AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಐಪಿಎಲ್ ಮಿನಿ ಹರಾಜು? ಇದರ ನಿಯಮಗಳೇನು?

ಐಪಿಎಲ್​ನಲ್ಲಿ ಮೆಗಾ ಹರಾಜು ಇಡೀ ತಂಡದ ಚಿತ್ರಣವನ್ನೇ ಬದಲಿಸಿದರೆ, ಮಿನಿ ಹರಾಜು ತಂಡಗಳ ಅದೃಷ್ಟವನ್ನೇ ಬದಲಿಸುವ ಶಕ್ತಿ ಹೊಂದಿದೆ. ಕೇವಲ ಒಂದು ದಿನದ ಅವಧಿಯಲ್ಲಿ ಮುಕ್ತಾಯಗೊಳ್ಳುವ ಈ ಚುಟುಕು ಹರಾಜು ಪ್ರಕ್ರಿಯೆಯು ಮೇಲ್ನೋಟಕ್ಕೆ ಸಣ್ಣದಾಗಿ ಕಂಡರೂ, ಫ್ರಾಂಚೈಸಿಗಳ ಪಾಲಿಗೆ ಅತ್ಯಂತ ಲೆಕ್ಕಾಚಾರದ ವೇದಿಕೆಯಾಗಿದೆ.

ಏನಿದು ಐಪಿಎಲ್ ಮಿನಿ ಹರಾಜು? ಇದರ ನಿಯಮಗಳೇನು?
Ipl AuctionImage Credit source: x.com
ಝಾಹಿರ್ ಯೂಸುಫ್
|

Updated on:Sep 24, 2026 | 8:03 AM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2027) 20ನೇ ಆವೃತ್ತಿಯ ಆಟಗಾರರ ಹರಾಜಿಗಾಗಿ ಸ್ಥಳ ನಿಗದಿಯಾಗಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯು ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಗೋವಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. 2025 ರಲ್ಲಿ ಮೆಗಾ ಹರಾಜು ನಡೆದಿರುವುದರಿಂದ, ಈ ಬಾರಿ ಮಿನಿ ಹರಾಜು ಜರುಗಲಿದೆ.

  • ಮೆಗಾ ಹರಾಜು ಪ್ರಕ್ರಿಯೆ 3 ವರ್ಷಗಳಿಗೊಮ್ಮೆ ನಡೆಯಲಿದೆ.
  • ಇದರ ನಡುವಣ ಅವಧಿಯಲ್ಲಿ ಮಿನಿ ಹರಾಜು ನಡೆಸಲಾಗುತ್ತದೆ.
  • 2028 ರಲ್ಲಿ ಮತ್ತೆ ಮೆಗಾ ಹರಾಜು ಜರುಗಲಿದೆ.

ಏನಿದು ಮಿನಿ ಹರಾಜು?

ಮಿನಿ ಹರಾಜು ಎಂದರೆ ಸಣ್ಣ ಮಟ್ಟದ ಆಟಗಾರರ ಹರಾಜು ಪ್ರಕ್ರಿಯೆ. ಇಲ್ಲಿ ಫ್ರಾಂಚೈಸಿಗಳು ಇಂತಿಷ್ಟೇ ಆಟಗಾರರನ್ನು ಉಳಿಸಿಕೊಳ್ಳಬೇಕು ಅಥವಾ ಇಂತಿಷ್ಟೇ ಆಟಗಾರರನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕು ಎಂಬ ಯಾವುದೇ ಕಠಿಣ ನಿಯಮಗಳಿರುವುದಿಲ್ಲ. ಆಟಗಾರರನ್ನು ತಂಡದಿಂದ ಕೈಬಿಡುವುದು ಕೂಡ ಸಂಪೂರ್ಣವಾಗಿ ಆಯಾ ಫ್ರಾಂಚೈಸಿಗಳ ನಿರ್ಧಾರಕ್ಕೆ ಬಿಟ್ಟಿದ್ದಾಗಿರುತ್ತದೆ. ಅಂದರೆ ಇಲ್ಲಿ ರಿಲೀಸ್ ಹಾಗೂ ರಿಟೈನ್​ ಕಡ್ಡಾಯವಲ್ಲ. ಹಾಗಾಗಿ, ಈ ಮಿನಿ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಿವೆ.

