ಯೋ-ಯೋ ಹಾಗೂ ಡೆಕ್ಸಾ ಪರೀಕ್ಷೆ ಎಂದರೇನು? ಬಿಸಿಸಿಐ ಇದನ್ನು ಕಡ್ಡಾಯ ಮಾಡಿರುವುದ್ಯಾಕೆ?
Team India Review Meeting: ಬಿಸಿಸಿಐ ಸಭೆಯ ಪ್ರಮುಖವಾಗಿ 7 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ 7 ನಿರ್ಧಾರಗಳಲ್ಲಿ ಪ್ರಮುಖವಾದ ಒಂದು ನಿರ್ಧಾರವೆಂದರೆ ಅದು ಯೋ-ಯೋ ಪರೀಕ್ಷೆ ಮತ್ತು ಡೆಕ್ಸಾ ಸ್ಕ್ಯಾನಿಂಗ್.
2022ರಲ್ಲಿ ಟೀಂ ಇಂಡಿಯಾದ (Team India) ಪ್ರದರ್ಶನ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಹೀಗಾಗಿ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಸಿಸಿಐ (BCCI) ಹೊಸ ವರ್ಷದ ಮೊದಲ ದಿನದಿಂದಲೇ ತಯಾರಿ ನಡೆಸಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಜನವರಿ 1ರಂದು ಪರಿಶೀಲನಾ ಸಭೆ ನಡೆಸಲಾಗಿದ್ದು, ಹೊಸ ವರ್ಷದಲ್ಲಿಯೇ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಕೋಚ್ ರಾಹುಲ್ ದ್ರಾವಿಡ್ (Rahul Dravid), ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಮಂಡಳಿಯ ಪರಿಶೀಲನಾ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪ್ರಮುಖವಾಗಿ 2022ರಲ್ಲಿ ಟೀಂ ಇಂಡಿಯಾದ ಪ್ರದರ್ಶನ, 2022ರ ಟಿ20 ವಿಶ್ವಕಪ್‌ನಲ್ಲಿನ ಸೋಲಿನ ಕುರಿತು ಚರ್ಚಿಸಲಾಗಿದೆ. ಇದಾದ ಬಳಿಕ ಟೀಂ ಇಂಡಿಯಾ ಆಟಗಾರರ ಮೇಲೆ ಪರಿಣಾಮ ಬೀರುವ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಈ ಸಭೆಯ ಪ್ರಮುಖವಾಗಿ 7 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ 7 ನಿರ್ಧಾರಗಳಲ್ಲಿ ಪ್ರಮುಖವಾದ ಒಂದು ನಿರ್ಧಾರವೆಂದರೆ ಅದು ಯೋ-ಯೋ ಪರೀಕ್ಷೆ ಮತ್ತು ಡೆಕ್ಸಾ ಸ್ಕ್ಯಾನಿಂಗ್. ಹೀಗಾಗಿ ಈ ಎರಡು ಪರೀಕ್ಷೆಗಳ ಹೆಚ್ಚಾಗಿ ಅರಿಯದ ಕೆಲವರಲ್ಲಿ ಗೊಂದಲ ಉಂಟಾಗಿದೆ. ಅಂತಹವರಿಗೆ ಯೋ-ಯೋ ಮತ್ತು ಡೆಕ್ಸಾ ಪರೀಕ್ಷೆ ಎಂದರೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
BCCI: ಏಕದಿನ ವಿಶ್ವಕಪ್ಗೆ 20 ಆಟಗಾರರ ಆಯ್ಕೆ; ಮಹತ್ವದ ಸಭೆಯಲ್ಲಿ ಎನ್ಸಿಎಗೆ ವಾರ್ನಿಂಗ್ ನೀಡಿದ ಬಿಸಿಸಿಐ
ಯೋ-ಯೋ ಪರೀಕ್ಷೆ ಎಂದರೇನು?
