Virat Kohli: ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ವಿದಾಯ
Virat Kohli Test Retirement: ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಈವರೆಗೆ 123 ಪಂದ್ಯಗಳನ್ನು ಆಡಿರುವ ಅವರು 46.9 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರ ನಡುವೆ 254* ಬಾರಿಸಿದ್ದು ಅವರ ವೈಯುಕ್ತಿಕ ಗರಿಷ್ಠ ಸ್ಕೋರ್. ಇದೀಗ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ನಿಗೆ ವಿರಾಟ್ ಕೊಹ್ಲಿ ನಿವೃತ್ತರಾಗಿದ್ದಾರೆ.

ಟೀಮ್ ಇಂಡಿಯಾದ (Team India) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೊಹ್ಲಿ ಅಧಿಕೃತವಾಗ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಕಿಂಗ್ ಕೊಹ್ಲಿಯ 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯಗೊಂಡಂತಾಗಿದೆ.
ಇದಕ್ಕೂ ಮುನ್ನ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹೀಗಾಗಿ ಬಿಸಿಸಿಐ ಅವರ ಮನವೊಲಿಸಲು ಮುಂದಾಗಿತ್ತು. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿಯೇ ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದನ್ನು ಅಧಿಕೃತಗೊಳಿಸಿದ್ದಾರೆ.
2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ವಿರಾಟ್ ಕೊಹ್ಲಿ, 2014 ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎನ್ನಬಹುದು.
ಅಲ್ಲದೆ ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 210 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 16608 ಎಸೆತಗಳನ್ನು ಎದುರಿಸಿರುವ ಕೊಹ್ಲಿ ಒಟ್ಟು 9230 ರನ್ ಕಲೆಹಾಕಿದ್ದಾರೆ. ಇದರ ನಡುವೆ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಹಾಗೆಯೇ ಭಾರತ ಟೆಸ್ಟ್ ತಂಡವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 40 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೇವಲ 17 ಮ್ಯಾಚ್ಗಳಲ್ಲಿ ಮಾತ್ರ ಸೋಲನುಭವಿಸಿದೆ. ಇನ್ನು 11 ಪಂದ್ಯಗಳಲ್ಲಿ ಭಾರತ ತಂಡವು ಡ್ರಾ ಸಾಧಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಇದೀಗ 14 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್ಗೆ ವಿರಾಮ ಇಟ್ಟಿರುವ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ 2024 ರಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದ ಬೆನ್ನಲ್ಲೇ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ನಿವೃತ್ತಿ ಪತ್ರ:
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಕ್ಯಾಪ್ ಧರಿಸಿ 14 ವರ್ಷಗಳು ಕಳೆದಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಈ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನಾನು ಜೀವನಪರ್ಯಂತ ಸಾಗಿಸುವ ಪಾಠಗಳನ್ನು ಕಲಿಸಿದೆ.
ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಆಳವಾದ ವೈಯಕ್ತಿಕ ಅಂಶವಿದೆ. ಶಾಂತವಾದ ಜಂಜಾಟ, ದೀರ್ಘ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು. ಇವೆಲ್ಲವೂ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ನಾನು ಈ ಸ್ವರೂಪದಿಂದ ದೂರ ಸರಿಯುತ್ತಿರುವುದು ಸುಲಭದ ನಿರ್ಧಾರವಲ್ಲ. ಆದರೆ ಇದುವೇ ಸರಿ ಎಂದು ಅನಿಸುತ್ತದೆ.
ಇದನ್ನೂ ಓದಿ: VIDEO: ಸ್ಲಿಪ್ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್
ನಾನು ಹೊಂದಿದ್ದ ಎಲ್ಲವನ್ನೂ ಟೆಸ್ಟ್ ಕ್ರಿಕೆಟ್ಗೆ ನೀಡಿದ್ದೇನೆ. ಅಲ್ಲದೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಅದರಿಂದ ನನಗೆ ದಕ್ಕಿದೆ. ನನ್ನೊಂದಿಗೆ ಆಡಿದ ಪ್ರತಿಯೊಬ್ಬರಿಗೂ ಕೃತಜ್ಣತೆ ಅರ್ಪಿಸುತ್ತೇನೆ. ಅಲ್ಲದೆ ಯಾವತ್ತಿದ್ದರೂ ನಾನು ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ಹಿಂತಿರುಗಿ ನೋಡುತ್ತೇನೆ #269, ಸೈನ್ ಆಫ್. ಎಂದು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.
Published On - 11:56 am, Mon, 12 May 25
