Anuradha Routray: ತನ್ನ ದಾಖಲೆಯನ್ನು ಮುರಿದ ಜ್ಯೋತಿ ಸಾಧನೆಯನ್ನು ಹಾಡಿ ಹೊಗಳಿದ ಅನುರಾಧ ಬಿಸ್ವಾಲ್
ತಮ್ಮ ದಾಖಲೆಯನ್ನು ಮುರಿದ ಜ್ಯೋತಿ ಬಗ್ಗೆ ಸ್ವತಃ ಅನುರಾಧ ಅವರೇ ಮಾತನಾಡಿದ್ದು ಯರ್ರಾಜಿ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. "ಎರಡು ಬಾರಿ ಆ ಹುಡುಗಿ ನನ್ನ ದಾಖಲೆಯ ಹತ್ತಿರ ಬಂದಿದ್ದರು. ಓರ್ವ ಕ್ರೀಡಾಪಟುವಾಗಿ ನಾನು ಅವರನ್ನು ನಿಜವಾಗಿಯೂ ಇಷ್ಟಪಟ್ಟಿದ್ದೇನೆ, ಅವರ ಪ್ರತಿಭೆ, ಸಾಮರ್ಥ್ಯ ನನಗೆ ತುಂಬಾ ಸಂತೋಷವಾಯಿತು," ಎಂದು ಅನುರಾಧ ಹೇಳಿದ್ದರೆ.
ಯಾವುದೇ ಕ್ಷೇತ್ರದಲ್ಲಿ ಯಾರೇ ದಾಖಲೆ ನಿರ್ಮಾಣ ಮಾಡಿದರೂ ಅದು ಶಾಶ್ವತವಲ್ಲ ಎಂದು ಅನೇಕ ಬಾರಿ ಸಾಭೀತಾಗಿದೆ. ಇದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಜ್ಯೋತಿ ಯರ್ರಾಜಿ. ಇವರು ಸೈಪ್ರಸ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ 100 ಮೀಟರ್ ಹರ್ಡಲ್ಸ್‌ನ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಚಿನ್ನದ ಪದಕ ಬಾಜಿಕೊಂಡಿದ್ದಾರೆ. ವಿಶೇಷ ಎಂದರೆ ಇವರು ಕೇವಲ 13.23 ಸೆಕೆಂಡ್‌ಗಳಲ್ಲಿ ಜಯಗಳಿಸಿ ದಾಖಲೆ ಬರೆದಿದ್ದಾರೆ. 22 ವರ್ಷದ ಆಂಧ್ರದ ಅಥ್ಲೀಟ್ ಜ್ಯೋತಿ ಯರ್ರಾಜಿ (Jyothi Yarraji) 100 ಮೀಟರ್ ಹರ್ಡಲ್ಸ್ (hurdles) ಅನ್ನು 13.23 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಅನುರಾಧ ಬಿಸ್ವಾಲ್ (Anuradha Routray) ಅವರ 2002 ರ ದಾಖಲೆಯನ್ನು 0.15 ಸೆಕೆಂಡುಗಳ ಅಂತರದಿಂದ ಮುರಿದರು. ಬಿಸ್ವಾಲ್ 2002ರಲ್ಲಿ ʼಡಿಡಿಎ-ರಾಜಾ ಭಲೇಂದ್ರ ಸಿಂಗ್ ರಾಷ್ಟ್ರೀಯ ಸರ್ಕ್ಯೂಟ್ ಮೀಟ್ʼನಲ್ಲಿ 13.38 ಸೆಕೆಂಡುಗಳಲ್ಲಿ ಈ ದಾಖಲೆ ಮಾಡಿದ್ದರು.
ಭುವನೇಶ್ವರದಲ್ಲಿರುವ ರಿಲಯನ್ಸ್ ಫೌಂಡೇಶನ್ ಒಡಿಶಾ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಜೋಸೆಫ್ ಹಿಲಿಯರ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಜ್ಯೋತಿ, ಕಳೆದ ತಿಂಗಳು ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ 13.09 ಸೆಕೆಂಡ್‌ಗಳಲ್ಲಿ ಓಡಿದ್ದರು ಆದರೆ ಗಾಳಿಯ ವೇಗ +2.1 ಮೀ / ಸೆ ಆಗಿದ್ದರಿಂದ, ಅನುಮತಿಸುವ +2.0 ಮೀ / ಸೆ ಗಿಂತ ಹೆಚ್ಚು ಇದ್ದುದರಿಂದ ಅದನ್ನು ರಾಷ್ಟ್ರೀಯ ದಾಖಲೆಯಾಗಿ ಪರಿಗಣಿಸಿರಲಿಲ್ಲ. ಇದೀಗ ಕೂದಲೆಳೆ ಅಂತರದಿಂದ ಅನುರಾಧ ಅವರ ದಾಖಲೆಯನ್ನು ಮುರಿದು ವಿಶೇಷ ಸಾಧನೆ ಗೈದಿದ್ದಾರೆ.
