ದಕ್ಷಿಣ ಆಫ್ರಿಕಾ ಗೆಲುವಿನಿಂದ ಬದಲಾದ WTC ಲೆಕ್ಕಾಚಾರ: ಭಾರತದ ಫೈನಲ್ ಹಾದಿ ಮತ್ತಷ್ಟು ಕಠಿಣ
ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮುಕ್ತಾಯದ ನಂತರ WTC 2025-27 ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಗಳಾಗಿವೆ. ಆಫ್ರಿಕಾ 2ನೇ ಸ್ಥಾನಕ್ಕೇರಿದರೆ, ಆಸ್ಟ್ರೇಲಿಯಾ 3ಕ್ಕೆ ಕುಸಿದಿದೆ. ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ. ಭಾರತ 4ನೇ ಸ್ಥಾನದಲ್ಲಿದ್ದು, ಫೈನಲ್ ಪ್ರವೇಶಿಸಲು ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಕಡ್ಡಾಯ. ಅದರಲ್ಲೂ ನ್ಯೂಜಿಲೆಂಡ್ ಸರಣಿ ನಿರ್ಣಾಯಕವಾಗಿದ್ದು, ತಪ್ಪುಗಳಿಗೆ ಅವಕಾಶವಿಲ್ಲ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಿದ ಹರಿಣಗಳ ಪಡೆ 176 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲದೆ, ಈ ಗೆಲುವಿನ ಪರಿಣಾಮವಾಗಿ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲೂ ಭಾರೀ ಬದಲಾವಣೆಯಾಗಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ಇದೀಗ ಎರಡನೇ ಸ್ಥಾನಕ್ಕೇರಿದೆ.
ನಂಬರ್ 1 ಪಟ್ಟಕ್ಕೇರಿದ ನ್ಯೂಜಿಲೆಂಡ್
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಫಲಿತಾಂಶದ ಬಳಿಕ WTC 2025-27ರ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 2 ಸ್ಥಾನ ಕುಸಿದು ಮೂರನೇ ಸ್ಥಾನಕ್ಕೆ ತಲುಪಿದೆ. ಕಾಂಗರೂ ಪಡೆಯ ಗೆಲುವಿನ ಶೇಕಡಾವಾರು ಪ್ರಮಾಣ ಇದೀಗ 69.23ಕ್ಕೆ ಇಳಿದಿದೆ. ಇತ್ತ ಈ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನಕ್ಕೇರಿದೆ. ಬವುಮಾ ಪಡೆಯ ಗೆಲುವಿನ ಶೇಕಡಾವಾರು ಪ್ರಮಾಣ 71.43ಕ್ಕೆ ಹೆಚ್ಚಳವಾಗಿದೆ.
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಆಡಿರುವ 13 ಪಂದ್ಯಗಳಲ್ಲಿ 9ರಲ್ಲಿ ಗೆಲುವು ದಾಖಲಿಸಿದ್ದು, 4 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ನ್ಯೂಜಿಲೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕಿವೀಸ್ ಪಡೆ ಸದ್ಯ ಶೇ.72.22ರ ಗೆಲುವಿನ ಪ್ರಮಾಣ ಹೊಂದಿದೆ.

ನಾಲ್ಕನೇ ಸ್ಥಾನದಲ್ಲಿ ಭಾರತ
ಇನ್ನು ಭಾರತ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ಈವರೆಗೆ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಗೆಲುವು ಸಾಧಿಸಿದೆ. 4 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, 2 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಭಾರತದ ಗೆಲುವಿನ ಶೇಕಡಾವಾರು ಪ್ರಮಾಣ ಶೇ.51.52ರಷ್ಟಿದೆ.
