AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ ಅಬ್ಬರಕ್ಕಿಂತ ರೋಹಿತ್ ಫೀಲ್ಡಿಂಗ್‌ಗೆ ಗಿಲ್ ಫಿದಾ! ಪಂದ್ಯದ ಟರ್ನಿಂಗ್ ಪಾಯಿಂಟ್ ಬಿಚ್ಚಿಟ್ಟ ನಾಯಕ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಶುಭ್‌ಮನ್ ಗಿಲ್ ತಂಡದ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಗುರ್‌ನೂರ್ ಬ್ರಾರ್ ಅವರ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ರೋಹಿತ್ ಶರ್ಮಾ ಅವರ ರನೌಟ್ ಪಂದ್ಯಕ್ಕೆ ತಿರುವು ನೀಡಿತು ಮತ್ತು ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವನ್ನು ಸುಲಭವಾಗಿಸಿತು ಎಂದು ಗಿಲ್ ಹೇಳಿದ್ದಾರೆ.

ಕೊಹ್ಲಿ ಅಬ್ಬರಕ್ಕಿಂತ ರೋಹಿತ್ ಫೀಲ್ಡಿಂಗ್‌ಗೆ ಗಿಲ್ ಫಿದಾ! ಪಂದ್ಯದ ಟರ್ನಿಂಗ್ ಪಾಯಿಂಟ್ ಬಿಚ್ಚಿಟ್ಟ ನಾಯಕ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Nov 04, 2026 | 5:36 PM

Share

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ. ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ತೀರ ದುಬಾರಿಯಾಗಿತ್ತು. ಆದರೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತದ ವೇಗಿಗಳು ತಮ್ಮ ಲಯ ಕಂಡುಕೊಂಡಿದ್ದಾರೆ. ಇದರ ಜೊತೆಗೆ ಬ್ಯಾಟರ್‌ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಇದರ ಪರಿಣಾಮದಿಂದ ಭಾರತಕ್ಕೆ ಗೆಲುವಿನ ಆರಂಭ ಸಿಕ್ಕಿದೆ. ಹೀಗಾಗಿ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಶುಭ್​ಮನ್ ಗಿಲ್ ತಂಡದ ಬೌಲರ್‌ಗಳ ಪ್ರದರ್ಶನವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಅದರಲ್ಲೂ ಅರ್ಷದೀಪ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಗುರ್‌ನೂರ್ ಬ್ರಾರ್ ಅವರ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪಂದ್ಯದ ಗತಿಯನ್ನೇ ಬದಲಿಸಿದ ಪ್ರಮುಖ ಘಟನೆಯ ಬಗ್ಗೆಯೂ ಗಿಲ್ ಮಾತನಾಡಿದ್ದಾರೆ.

ಐದು ವಿಕೆಟ್‌ಗಳ ಭರ್ಜರಿ ಗೆಲುವು

ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ಗುರ್‌ನೂರ್ ಬ್ರಾರ್ ಮತ್ತು ಅನ್ಶುಲ್ ಕಾಂಬೋಜ್ ತಮ್ಮ ವೇಗ ಹಾಗೂ ಸ್ವಿಂಗ್ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಾಡಿದರು. ಪರಿಣಾಮ ಕಿವೀಸ್ ಪಡೆ ಕೇವಲ 185 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಮಳೆ ಅಡ್ಡಿಪಡಿಸಿದ್ದರಿಂದ ಭಾರತದ ಗೆಲುವಿನ ಗುರಿಯನ್ನು 32 ಓವರ್‌ಗಳಲ್ಲಿ 143 ರನ್‌ಗಳಿಗೆ ನಿಗದಿಪಡಿಸಲಾಯಿತು. ಈ ಸುಲಭ ಗುರಿ ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಕೊಹ್ಲಿ ಕೇವಲ 51 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 74 ರನ್ ಸಿಡಿಸಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು.

