಇಷ್ಟು ಮೊತ್ತವನ್ನು ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ (Sanju Samson) ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದಿದ್ದಲ್ಲದೆ ಈ ಆವೃತ್ತಿಯ ಎರಡನೇ ಶತಕವನ್ನು ಬಾರಿಸಿದರು. ಹಾಗೆಯೇ ಸಂಜು ಅವರ ಐಪಿಎಲ್ ವೃತ್ತಿಜೀವನದ ಐದನೇ ಶತಕವೂ ಆಗಿದ್ದು, ಈ ಮೂಲಕ ಸಂಜು ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ.
54 ಎಸೆತಗಳಲ್ಲಿ ಶತಕ
ಇದು ಈ ಆವೃತ್ತಿಯಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರ ಎರಡನೇ ಶತಕವಾಗಿದೆ. ಇದಕ್ಕೂ ಮೊದಲು, ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಶತಕ ಬಾರಿಸಿದ್ದರು. ಈ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಆದರೀಗ ಫಾರ್ಮ್ ಕಂಡುಕೊಂಡಿರುವ ಸಂಜು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ತಮ್ಮ ಅಬ್ಬರದ ಇನ್ನಿಂಗ್ಸ್‌ನಲ್ಲಿ, ಅವರು ಕೇವಲ 54 ಎಸೆತಗಳಲ್ಲಿ 187.03 ಸ್ಟ್ರೈಕ್ ರೇಟ್‌ನೊಂದಿಗೆ 10 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ ಅಜೇಯ 101 ರನ್ ಗಳಿಸಿದರು. ಗಮನಿಸಬೇಕಾದ ಸಂಗತಿಯೆಂದರೆ ಸಂಜು, ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕ ಪೂರೈಸಿದರು.
ವಿಶೇಷ ಪಟ್ಟಿಯಲ್ಲಿ ಸಂಜು ಹೆಸರು ಸೇರ್ಪಡೆ
ಈ ಶತಕದೊಂದಿಗೆ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದ್ದಾರೆ. ಸಂಜು ಅಲ್ಲದೆ, ರುತುರಾಜ್ ಗಾಯಕ್ವಾಡ್, ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್ ಕೂಡ ಸಿಎಸ್‌ಕೆ ಪರ ತಲಾ ಎರಡು ಶತಕಗಳನ್ನು ಬಾರಿಸಿದ್ದಾರೆ. ಆದಾಗ್ಯೂ, ಇನ್ನಿಂಗ್ಸ್ ವಿಷಯದಲ್ಲಿ ಸಂಜು ಸ್ಯಾಮ್ಸನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮೇಲೆ ಹೇಳಿದಂತೆ ಇದು ಸಂಜು ಸ್ಯಾಮ್ಸನ್ ಅವರ ಐಪಿಎಲ್ ವೃತ್ತಿಜೀವನದ ಐದನೇ ಶತಕವಾಗಿದೆ. ಇದರೊಂದಿಗೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
MI vs CSK IPL 2026 Live Score: ಸಂಜು ಶತಕ; ಮುಂಬೈಗೆ 208 ರನ್ ಗುರಿ
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳು
- ವಿರಾಟ್ ಕೊಹ್ಲಿ- 8 ಶತಕಗಳು
- ಜೋಸ್ ಬಟ್ಲರ್- 7 ಶತಕಗಳು
- ಕ್ರಿಸ್ ಗೇಲ್- 6 ಶತಕಗಳು
- ಸಂಜು ಸ್ಯಾಮ್ಸನ್- 5 ಶತಕಗಳು
- ಕೆಎಲ್ ರಾಹುಲ್- 5 ಶತಕಗಳು
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Thu, 23 April 26




