ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ!
ಮೈದಾನದ ಹಸಿರು ಹುಲ್ಲಿನ ಮೇಲೆ ಕಾಲಿನಿಂದಲೇ ಕಾವ್ಯ ಬರೆದ ಮಾಂತ್ರಿಕನಿಗೆ ಕೊನೆಗೂ ವಿದಾಯದ ಕ್ಷಣ ಬಂದೊದಗಿದೆ! ಚೆಂಡಿನೊಂದಿಗೆ ಚದುರಂಗವಾಡಿ ಜಗತ್ತನ್ನೇ ಗೆದ್ದ ಜಾದೂಗಾರ, ತನ್ನ ಇಪ್ಪತ್ತೊಂದು ವರ್ಷಗಳ ಭವ್ಯ ಸಾಮ್ರಾಜ್ಯಕ್ಕೆ ಕಣ್ಣೀರಲ್ಲೇ ವಿದಾಯ ಹಾಡಿದ್ದಾನೆ. ಇದರೊಂದಿಗೆ, ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಎಂಬ ಸುವರ್ಣ ಯುಗಾಂತ್ಯವಾದಂತಾಗಿದೆ.

ವಿಶ್ವ ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ, ತಮ್ಮ 21 ವರ್ಷಗಳ ಭವ್ಯ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಭಾವುಕ ತೆರೆ ಎಳೆದಿದ್ದಾರೆ. ಬ್ಯೂನಸ್ ಐರಿಸ್‌ನ ತುಂಬಿ ತುಳುಕುತ್ತಿದ್ದ ‘ಎಸ್ಟಾಡಿಯೊ ಮೊನುಮೆಂಟಲ್’ ಕ್ರೀಡಾಂಗಣದಲ್ಲಿ ನಡೆದ ಬೆನಿನ್ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 3-0 ಗೋಲುಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಕಾಲ್ಚೆಂಡಿನ ಚುತುರ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ.
‘ದಿ ಲಾಸ್ಟ್ ಟ್ಯಾಂಗೋ’ ಪಂದ್ಯದ ಮುಖ್ಯಾಂಶಗಳು:
39 ವರ್ಷದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ತಮ್ಮ ಕೊನೆಯ ಪಂದ್ಯದಲ್ಲೂ ಎಂದಿನ ಚಮತ್ಕಾರವನ್ನು ಪ್ರದರ್ಶಿಸಿದರು. ಇಡೀ ಪಂದ್ಯ ಅವರ ಅದ್ಭುತ ಆಟಕ್ಕೆ ಸಾಕ್ಷಿಯಾಯಿತು:
- ಮೊದಲ ಅಸಿಸ್ಟ್ (48ನೇ ನಿಮಿಷ): ಮೆಸ್ಸಿ ನೀಡಿದ ನಿಖರವಾದ ಕಾರ್ನರ್ ಕಿಕ್ ಅನ್ನು ಹಿರಿಯ ಆಟಗಾರ ನಿಕೋಲಸ್ ಒಟಾಮೆಂಡಿ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾ ತಂಡದ ಗೋಲಿನ ಖಾತೆ ತೆರೆದರು.
- ಎರಡನೇ ಅಸಿಸ್ಟ್ (61ನೇ ನಿಮಿಷ): ಪ್ಲೇಮೇಕರ್ ಆಗಿ ಮಿಂಚಿದ ಮೆಸ್ಸಿ, ಯುವ ಆಟಗಾರ ನಿಕೋ ಪಾಜ್ ಅವರಿಗೆ ಎರಡನೇ ಗೋಲು ಗಳಿಸಲು ಅತ್ಯುತ್ತಮ ಪಾಸ್ ನೀಡಿದರು.
- ಮೆಸ್ಸಿ ಮ್ಯಾಜಿಕ್ ಗೋಲು (71ನೇ ನಿಮಿಷ): ಕ್ರೀಡಾಂಗಣದಲ್ಲಿದ್ದ 85,000ಕ್ಕೂ ಹೆಚ್ಚು ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಾ, ಮೆಸ್ಸಿ ಪೆನಾಲ್ಟಿಯನ್ನು ಅದ್ಭುತ ಗೋಲಾಗಿ ಪರಿವರ್ತಿಸಿ ತಮ್ಮ ವಿದಾಯವನ್ನು ಸ್ಮರಣೀಯವಾಗಿಸಿದರು.
ವೃತ್ತಿಜೀವನದ ಅಂಕಿ-ಅಂಶಗಳು:
ಈ ಪಂದ್ಯದೊಂದಿಗೆ ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ತಮ್ಮ ಐತಿಹಾಸಿಕ ಪಯಣವನ್ನು ಮುಗಿಸಿದ್ದಾರೆ. ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಮೈಲಿಗಲ್ಲುಗಳು ಹೀಗಿವೆ:
- ಒಟ್ಟು ಪಂದ್ಯಗಳು: 208 ಕ್ಯಾಪ್‌ಗಳು
- ಒಟ್ಟು ಗೋಲುಗಳು: 126 ಗೋಲುಗಳು
- ಅಸಿಸ್ಟ್‌ಗಳು: 70
ಮೆಸ್ಸಿ ಗೆದ್ದ ಪ್ರಮುಖ ಟ್ರೋಫಿಗಳು:
- 2022ರ ಫಿಫಾ ವಿಶ್ವಕಪ್
- ಎರಡು ಕೋಪಾ ಅಮೆರಿಕ ಟ್ರೋಫಿಗಳು (2021, 2024)
- 2022ರ ಫೈನಲಿಸಿಮಾ
- 2008ರ ಒಲಿಂಪಿಕ್ ಚಿನ್ನದ ಪದಕ
ಭಾವುಕ ವಿದಾಯ:
ಈ ಪಂದ್ಯದ ನಂತರ ನಡೆದ ಅದ್ಧೂರಿ ವಿದಾಯ ಸಮಾರಂಭದಲ್ಲಿ ಮಾತನಾಡಿದ ಮೆಸ್ಸಿ, ಅರ್ಜೆಂಟೀನಾ ಅಭಿಮಾನಿಗಳಿಗೆ ಭಾವುಕರಾಗಿ ಧನ್ಯವಾದ ತಿಳಿಸಿದರು.