ಮಿನಿ ಹರಾಜಿನ ನಿಯಮಗಳೇನು?

ರಿಟೆನ್ಷನ್ ಮಿತಿ ಇರುವುದಿಲ್ಲ: ಮೆಗಾ ಹರಾಜಿನಂತೆ ಇಲ್ಲಿ ಇಷ್ಟೇ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಮಿತಿ ಇರುವುದಿಲ್ಲ. ಫ್ರಾಂಚೈಸಿಗಳು ತಮಗೆ ಅಗತ್ಯವಿದ್ದರೆ ತಮ್ಮ ಇಡೀ ತಂಡವನ್ನು ಬೇಕಿದ್ದರೂ ಉಳಿಸಿಕೊಳ್ಳಬಹುದು.

ಆರ್​ಟಿಎಂ ಇರುವುದಿಲ್ಲ: ಮಿನಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಲು ಅವಕಾಶ ಇರುವುದಿಲ್ಲ. ಏಕೆಂದರೆ ತಂಡಗಳು ಹರಾಜಿಗೂ ಮುನ್ನವೇ ತಮಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಮುಕ್ತ ಅವಕಾಶ ಹೊಂದಿರುತ್ತವೆ.

ತಂಡದ ಗಾತ್ರದ ಮಿತಿ: ಹರಾಜಿನ ನಂತರ ಪ್ರತಿ ತಂಡದಲ್ಲಿ ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರು ಇರಬೇಕು. ಇದರಲ್ಲಿ ಗರಿಷ್ಠ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ.

ಪರ್ಸ್ ಬ್ಯಾಲೆನ್ಸ್ ಮತ್ತು ಬಜೆಟ್: 2027ರ ಸೀಸನ್‌ಗಾಗಿ ಒಟ್ಟು ಸ್ಯಾಲರಿ ಕ್ಯಾಪ್ ಅನ್ನು ₹157 ಕೋಟಿಗೆ ಏರಿಸಲಾಗಿದೆ. ಮೆಗಾ ಹರಾಜಿನಲ್ಲಿ ಉಳಿದ ಹಣ, ತಂಡಗಳು ಬಿಡುಗಡೆ ಮಾಡಿದ ಆಟಗಾರರ ಒಟ್ಟು ಮೊತ್ತ ಹಾಗೂ ಬಿಸಿಸಿಐ ನೀಡುವ ಹೆಚ್ಚುವರಿ ಬಜೆಟ್ ಸೇರಿ ಆಯಾ ತಂಡದ ಹರಾಜಿನ ಪರ್ಸ್ ಮೌಲ್ಯ ನಿರ್ಧಾರವಾಗುತ್ತದೆ.

ವಿದೇಶಿ ಆಟಗಾರರ ಸ್ಯಾಲರಿ ಕ್ಯಾಪ್: ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಗರಿಷ್ಠ ಸಂಬಳದ ಮಿತಿ ಇರುತ್ತದೆ. ಹಿಂದಿನ ಮೆಗಾ ಹರಾಜಿನ ಅತ್ಯಧಿಕ ಬಿಡ್ (₹27 ಕೋಟಿ) ಅಥವಾ ಗರಿಷ್ಠ ರಿಟೆನ್ಷನ್ ಬೆಲೆ (₹18 ಕೋಟಿ) – ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಾತ್ರ ವಿದೇಶಿ ಆಟಗಾರ ಪಡೆಯಬಹುದು. ಒಂದು ವೇಳೆ ಹರಾಜಿನಲ್ಲಿ ಅದಕ್ಕಿಂತ ಹೆಚ್ಚು ಬಿಡ್ ಬಂದರೆ, ಹೆಚ್ಚುವರಿ ಹಣ ಬಿಸಿಸಿಐನ ಆಟಗಾರರ ಅಭಿವೃದ್ಧಿ ನಿಧಿಗೆ ಹೋಗುತ್ತದೆ.