ಯೋ-ಯೋ ಪರೀಕ್ಷೆಯಲ್ಲಿ ಒಟ್ಟು 23 ಹಂತಗಳಿವೆ. ಕ್ರಿಕೆಟಿಗರಿಗೆ ಇದು 5ನೇ ಹಂತದಿಂದ ಪ್ರಾರಂಭವಾಗುತ್ತದೆ. ಇದರ ಪ್ರಕಾರ ಪ್ರತಿಯೊಬ್ಬ ಆಟಗಾರನು ಮೊದಲು 20 ಮೀಟರ್‌ನಷ್ಟು ಅಂತರವನ್ನು ಕ್ರಮಿಸಿ, ಬಳಿಕ ಆರಂಭಿಸಿದ ಜಾಗಕ್ಕೆ ಮತ್ತೆ ವಾಪಸ್ ಬರಬೇಕು. ಅಂದರೆ ಒಟ್ಟು 40 ಮೀಟರ್ ದೂರವನ್ನು ನಿಗದಿತ ಸಮಯದೊಳಗೆ ಓಡಿ ಮುಗಿಸಿರಬೇಕು. ಹಂತಗಳ ಸಂಖ್ಯೆ ಹೆಚ್ಚಾದಂತೆ, ಈ ದೂರವನ್ನು ಕ್ರಮಿಸುವ ಸಮಯವೂ ಕಡಿಮೆಯಾಗುತ್ತದೆ. ಇದರ ಆಧಾರದ ಮೇಲೆ, ಸ್ಕೋರ್ ಅನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಲ್ಲಿ ನಿರ್ಧರಿಸಲಾಗುತ್ತದೆ. ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಪಕ್ಷ 16.1 ಅಂಕಗಳನ್ನು ಪಡೆಯಲೇಬೇಕು. ಇದಕ್ಕಿಂತ ಕಡಿಮೆ ಅಂಕವನ್ನು ಗಳಿಸಿದವರನ್ನು ಅನುತೀರ್ಣ ಎಂದು ನಿರ್ಧರಿಸಲಾಗುತ್ತದೆ.
ಡೆಕ್ಸಾ ಪರೀಕ್ಷೆ ಎಂದರೇನು?
ಆಟಗಾರರ ಫಿಟ್ನೆಸ್ ತಪಾಸಣೆಯನ್ನು ಸ್ವಲ್ಪ ಹೆಚ್ಚು ವೈಜ್ಞಾನಿಕವಾಗಿ ಮಾಡಲು ಫಿಟ್ನೆಸ್ ಪ್ರೋಗ್ರಾಂನಲ್ಲಿ ಡೆಕ್ಸಾ ಪರೀಕ್ಷೆಯನ್ನು ಸೇರಿಸಲಾಗಿದೆ. ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುವ ಪರೀಕ್ಷೆಯನ್ನು ಡೆಕ್ಸಾ ಸ್ಕ್ಯಾನ್ ಎಂದೂ ಕರೆಯುತ್ತಾರೆ. ಇದು ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್-ರೇ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಯಾವ ವ್ಯಕ್ತಿ ಮೂಳೆ ಮುರಿತಕ್ಕೆ ತುತ್ತಾಗುವ ಸಾಧ್ಯತೆ ಇದೆ, ಎಂಬುದನ್ನು ಬಹಳ ನಿಖರವಾಗಿ ಪತ್ತೆ ಹಚ್ಚಲಾಗುತ್ತದೆ. ಅಲ್ಲದೆ, ಈ ಪರೀಕ್ಷೆಯಲ್ಲಿ ಆಟಗಾರನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಕೊಬ್ಬಿನ ಅಂಶವಿದೆ ಎಂಬುದನ್ನು ತಿಳಿಯಬಹುದಾಗಿದೆ. ಈ 10 ನಿಮಿಷಗಳ ಪರೀಕ್ಷೆಯಿಂದ, ಆಟಗಾರ ಎಷ್ಟು ಫಿಟ್ ಆಗಿದ್ದಾನೆ ಎಂದು ಅಂದಾಜಿಸಲಾಗುತ್ತದೆ. ಈ ಪರೀಕ್ಷೆಯನ್ನು ಎಕ್ಸ್ ರೇ ಸಹಾಯದಿಂದ ಮಾಡಲಾಗುತ್ತದೆ. ಅಲ್ಲದೆ ಇದು ನೋವಿಲ್ಲದ ಪರೀಕ್ಷೆಯಾಗಿದ್ದು ಕ್ಷ-ಕಿರಣಕ್ಕೆ ಬಳಸುವ ರೇಡಿಯೇಷನ್ ಡೋಸ್ ಕೂಡಾ ಬಹಳ ಕನಿಷ್ಠ ಪ್ರಮಾಣದಲ್ಲಿರುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Sun, 1 January 23