ದೆಹಲಿ ಗಾಲ್ಫ್ ಲೀಗ್‌ನ ಮೂರನೇ ಆವೃತ್ತಿಗೆ ತೆರೆ
Delhi Golf Club League: ಗಾಲ್ಫ್ ಒಲಂಪಿಕ್ ಕ್ರೀಡೆಯಾಗಿದ್ದು, ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಗುರುತಿಸಲು ವೇದಿಕೆ ನಿರ್ಮಿಸಿದ್ದೇವೆ. ಇದಕ್ಕಾಗಿ ಸರಳ ಮಾದರಿಯನ್ನು ಮತ್ತು ಸಮತಟ್ಟಾದ ಮೈದಾನವನ್ನು ರೂಪಿಸಿದ್ದೇವೆ.

ದೆಹಲಿಯ ಲಾಯ್ಡ್ ಗಾಲ್ಫ್ ಕ್ಲಬ್ ಲೀಗ್‌ನ ಮೂರನೇ ಆವೃತ್ತಿಗೆ ತೆರೆ ಬಿದ್ದಿದೆ. ಅಕ್ಟೋಬರ್ 12 ರಿಂದ ಶುರುವಾಗಿದ್ದ ಈ ಲೀಗ್‌ನಲ್ಲಿ ಒಟ್ಟು 462 ಗಾಲ್ಫ್ ಪಟುಗಳು ಭಾಗವಹಿಸಿದ್ದರು. ದೆಹಲಿಯ ಪಾರ್-72 ನಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ 3 ವಾರಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಈ ಬಾರಿ ಹಲವು ಯುವ ಪ್ರತಿಭೆಗಳು ಕಾಣಿಸಿಕೊಂಡಿದ್ದು ವಿಶೇಷ.
ಈ ಯುವ ಗಾಲ್ಫ್ ಪಟುಗಳಿಗೆ ಭಾರತದ ಖ್ಯಾತ ಗಾಲ್ಫರ್ಗಳಾದ ನೋನಿತಾ ಲಾಲ್ ಖುರೇಷಿ, ಅಮಿತ್ ಲೂತ್ರಾ, ಗೌರವ್ ಘೀ, ವಿವೇಕ್ ಭಂಡಾರಿ, ಚಿರಾಗ್ ಕುಮಾರ್ ಮತ್ತು ಅಮನದೀಪ್ ಜೋಹಾಲ್ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು. ಅಲ್ಲದೆ ಇವರೊಂದಿಗೆ ಈ ಲೀಗ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ/ಗಾಲ್ಫ್ ಆಟಗಾರ ಕಪಿಲ್ ದೇವ್ ಕೂಡ ಕಾಣಿಸಿಕೊಂಡಿದ್ದರು.
ಇನ್ನು ದೆಹಲಿ ಗಾಲ್ಫ್ ಕ್ಲಬ್‌ನ ಈ ಪ್ರಯತ್ನಕ್ಕೆ ಟಿವಿ9 ನೆಟ್‌ವರ್ಕ್ ಕೂಡ ಕೈ ಜೋಡಿಸಿದ್ದು ವಿಶೇಷ. ಟಿವಿ9 ನೆಟ್‌ವರ್ಕ್ ಅಲ್ಲದೆ ಲಾಯ್ಡ್, ರಾಡಿಕೊ ಮತ್ತು ಮರ್ಸಿಡಿಸ್-ಬೆನ್ಜ್ ಸೇರಿದಂತೆ ಹಲವಾರು ಕಂಪೆನಿಗಳು ಗಾಲ್ಫ್ ಕ್ಲಬ್ ಲೀಗ್‌ನ ಮೂರನೇ ಆವೃತ್ತಿಯ ಪ್ರಾಯೋಜಕತ್ವವಹಿಸಿಕೊಂಡಿತ್ತು.
ಪಂದ್ಯಾವಳಿ ಸಮಿತಿ ಅಧ್ಯಕ್ಷ ಕಮೋಡೋರ್ ಶರತ್ ಮೋಹನ್ ಸಮ್ಮತ್ ಮಾತನಾಡಿ, ಗಾಲ್ಫ್ ಒಲಂಪಿಕ್ ಕ್ರೀಡೆಯಾಗಿದ್ದು, ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಗುರುತಿಸಲು ವೇದಿಕೆ ನಿರ್ಮಿಸಿದ್ದೇವೆ. ಇದಕ್ಕಾಗಿ ಸರಳ ಮಾದರಿಯನ್ನು ಮತ್ತು ಸಮತಟ್ಟಾದ ಮೈದಾನವನ್ನು ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಲೀಗ್‌ನಲ್ಲಿ, ಹಿರಿಯ ಸದಸ್ಯರು ಜೂನಿಯರ್ ಗಾಲ್ಫ್ ಆಟಗಾರರೊಂದಿಗೆ ಆಡಿದ್ದಾರೆ. ಇದರಿಂದ ಯುವ ಪ್ರತಿಭೆಗಳು ಮತ್ತಷ್ಟು ಕ್ಲಬ್‌ನೊಳಗಿನ ಗಾಲ್ಫ್ ಪರಿಸರ ವ್ಯವಸ್ಥೆಯೊಂದಿಗೆ ಬೆರೆಯಲು ಸಾಧ್ಯವಾಗಲಿದೆ ಎಂದು ಶರತ್ ಮೋಹನ್ ಸಮ್ಮತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ಗಾಲ್ಫ್ ಕ್ಲಬ್‌ನ ಏಕೈಕ ಉದ್ದೇಶವು ಭಾರತೀಯ ಗಾಲ್ಫ್ ಅನ್ನು ಉತ್ತೇಜಿಸುವುದು. ಇದರ ಜೊತೆಗೆ ಪ್ರತಿಭೆಯನ್ನು ಉತ್ತೇಜಿಸುವ ಮತ್ತು ಸೌಹಾರ್ದತೆಯನ್ನು ಬೆಳೆಸುವುದಾಗಿದೆ. ಇದರ ಯಶಸ್ವಿಗೆ ಈ ವರ್ಷ ದೊರೆತ ಅದ್ಭುತ ಪ್ರತಿಕ್ರಿಯೆಯೇ ಸಾಕ್ಷಿ ಎಂದು ದೆಹಲಿ ಗಾಲ್ಫ್ ಕ್ಲಬ್‌ನ ನಾಯಕ ರಾಜ್ ಖನ್ನಾ ತಿಳಿಸಿದ್ದಾರೆ.