ರೋಹಿತ್ ಫೀಲ್ಡಿಂಗ್​ಗೆ ಗಿಲ್ ಮೆಚ್ಚುಗೆ

ಪಂದ್ಯದ ಬಳಿಕ ಮಾತನಾಡಿದ ನಾಯಕ ಶುಭ್​ಮನ್ ಗಿಲ್, ಅಪಾಯಕಾರಿ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರನ್ನು ರನೌಟ್ ಮಾಡಿದ ರೋಹಿತ್ ಶರ್ಮಾ ಅವರ ಅದ್ಭುತ ಫೀಲ್ಡಿಂಗ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು ಎಂದು ಹೇಳಿದ್ದಾರೆ. ಅಲ್ಲದೆ, ಅನ್ಶುಲ್ ಕಾಂಬೋಜ್ ಅವರ ಸ್ವಿಂಗ್ ಬೌಲಿಂಗ್ ಸಾಮರ್ಥ್ಯ ಹಾಗೂ ಗುರ್‌ನೂರ್ ಬ್ರಾರ್ ಅವರ ಹೆಚ್ಚುವರಿ ಬೌನ್ಸ್ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದಿದ್ದಾರೆ.

‘ನಮ್ಮ ಬೌಲಿಂಗ್ ಪ್ರದರ್ಶನ ಅತ್ಯುತ್ತಮವಾಗಿತ್ತು. ಫೀಲ್ಡಿಂಗ್ ಕೂಡ ಉತ್ತಮವಾಗಿತ್ತು. ರೋಹಿತ್ ಭಾಯ್ ಮಾಡಿದ ಆ ರನೌಟ್ ಪಂದ್ಯದ ಗತಿಯನ್ನೇ ಬದಲಿಸಿತು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಜೊತೆಯಾಟ ನಮಗೆ ಅಪಾಯಕಾರಿಯಾಗಿತ್ತು. ಭಾರತದಲ್ಲೂ ಈ ಇಬ್ಬರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಒಟ್ಟಾರೆಯಾಗಿ ಇದು ನಮ್ಮ ತಂಡದ ಸಂಘಟಿತ ಪ್ರದರ್ಶನವಾಗಿತ್ತು.

ಕೊಹ್ಲಿ ಕ್ಲಾಸ್, ವೇಗಿಗಳ ಮಾಸ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ವೇಗಿಗಳಿಗೆ ಗೆಲುವಿನ ಕ್ರೆಡಿಟ್

ಅನ್ಶುಲ್ ಕಾಂಬೋಜ್ ಈ ರೀತಿಯ ವಾತಾವರಣಕ್ಕೆ ಹೇಳಿಮಾಡಿಸಿದ ಬೌಲರ್. ಅವರು ಯಾವಾಗಲೂ ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಾ ಚೆಂಡನ್ನು ಸ್ವಿಂಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಹಳೆಯ ಚೆಂಡಿನಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲರು. ಇನ್ನು ಪಿಚ್‌ನಿಂದ ಹೆಚ್ಚಿನ ನೆರವು ಸಿಗದಿದ್ದಾಗ ಗುರ್‌ನೂರ್ ಬ್ರಾರ್ ತಮ್ಮ ವೇಗದ ಮೂಲಕ ಹೆಚ್ಚುವರಿ ಬೌನ್ಸ್ ಪಡೆಯಬಲ್ಲರು. ಈ ಇಬ್ಬರೂ ಬೌಲಿಂಗ್ ಮಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು’ ಎಂದು ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಬ್ಯಾಟಿಂಗ್ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ ಎಂದೂ ಗಿಲ್ ಹೇಳಿದ್ದಾರೆ. ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಿದ ಬಳಿಕ ಮಳೆ ಬಂದು ಆಟ ಸ್ಥಗಿತಗೊಂಡರೆ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಳ್ಳುವುದು ಸವಾಲಿನ ಕೆಲಸ. ಅದರಲ್ಲೂ ಮಳೆಯ ನಂತರ ಪಿಚ್ ವೇಗವಾಗಿ ವರ್ತಿಸಲು ಆರಂಭಿಸಿತ್ತು ಎಂದು ತಿಳಿಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ವಿಶೇಷವಾಗಿ ಶ್ಲಾಘಿಸಿದ ಗಿಲ್, ‘ವಿರಾಟ್ ಭಾಯ್ ಬ್ಯಾಟಿಂಗ್ ಮಾಡಿದ ರೀತಿ ನಮ್ಮ ಕೆಲಸವನ್ನು ಸಾಕಷ್ಟು ಸುಲಭಗೊಳಿಸಿತು’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Wed, 4 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More