“ನನ್ನ ಜೀವನವಿಡೀ ಅರ್ಜೆಂಟೀನಾ ದೇಶಕ್ಕಾಗಿ ಆಡುತ್ತಲೇ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. 20 ವರ್ಷಗಳಿಗೂ ಹೆಚ್ಚು ಕಾಲ ಈ ಜೆರ್ಸಿಯನ್ನು ಧರಿಸಿ ದೇಶವನ್ನು ಪ್ರತಿನಿಧಿಸಿರುವುದು ನನಗೆ ಸಂದ ಅತ್ಯಂತ ದೊಡ್ಡ ಗೌರವ. ಅರ್ಜೆಂಟೀನಾ ಪರ ಆಡುವುದಕ್ಕಿಂತ ಸುಂದರವಾದ ಭಾವನೆ ಜಗತ್ತಿನಲ್ಲಿ ಮತ್ತೊಂದಿಲ್ಲ” ಎಂದರು.
ಮೈದಾನವನ್ನು ತೊರೆಯಲು ತಮಗೆ ಮನಸ್ಸಿಲ್ಲ ಎಂಬುದನ್ನು ವ್ಯಕ್ತಪಡಿಸುತ್ತಾ, “ಖಂಡಿತವಾಗಿಯೂ ಇದು ನನ್ನ ಜೀವನದ ಮತ್ತು ನನ್ನ ವೃತ್ತಿಜೀವನದ ಅತ್ಯಂತ ದುಃಖದ ದಿನಗಳಲ್ಲಿ ಒಂದು. ಏಕೆಂದರೆ ನನಗೆ ಈ ಮೈದಾನವನ್ನು ಬಿಟ್ಟು ಹೋಗಲು ಇಷ್ಟವಿಲ್ಲ, ಈ ಜಾಗವನ್ನು ತೊರೆಯಲು ಮನಸ್ಸಾಗುತ್ತಿಲ್ಲ. ಆದರೆ ಸಮಯ ತುಂಬಾ ವೇಗವಾಗಿ ಓಡುತ್ತಿದೆ ಎಂಬುದು ನನಗೆ ಗೊತ್ತು” ಎಂದು ಬೇಸರ ಹಂಚಿಕೊಂಡರು.
ತಮ್ಮ ಸಹ ಆಟಗಾರರಿಗೆ ಧನ್ಯವಾದ ತಿಳಿಸಿದ ಮೆಸ್ಸಿ, “ನೀವೆಲ್ಲರೂ ನನ್ನ ಕನಸುಗಳನ್ನು ನನಸು ಮಾಡಿದ್ದೀರಿ. ವಿಶ್ವಕಪ್, ಕೋಪಾ ಅಮೆರಿಕ, ಫೈನಲಿಸಿಮಾ ಹೀಗೆ ಎಲ್ಲವನ್ನೂ ಗೆಲ್ಲಲು ನನಗೆ ಸಹಾಯ ಮಾಡಿದ್ದೀರಿ. ನಾವು ಎಂದಿಗೂ ಹೋರಾಟವನ್ನು ನಿಲ್ಲಿಸಲಿಲ್ಲ. ನಾನು ಯೋಧರ ಮಧ್ಯೆ ಇದ್ದೆ ಎಂಬ ಹೆಮ್ಮೆ ನನಗಿದೆ. ನಾನು ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಭಾವುಕರಾದರು.
ಇದನ್ನೂ ಓದಿ: ಭಾರತ ಟಿ20 ತಂಡದಿಂದ ಐವರು ಔಟ್!
ಮುಂದಿನ ಪಯಣ ಎತ್ತ?
ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಜೆರ್ಸಿಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳದಿದ್ದರೂ, ಕ್ಲಬ್ ಫುಟ್‌ಬಾಲ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ. ಸದ್ಯ ಅವರು ಅಮೆರಿಕದ ಇಂಟರ್ ಮಿಯಾಮಿ ಕ್ಲಬ್ ಪರ ಆಡುತ್ತಿದ್ದು, ಈ ಒಪ್ಪಂದವು 2028ರ ವರೆಗೆ ಮುಂದುವರೆಯಲಿದೆ. ಹೀಗಾಗಿ ಇನ್ನೆರಡು ವರ್ಷ ಇಂಟರ್ ಮಿಯಾಮಿ ತಂಡದಲ್ಲಿ ಮೆಸ್ಸಿ ಮ್ಯಾಜಿಕ್ ನೋಡಬಹುದು.