ಭಾರತಕ್ಕೆ ಕಠಿಣ ಸವಾಲು
ಕೊಲಂಬೊದಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಭಾರತ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ 11 ಪಂದ್ಯಗಳಿಂದ 68 ಅಂಕ ಹಾಗೂ ಶೇ.51.52ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಟೀಂ ಇಂಡಿಯಾ ಇನ್ನುಳಿದ ಏಳು ಪಂದ್ಯಗಳಿಂದ ಗರಿಷ್ಠ 84 ಅಂಕಗಳನ್ನು ಗಳಿಸಬಹುದು. ಶೇ.64ರಷ್ಟು ಗೆಲುವಿನ ಶೇಕಡಾವಾರು ತಲುಪಬೇಕಾದರೆ ಕನಿಷ್ಠ ಐದು ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು. ಇಲ್ಲವೇ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು. ನ್ಯೂಜಿಲೆಂಡ್ ಪ್ರವಾಸ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಭಾರತ ತಂಡ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲನುಭವಿಸುವಂತಿಲ್ಲ. ಇಲ್ಲವಾದರೆ ಫೈನಲ್ ಪ್ರವೇಶದ ಲೆಕ್ಕಾಚಾರ ಮತ್ತಷ್ಟು ಕಠಿಣವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಆಫ್ರಿಕಾ; ಅಗ್ರಸ್ಥಾನ ಕಳೆದುಕೊಂಡ ಕಾಂಗರೂಗಳು
ನ್ಯೂಜಿಲೆಂಡ್ನಲ್ಲಿ ಭಾರತದ ಭವಿಷ್ಯ ನಿರ್ಧಾರ
ಭಾರತ ತಂಡದ ಫೈನಲ್ ಕನಸು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಆದರೆ ಮುಂದಿನ ಕೆಲವು ವಾರಗಳು ಟೀಂ ಇಂಡಿಯಾದ ಭವಿಷ್ಯ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಮೊದಲು ನ್ಯೂಜಿಲೆಂಡ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದರೆ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಒತ್ತಡ ಹೆಚ್ಚಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ತವರಿನ ಪರಿಸ್ಥಿತಿಗಳು ಅನುಕೂಲಕರವಾಗಬಹುದು. ಅದರಲ್ಲೂ ಸ್ಪಿನ್ ಬೌಲರ್‌ಗಳಿಗೆ ನೆರವಾಗುವ ಪಿಚ್‌ಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕುವ ಅವಕಾಶವಿದೆ. ಆದರೆ ಅದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧ ಉತ್ತಮ ಫಲಿತಾಂಶ ಪಡೆಯುವುದು ಅತ್ಯಗತ್ಯ.
ಟೀಂ ಇಂಡಿಯಾ ಪಾಲಿಗೆ ನಿರ್ಣಾಯಕ
ಸದ್ಯದ ಲೆಕ್ಕಾಚಾರದ ಪ್ರಕಾರ ಭಾರತಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ಕೇವಲ ಶೇ.3ರಷ್ಟಿದೆ. ಹೀಗಾಗಿ ಉಳಿದ ಪ್ರತಿಯೊಂದು ಪಂದ್ಯವೂ ಟೀಂ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದೆ. ನ್ಯೂಜಿಲೆಂಡ್ ವಿರುದ್ಧ ಉತ್ತಮ ಆರಂಭ ಪಡೆಯಲು ಸಾಧ್ಯವಾದರೆ ಫೈನಲ್ ರೇಸ್‌ನಲ್ಲಿ ಭಾರತದ ಆತ್ಮವಿಶ್ವಾಸ ಹೆಚ್ಚಾಗಬಹುದು. ತಪ್ಪುಗಳಿಗೆ ಅವಕಾಶವೇ ಇಲ್ಲದ ಪರಿಸ್ಥಿತಿಯಲ್ಲಿರುವ ಶುಭಮನ್ ಗಿಲ್ ಪಡೆ, ಉಳಿದ ಪಂದ್ಯಗಳಲ್ಲಿ ಗೆಲುವಿನ ಹಾದಿಗೆ ಮರಳಬೇಕಿದೆ. ಇಲ್ಲವಾದರೆ ಸತತವಾಗಿ WTC ಫೈನಲ್ ಆಡುವ ಭಾರತದ ಕನಸು ಭಗ್ನವಾಗುವ ಸಾಧ್ಯತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Sat, 31 October 26