Jyothi Yarraji finally broke long standing Indian record in women 100m hurdles with a winning performance of 13.23s (-0.1m/s) in Cyprus International Athletics Meeting today at Limassol. @afiindia #indianathletics @Adille1 pic.twitter.com/IIk47r2i57
— Rahul PAWAR (@rahuldpawar) May 10, 2022
ತಮ್ಮ ದಾಖಲೆಯನ್ನು ಮುರಿದ ಜ್ಯೋತಿ ಬಗ್ಗೆ ಸ್ವತಃ ಅನುರಾಧ ಅವರೇ ಮಾತನಾಡಿದ್ದು ಯರ್ರಾಜಿ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. “ಎರಡು ಬಾರಿ ಆ ಹುಡುಗಿ ನನ್ನ ದಾಖಲೆಯ ಹತ್ತಿರ ಬಂದಿದ್ದರು. ಓರ್ವ ಕ್ರೀಡಾಪಟುವಾಗಿ ನಾನು ಅವರನ್ನು ನಿಜವಾಗಿಯೂ ಇಷ್ಟಪಟ್ಟಿದ್ದೇನೆ, ಅವರ ಪ್ರತಿಭೆ, ಸಾಮರ್ಥ್ಯ ನನಗೆ ತುಂಬಾ ಸಂತೋಷವಾಯಿತು,” ಎಂದು ಅನುರಾಧ ಹೇಳಿದ್ದರೆ.
ಅನುರಾಧ ಅವರಿಗೆ ಈ ಸುದ್ದಿ ತಮ್ಮ ಮಗಳು ಅನ್ಶಿಕಾ ಮೂಲಕ ತಿಳಿಯಿತಂತೆ. ಅನ್ಶಿಕಾ ರೌತ್ರೇ ಇಂಟರ್ನೆಟ್ನಲ್ಲಿ ಸುದ್ದಿಗಳನ್ನು ನೋಡುತ್ತಿರುವಾಗ 100 ಮೀಟರ್ ಹರ್ಡಲ್ಸ್‌ನಲ್ಲಿ ಯರ್ರಾಜಿ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ ಎಂಬುದು ಕಂಡುಬಂದಂತೆ. ಆ ಕ್ಷಣದಲ್ಲಿ ಅದು ತನ್ನ ತಾಯಿಯ ದಾಖಲೆ ಎಂದು ಅನ್ಶಿಕಾಗೆ ತಿಳಿಯಿತು. ಒಂದು ನಿಮಿಷ ಅಮ್ಮನಿಗೆ ಹೇಳಬೇಕೋ ಬೇಡವೋ ಎಂದು ಯೋಚಿಸಿದರಂತೆ. ತಡರಾತ್ರಿಯಾಗಿದ್ದರೂ ಈ ವಿಚಾರವನ್ನು ತಾಯಿಗೆ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ತಕ್ಷನ ಅನುರಾಧ ಮುಗುಳ್ನಗುತ್ತಾ ತಕ್ಷಣ ಸುದ್ದಿ ಓದಿದರಂತೆ.
“ಸಂಬಂಧ ಮುರಿದು ಬೀಳುವ ಹಾಗೆ, ಸೆಕೆಂಡುಗಳು, ನಿಮಿಷಗಳು, ವರ್ಷಗಳು ಹಾಗೆ ಸಾಗುತ್ತದೆ. ಆ ಸಮಯವು ನಿಮ್ಮ ಅಸ್ತಿತ್ವವನ್ನು ವ್ಯಾಖ್ಯಾನಿಸಿದಂತೆ. ಆ 13.38 ಸೆಕೆಂಡುಗಳಲ್ಲಿ ನಾನು ಮಾಡಿದ ದಾಖಲೆ ನೆನಪಾಗಿ ಉಳಿದಿದೆ. ನಾನು ಒಂದು ಕ್ಷಣ ದುಃಖಿತನಾಗಿದ್ದು ನಿಜ. ಆದರೆ ಈ ಈವೆಂಟ್ಗಳು ಮುಂದೆಯೂ ಬರುತ್ತದೆ, ನನ್ನ ದಾಖಲೆಯೂ ಮುರಿಯುತ್ತದೆ ಎಂಬುದು ತಿಳಿದಿತ್ತು. ದೇವರಿಗೆ ಧನ್ಯವಾದಗಳು, ಅದು ಈಗ ಮುರಿದುಹೋಗಿದೆ. ನಾನೇ ಹಲವಾರು ಬಾರಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದೇನೆ. ಪ್ರತಿ ಸಂದರ್ಭದಲ್ಲೂ ನನ್ನ ಆ ದಾಖಲೆಯ ನೆನಪನ್ನು ಮಾಧ್ಯಮದಲ್ಲಿ ನೋಡಲು ಸಂತೋಷವಾಗುತ್ತದೆ,” ಎಂದಿದ್ದಾರೆ.