ಅಲಭ್ಯತೆ ಮತ್ತು ನಿಷೇಧದ ನಿಯಮ: ಮಿನಿ ಹರಾಜಿನಲ್ಲಿ ಮಾರಾಟವಾದ ನಂತರ ಯಾವುದೇ ಆಟಗಾರ ಸೂಕ್ತ ಕಾರಣವಿಲ್ಲದೆ ಸೀಸನ್‌ನಿಂದ ಹಿಂದೆ ಸರಿದರೆ, ಅವರ ಮೇಲೆ 2 ವರ್ಷಗಳ ಕಾಲ ಐಪಿಎಲ್ ನಿಷೇಧ ಹೇರಲಾಗುತ್ತದೆ.

ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಳ್ಳುವಿಕೆ: ಪ್ರತಿ ಫ್ರಾಂಚೈಸಿಯು ತಮಗೆ ಅಗತ್ಯವಿರುವ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡು, ಉಳಿದವರನ್ನು ಬಿಡುಗಡೆ ಮಾಡಬಹುದು.

ಪರ್ಸ್​ ಮೊತ್ತ: ಬಿಡುಗಡೆಯಾದ ಆಟಗಾರರ ಒಟ್ಟು ಮೊತ್ತ ಮತ್ತು ಕಳೆದ ಹರಾಜಿನಲ್ಲಿ ಉಳಿದಿದ್ದ ಬಾಕಿ ಹಣವನ್ನು ಸೇರಿಸಿ ಪ್ರತಿ ತಂಡದ ಅಂತಿಮ ಪರ್ಸ್ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಈ ಹಣವನ್ನು ಬಳಸಿಕೊಂಡು ತಂಡಗಳು ತಮಗಿರುವ ಕೊರತೆಗಳನ್ನು ನೀಗಿಸಲು ಹೊಸ ಆಟಗಾರರನ್ನು ಖರೀದಿಸಲಿವೆ.

ಮಿನಿ ಹರಾಜಿನಲ್ಲಿ ಮುಖ್ಯವಾಗಿ ಮೂರು ರೀತಿಯ ಆಟಗಾರರು ಇರುತ್ತಾರೆ:

  • ಕಳೆದ ಹರಾಜಿನಲ್ಲಿ ಮಾರಾಟವಾಗದೆ ಉಳಿದವರು.
  • ಪ್ರಸ್ತುತ ತಂಡಗಳಿಂದ ಬಿಡುಗಡೆಯಾದವರು.
  • ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವ ಆಟಗಾರರು.

ಇದನ್ನೂ ಓದಿ: ಏಕದಿನ ವಿಶ್ವಕಪ್​​ನಲ್ಲಿ ‘ಸ್ಟಾಪ್ ಕ್ಲಾಕ್’ ನಿಯಮ!

ಮೆಗಾ ಹರಾಜಿನಷ್ಟು ದೊಡ್ಡ ಮಟ್ಟದಲ್ಲಿ ಆಟಗಾರರು ಇಲ್ಲಿ ಭಾಗವಹಿಸದಿದ್ದರೂ, ತಂಡಗಳ ತಂತ್ರಜ್ಞಾನದ ದೃಷ್ಟಿಯಿಂದ ಈ ಮಿನಿ ಹರಾಜು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ. ಗೋವಾದ ಕಡಲತೀರದಲ್ಲಿ ನಡೆಯಲಿರುವ ಈ ಚುಟುಕು ಹರಾಜಿನಲ್ಲಿ ಯಾವೆಲ್ಲಾ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಮತ್ತು ಯಾವ ತಂಡ ಯಾರನ್ನು ಖರೀದಿಸಲಿದೆ ಎಂಬ ಕುತೂಹಲಕ್ಕೆ ಡಿಸೆಂಬರ್‌ನಲ್ಲಿ ತೆರೆ ಬೀಳಲಿದೆ.

Published On - 8:00 am, Thu, 24 September 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More