‘ಪ್ಯಾಂಟ್ ಬದಲಿಸಿದಂತೆ ತಮ್ಮ ಮನಸ್ಸು ಬದಲಾಯಿಸುತ್ತಾರೆ’; ಆಕಿಬ್ ಜಾವೇದ್ ವಿರುದ್ಧ ಗಿಲ್ಲೆಸ್ಪಿ ವಾಗ್ದಾಳಿ
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಪದೇ ಪದೇ ಆಗುವ ಬದಲಾವಣೆಗಳಿಗೆ ಮಾಜಿ ಕೋಚ್ ಜೇಸನ್ ಗಿಲ್ಲೆಸ್ಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಸರಣಿ ಸೋತ ಬಳಿಕ ನಡೆದ ಕೋಚ್‌ಗಳ ಬದಲಾವಣೆ ಮತ್ತು ಆಕಿಬ್ ಜಾವೇದ್ ಅವರ ಆಯ್ಕೆ ನೀತಿಯನ್ನು ಗಿಲ್ಲೆಸ್ಪಿ ಖಂಡಿಸಿದ್ದಾರೆ. ಆಕಿಬ್ ಯಾವುದೇ ತಂತ್ರವಿಲ್ಲದೆ ಆಯ್ಕೆ ಮಾಡುತ್ತಾರೆ, ಹಾಗೂ ಬೇರೆಯವರ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಆರೋಪಿಸಿ, ಇದು ಆಟಗಾರರ ಮನೋಬಲದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಗಾಗ್ಗೆ ಬದಲಾವಣೆಗಳಾಗುವುದು ಹೊಸದೇನಲ್ಲ. ಯಾವುದಾದರೂ ಪಂದ್ಯಾವಳಿಯನ್ನೋ ಅಥವಾ ಸರಣಿಯನ್ನೋ ಸೋತ ಬಳಿಕ ಪಾಕ್ ತಂಡದಲ್ಲಿ ನಾಯಕನಿಂದ ಹಿಡಿದು ಕೋಚ್ಗಳವರೆಗೆ ಎಲ್ಲರೂ ಬದಲಾಗುತ್ತಾರೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಬಳಿಕ ಪಾಕ್ ತಂಡದಲ್ಲಿ ಮತ್ತದೇ ಬದಲಾವಣೆಗಳಾಗಿವೆ. ತಂಡದ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ತಂಡದಿಂದ ತೆಗೆದುಹಾಕಲಾಗಿದೆ. ಪಾಕ್ ಮಂಡಳಿಯ ಈ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪಾಕ್ ತಂಡದ ಮಾಜಿ ಕೋಚ್ ಜೇಸನ್ ಗಿಲ್ಲೆಸ್ಪಿ, ಪಿಸಿಬಿ ಮುಖ್ಯ ಆಯ್ಕೆದಾರ ಆಕಿಬ್ ಜಾವೇದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಆಕಿಬ್ ಜಾವೇದ್ ಪ್ಯಾಂಟ್‌ನಂತೆ ತಮ್ಮ ಮನಸ್ಸನ್ನು ಬದಲಾಯಿಸುತ್ತಾರೆ ಎಂದಿದ್ದಾರೆ.
ಭಯದಿಂದ ಆಡುತ್ತಿದ್ದಾರೆಂದು ತೋರುತ್ತದೆ
ಪಾಕ್ ತಂಡದಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿರುವ ಜೇಸನ್ ಗಿಲ್ಲೆಸ್ಪಿ, ‘ಪಾಕಿಸ್ತಾನ ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಯನ್ನು ನೋಡಲು ನೋವಾಗುತ್ತದೆ. ಆಟಗಾರರ ಬಗ್ಗೆ ನನಗೆ ವಿಷಾದವಿದೆ. ಹೊರಗಿನಿಂದ ನೋಡಿದರೆ, ಅವರು ಭಯದಿಂದ ಆಡುತ್ತಿದ್ದಾರೆಂದು ತೋರುತ್ತದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸಲ್ಮಾನ್ ಅಲಿ ಆಘಾ ಅವರನ್ನು ನಾಯಕರನ್ನಾಗಿ ಮಾಡುತ್ತಾರೆ, ನಂತರ ಎರಡನೇ ಟೆಸ್ಟ್‌ನಿಂದ ಅವರನ್ನು ಕೈಬಿಡಲಾಗುತ್ತದೆ. ಮೂರನೇ ಟೆಸ್ಟ್‌ಗೂ ಮೊದಲೇ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ಇದು ಹೇಗೆ ಸಂಭವಿಸುತ್ತದೆ? ಇದಕ್ಕೆ ಆಕಿಬ್ ಜಾವೇದ್ ಸ್ಪಷ್ಟವಾಗಿ ಕಾರಣ.
ಆಯ್ಕೆಯ ತಂತ್ರ ಗೊತ್ತಿಲ್ಲ
ತಂಡದ ಮುಖ್ಯ ಆಯ್ಕೆಗಾರ ಆಕಿಬ್ ಜಾವೇದ್‌ಗೆ ಆಯ್ಕೆಯ ತಂತ್ರವೇ ಗೊತ್ತಿಲ್ಲ. ಅವರು ಪ್ರತಿದಿನ ತಮ್ಮ ಪ್ಯಾಂಟ್ ಬದಲಾಯಿಸುವಂತೆ ತಮ್ಮ ಮನಸ್ಸನ್ನು ಬದಲಾಯಿಸುತ್ತಾರೆ. ಆಕಿಬ್ ಜಾವೇದ್ ಮತ್ತು ಆಟಗಾರರ ನಡುವೆ ಯಾವುದೇ ಸಂವಹನವಿಲ್ಲ. ಈ ಮೊದಲು ಆಕಿಬ್ ಜಾವೇದ್, ಪಾಕ್ ತಂಡದಲ್ಲಿ ನಡೆಯುತ್ತಿರುವ ಎಲ್ಲದಕ್ಕೂ ಗ್ಯಾರಿ ಕರ್ಸ್ಟನ್ ಮತ್ತು ನನ್ನನ್ನು(ಜೇಸನ್ ಗಿಲ್ಲೆಸ್ಪಿ) ದೂಷಿಸಿದ್ದರು. ಆಕಿಬ್ ಕಳೆದ ಎರಡು ವರ್ಷಗಳಿಂದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆದರೆ ನಾವೀಗ ತಂಡದಲಿಲ್ಲ. ಆದರೂ ಅವರು ನಮ್ಮನ್ನು ದೂಷಿಸುತ್ತಿದ್ದಾರೆ. ಇದು ನನಗೆ ಅರ್ಥವಾಗುತ್ತಿಲ್ಲ. ಜಾವೇದ್ ಒಮ್ಮೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ಗಿಲ್ಲೆಸ್ಪಿ ಖಾರವಾಗಿಯೇ ಮಾತನಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Fri, 4 September 26




