ಕೇವಲ 3.3 ಓವರ್‌ಗಳಲ್ಲಿ ಪಂದ್ಯ ಮುಗಿಸಿದ ಕುವೈತ್!
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಕುವೈತ್ ತಂಡ ಮಿಂಚಿನ ವೇಗದ ಚೇಸಿಂಗ್ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಮಂಗೋಲಿಯಾ ನೀಡಿದ್ದ ಕನಿಷ್ಠ ರನ್‌ಗಳ ಗುರಿಯನ್ನು ಕುವೈತ್ ಕೇವಲ 21 ಎಸೆತಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿ, 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಏಕಪಕ್ಷೀಯ ಪಂದ್ಯವೊಂದಕ್ಕೆ ಕೌಲಾಲಂಪುರ್ ಸಾಕ್ಷಿಯಾಗಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಸಬ್ ರೀಜನಲ್ ಕ್ವಾಲಿಫೈಯರ್ ಎ ಟೂರ್ನಿಯ 6ನೇ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಕುವೈತ್ ತಂಡ ಅಮೋಘ ಜಯ ಸಾಧಿಸಿದೆ. ಅದು ಕೂಡ ಕೇವಲ 3.3 ಓವರ್‌ಗಳಲ್ಲಿ ಪಂದ್ಯ ಮುಗಿಸುವ ಮೂಲಕ ಎಂಬುದು ವಿಶೇಷ.
ಕೌಲಾಲಂಪುರ್ನ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಂಗೋಲಿಯಾ ತಂಡದ ನಿರ್ಧಾರ ಸಂಪೂರ್ಣ ತಲೆಕೆಳಗಾಯಿತು. ಕುವೈತ್ ಬೌಲರ್‌ಗಳ ಶಿಸ್ತುಬದ್ಧ ಮತ್ತು ಮಾರಕ ದಾಳಿಗೆ ತತ್ತರಿಸಿದ ಮಂಗೋಲಿಯಾ ಬ್ಯಾಟರ್‌ಗಳು ಪೆವಿಲಿಯರ್ ಪರೇಡ್ ನಡೆಸಿದರು.
ಇದರ ನಡುವೆ ಗಂಡೆಂಬರೆಲ್ ಗನ್‌ಬೋಲ್ಡ್ 21 ರನ್ಗಳಿಸುವಲ್ಲಿ ಯಶಸ್ವಿಯಾದರು. ಈ ಇಪ್ಪತ್ತೊಂದು ರನ್‌ಗಳ ನೆರವಿನೊಂದಿಗೆ ಮಂಗೋಲಿಯಾ ತಂಡ 14.5 ಓವರ್‌ಗಳಲ್ಲಿ ಕಲೆಹಾಕಿದ್ದು ಕೇವಲ 42 ರನ್‌ಗಳು ಮಾತ್ರ.
ಕುವೈತ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ನಾಯಕ ಮೊಹಮ್ಮದ್ ಅಸ್ಲಂ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿರಾಜ್ ಖಾನ್ 2 ವಿಕೆಟ್ ಪಡೆದು ಮಿಂಚಿದರು.
3.3 ಓವರ್‌ಗಳಲ್ಲಿ ಮ್ಯಾಚ್ ಫಿನಿಶ್!
ಕೇವಲ 43 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕುವೈತ್ ಆರಂಭಿಕರು ಪಂದ್ಯವನ್ನು ಟಿ20 ಇನಿಂಗ್ಸ್‌ನಂತೆ ಆಡದೆ ಟಿ10 ಶೈಲಿಯಲ್ಲಿ ಮುಗಿಸಿದರು. ಆರಂಭಿಕ ಆಟಗಾರರಾದ ರವಿಜಾ ಸಂಡರುವಾನ್ 14 ಎಸೆತಗಳಲ್ಲಿ 4 ಫೋರ್ ಹಾಗೂ 2 ಭರ್ಜರಿ ಸಿಕ್ಸರ್ಗಳೊಂದಿಗೆ 30 ರನ್ ಚಚ್ಚಿದರೆ, ಅದ್ನಾನ್ ಇದ್ರಿಸ್ 7 ಎಸೆತಗಳಲ್ಲಿ 13 ರನ್ ಬಾರಿಸಿದರು. ಈ ಮೂಲಕ ಕುವೈತ್ ತಂಡ ಕೇವಲ 3.3 ಓವರ್‌ಗಳಲ್ಲಿ, ಅಂದರೆ 21 ಎಸೆತಗಳಲ್ಲಿ ಮ್ಯಾಚ್ ಮುಗಿಸಿದರು.
ಮಂಗೋಲಿಯಾ ವಿರುದ್ಧದ ಈ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಕುವೈತ್ ತಂಡ ತನ್ನ ನೆಟ್ ರನ್ ರೇಟ್ ಅನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಈ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಇದು ವಿಶ್ವ ದಾಖಲೆಯಲ್ಲ!
ಕುವೈತ್ ತಂಡ ಕೇವಲ 3.3 ಎಸೆತಗಳಲ್ಲಿ ಮ್ಯಾಚ್ ಮುಗಿಸಿದರೂ ಅದು ವಿಶ್ವ ದಾಖಲೆಯಲ್ಲ ಎಂಬುದು ವಿಶೇಷ. ಏಕೆಂದರೆ ಟಿ20 ಕ್ರಿಕೆಟ್ ಪಂದ್ಯವೊಂದು ಕೇವಲ 2 ಎಸೆತಗಳಲ್ಲಿ ಮುಗಿದ ಇತಿಹಾಸವಿದೆ.
- ಅತಿ ವೇಗದ ರನ್ ಚೇಸ್: ಸ್ಪೇನ್ ತಂಡವು 2023ರಲ್ಲಿ ಐಲ್ ಆಫ್ ಮ್ಯಾನ್ ವಿರುದ್ಧ ಕೇವಲ 2 ಎಸೆತಗಳಲ್ಲಿ (0.2 ಓವರ್‌ಗಳಲ್ಲಿ) 11 ರನ್‌ಗಳ ಗುರಿಯನ್ನು ಬೆನ್ನಟ್ಟಿ ಜಯಗಳಿಸಿರುವುದು ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ವಿಶ್ವ ದಾಖಲೆಯಾಗಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ಗೆ ಹೊಸ ಕಳೆ: 12 ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್!
- ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ದಾಖಲೆ: 2024ರ ಟಿ20 ವಿಶ್ವಕಪ್‌ನಲ್ಲಿ ಒಮಾನ್ ವಿರುದ್ಧ ಇಂಗ್ಲೆಂಡ್ ತಂಡ ಕೇವಲ 3.1 ಓವರ್‌ಗಳಲ್ಲಿ (19 ಎಸೆತಗಳಲ್ಲಿ) 48 ರನ್‌ಗಳ ಗುರಿಯನ್ನು ಚೇಸ್ ಮಾಡಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಅತಿ ವೇಗದ ರನ್ ಚೇಸ್ ಸಾಧನೆ ಮಾಡಿದೆ.




