IND vs SL: 2ನೇ ಟೆಸ್ಟ್‌ಗೂ ಮುನ್ನ ಶ್ರೀಲಂಕಾ ತಂಡಕ್ಕೆ ಹೊಸ ಕೋಚ್ ನೇಮಕ
India vs Sri Lanka Test: ಭಾರತದ ವಿರುದ್ಧದ ಎರಡನೇ ಟೆಸ್ಟ್‌ಗೂ ಮುನ್ನ ಶ್ರೀಲಂಕಾ ತಂಡ ಹಶನ್ ತಿಲಕರತ್ನೆ ಅವರನ್ನು ನೂತನ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. 1996ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ತಿಲಕರತ್ನೆ, 2027ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸುವುದು ಇವರ ಪ್ರಮುಖ ಜವಾಬ್ದಾರಿಯಾಗಿದೆ. ಇದು ಶ್ರೀಲಂಕಾದ ಕ್ರಿಕೆಟ್ ಭವಿಷ್ಯಕ್ಕೆ ಮಹತ್ವದ ಹೆಜ್ಜೆಯಾಗಿದೆ.

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಸೋತಿರುವ ಆತಿಥೇಯ ಶ್ರೀಲಂಕಾ ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಸೋಲಿನಿಂದ ಪಾರಾಗಲು ನೋಡುತ್ತಿದೆ. ಈ ನಡುವೆ ಶ್ರೀಲಂಕಾ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ತಂಡಕ್ಕೆ ಹೊಸ ಬ್ಯಾಟಿಂಗ್ ಕೋಚ್ ನೇಮಕವಾಗಿದೆ. ತಂಡದ ಮಾಜಿ ಆಟಗಾರ ಹಸನ್ ತಿಲಕರತ್ನೆ (Hashan Tillakaratne) ಅವರನ್ನು ಹಿರಿಯ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಆಗಸ್ಟ್ 20 ರಂದು ಈ ಹುದ್ದೆಗೇರಿರುವ ಹಸನ್ ತಿಲಕರತ್ನೆ ಅವರ ಅಧಿಕಾರಾವಧಿ ಡಿಸೆಂಬರ್ 31, 2027 ರವರೆಗೆ ಇರಲಿದೆ. ಇದರರ್ಥ ಅವರು ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲೂ ತಂಡದ ಬ್ಯಾಟಿಂಗ್ ಕೋಚ್ ಆಗಿರಲಿದ್ದಾರೆ.
ವ್ಯಾಪಕ ತರಬೇತಿ ಅನುಭವ
ಹಸನ್ ತಿಲಕರತ್ನೆ 1996 ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ತಂಡದ ಪರ 250 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತಿಲಕರತ್ನೆ ವ್ಯಾಪಕ ತರಬೇತಿ ಅನುಭವವನ್ನು ಹೊಂದಿದ್ದಾರೆ. ಅವರು ಈ ಹಿಂದೆ ಶ್ರೀಲಂಕಾ ಪುರುಷರ ರಾಷ್ಟ್ರೀಯ ತಂಡದ ಬ್ಯಾಟಿಂಗ್ ತರಬೇತುದಾರರಾಗಿ ಮತ್ತು ಮಹಿಳಾ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಬಾಂಗ್ಲಾದೇಶ ಮಹಿಳಾ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುತ್ತಿರುವ ಏಕದಿನ ವಿಶ್ವಕಪ್ ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಎಲ್ಲಾ ತಂಡಗಳು ಈಗಾಗಲೇ ಈ ಪಂದ್ಯಾವಳಿಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಈ ಸಿದ್ಧತೆಯ ಭಾಗವಾಗಿ ಶ್ರೀಲಂಕಾ ಕ್ರಿಕೆಟ್ ಹಸನ್ ತಿಲಕರತ್ನೆ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿದೆ.
IND vs SL: ರಾಹುಲ್, ಜಡೇಜಾ ಬಿಟ್ಟರೆ ಉಳಿದವರು ಕೊಲಂಬೊದಲ್ಲಿ ಆಡಿಲ್ಲ..!
ಹಸನ್ ತಿಲಕರತ್ನೆ ವೃತ್ತಿಜೀವನ
1986 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಹಸನ್ ತಿಲಕರತ್ನೆ 2004 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 1996 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಅವರು 83 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 131 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳು ಮತ್ತು 20 ಅರ್ಧಶತಕಗಳು ಸೇರಿದಂತೆ 4545 ರನ್ ಬಾರಿಸಿದ್ದಾರೆ. ಹಾಗೆಯೇ 200 ಏಕದಿನ ಪಂದ್ಯಗಳನ್ನು ಆಡಿರುವ ಹಶನ್ ತಿಲಕರತ್ನೆ 168 ಇನ್ನಿಂಗ್ಸ್‌ಗಳಲ್ಲಿ 3789 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು 13 ಅರ್ಧಶತಕಗಳು ಸೇರಿದ್ದು, ಆರು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Fri, 21 August 26