ಇದೇ ಸಂದರ್ಭ ಅಂದು 2002 ರಲ್ಲಿ ಆ ದಾಖಲೆ ನಿರ್ಮಾಣವಾದಾಗ ಅಲ್ಲಿನ ಸ್ಥಿತಿಯನ್ನ ವಿವರಿಸಿದ ಅನುರಾಧ, “ಅದು ಅಕ್ಟೋಬರ್ 2002. ನನಗೆ ನಿದ್ದೆ ಬರುತ್ತಿರಲಿಲ್ಲ. ನಾನು ಈಗಿನಿಂದಲೇ ಟ್ರ್ಯಾಕ್‌ಗೆ ಹೋಗಬೇಕೆಂದು ಬಯಸಿದ್ದೆ. ಒಬ್ಬ ಅಥ್ಲೀಟ್ ಕೆಲವೊಮ್ಮೆ ತುಂಬಾನೆ ಪಾಸಿಟಿವ್ ಆಗಿರುತ್ತಾರೆ, ದೈಹಿಕವಾಗಿ ಬಲಶಾಲಿಯಾಗುತ್ತಾನೆ. ಅದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕೂಟ. ಒಮ್ಮೆ ಟ್ರ್ಯಾಕ್ ಮೇಲೆ ನಾನು ಶಕ್ತಿ ಹಾಕಿ ಓಡಿದೆ. ಆರಂಭದಲ್ಲಿ ನಿಧಾನವಾಗಿದ್ದೆ ನಂತರ ವೇಗವನ್ನು ಹೆಚ್ಚಿಸಿಕೊಂಡೆ. ಅಡೆತಡೆಗಳ ನಡುವೆ ಸ್ಟ್ರೈಡ್ ಮಾದರಿ ಪರಿಪೂರ್ಣವಾಗಿತ್ತು. ನನ್ನ ತರಬೇತುದಾರ ಯೂರಿ ಅಲೆಕ್ಸಾಂಡರ್ ಓಟದ ನಂತರ ಮುಗುಳ್ನಕ್ಕರು. ಆಗ ನನಗೆ ನಾನು ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದೇನೆ ಎಂದು ತಿಳಿಯಿತು. ನನ್ನ ಈ ದಾಖಲೆಯನ್ನು ಯರ್ರಾಜಿ ಹಲವು ಬಾರಿ ಮುರಿಯುತ್ತಾರೆ ಎಂದು ನನಗೆ ಅನಿಸುತ್ತದೆ,” ಎಂಬುದು ಅನುರಾಧ ಮಾತು.
“ಕೊನೆಯ 30 ಮೀಟರ್‌ಗಳಲ್ಲಿ ಯರ್ರಾಜಿ ಅವರ ಪ್ರದರ್ಶನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಹರ್ಡಲ್ಸ್‌ನಲ್ಲಿ ಇದು ಹೆಚ್ಚು ತಾಂತ್ರಿಕವಾಗಿದೆ. ಹೀಗಿದ್ದಾಗ ನೀವು ಇನ್ನಷ್ಟು ಹೆಚ್ಚಿನ ದಾಖಲೆಗಳನ್ನು ಮುರಿಯಬಹುದು. ಜೋಸೆಫ್ ಹಿಲಿಯರ್ ಅವರ ನೇತೃತ್ವದಲ್ಲಿ ಒಡಿಶಾ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಯರ್ರಾಜಿ ತರಬೇತಿ ಪಡೆಯುತ್ತಿರುವುದು ನನಗೆ ಸಂತಸವಿದೆ. ನಾನು ಅವರನ್ನು ಭೇಟಿಯಾದಾಗ ಅಭಿನಂದಿಸುತ್ತೇನೆ. ಮಾತ್ರವಲ್ಲದೆ ಏಷ್ಯನ್ ಗೇಮ್ಸ್ ಮತ್ತು ದೊಡ್ಡ ಟೂರ್ನಮೆಂಟ್ನಲ್ಲಿ ಪದಕಗಳನ್ನು ಗೆಲ್ಲಲು ಪ್ರೇರೇಪಿಸುತ್ತೇನೆ,” ಎಂದು ಅನುರಾಧ ಹೇಳಿದ್ದಾರೆ.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:24 am, Fri, 13 May 22