Video: ಬೆಂಗಳೂರಿನ ಆಟೋ ಚಾಲಕನ ಆತ್ಮೀಯತೆಗೆ ಫಿದಾ ಆದ ವಿದೇಶಿಗ
ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ್ರೆ ಇಲ್ಲಿನ ಅತಿಥಿ ಸತ್ಕಾರಕ್ಕೆ, ಅಪರಿಚಿತ ವ್ಯಕ್ತಿಗಳ ಜತೆಗೆ ಬೆರೆಯುವ ರೀತಿಗೆ ಫಿದಾ ಆಗೋದಿದೆ. ಭಾರತೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿದೇಶಿಗರ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ವಿದೇಶಿಗನೊಬ್ಬ ಬೆಂಗಳೂರಿನ ಆಟೋ ಚಾಲಕನ ಆತ್ಮೀಯ ಮಾತಿಗೆ ಮನಸೋತಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಜುಲೈ 16: ವಿದೇಶಿಗರಿಗೆ ಭಾರತ ಅಂದ್ರೆ ಅದೇನೋ ಸೆಳೆತ. ಭಾರತಕ್ಕೆ ಬರುವ ವಿದೇಶಿಗರು ಬೆಂಗಳೂರಿಗೂ (Bengaluru) ಭೇಟಿ ನೀಡಿ ಇಲ್ಲಿನ ತಿಂಡಿ ತಿನಿಸುಗಳನ್ನು ಸವಿಯುವುದಿದೆ. ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದಿದೆ. ಆದರೆ ಬೆಂಗಳೂರಿಗೆ ಬಂದ ಅಮೆರಿಕನ್ ವ್ಯಕ್ತಿಯೊಬ್ಬ ಬೆಂಗಳೂರಿನ ಆಟೋಚಾಲಕನ ಸೌಹಾರ್ದಯುತ ಮಾತಿಗೆ ಫುಲ್ ಫಿದಾ ಆಗಿದ್ದಾನೆ. ಆಟೋ ಚಾಲಕನ ಬಳಿ ಚಿಕ್‌ಪೇಟ್‌ಗೆ ಹೋಗಲು ಹೇಳಿದ್ದು, ಆತ ನಯವಾಗಿಯೇ ನಿರಾಕರಿಸಿದ್ದಾನೆ. ನಗು ಮೊಗದ ಆಟೋಚಾಲಕನ ಮಾತಿಗೆ ಫುಲ್ ಫಿದಾ ಆಗಿದ್ದು, ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ಅಮೆರಿಕನ್ ವ್ಯಕ್ತಿ (Whichchris) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್‌ನಲ್ಲಿ ಬೆಂಗಳೂರಿನ ಆಟೋ ಚಾಲಕ ಹಾಗೂ ಅಮೆರಿಕನ್ ಪ್ರವಾಸಿಗ ನಡುವಿನ ಸಂಭಾಷಣೆ ಕಾಣಬಹುದು. ವಿದೇಶಿಗ ಆಟೋ ಚಾಲಕನನ್ನು ಚಿಕ್ಕಪೇಟೆಗೆ ಕರೆದೊಯ್ಯಬಹುದೇ ಎಂದು ಕೇಳಿದ್ದಾನೆ. ಆಟೋ ಚಾಲಕನಿಗೆ ಇಂಗ್ಲಿಷ್ ಬಾರದೇ ಇರುವ ಕಾರಣ ಇಂದು ಶನಿವಾರ ಶಾಲಾ ಪಿಕಪ್ ಎಂದು ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಈ ವಿದೇಶಿಗನಿಗೆ ಇಲ್ಲಿ ಆಟೋಗಳು ಸಿಗುತ್ತದೆ. ಅದಲ್ಲದೇ ಓಲಾ ಅಥವಾ ಉಬರ್ ಬುಕ್ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾನೆ. ಆಟೋ ಚಾಲಕನ ಸಲಹೆಗೆ ಧನ್ಯವಾದ ತಿಳಿಸಿದ್ದಾನೆ. ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಫಾಲೋ ಮಾಡುವಂತೆ ತಿಳಿಸಿರುವುದನ್ನು ನೋಡಬಹುದು. ಕೊನೆಗೆ ವಿದೇಶಿಗ ಜತೆಗೆ ಮಾತಿಗಿಳಿದ ಆಟೋ ಚಾಲಕ ನೀವು ಕನ್ನಡದಲ್ಲಿ ವಿಡಿಯೋ ಮಾಡ್ತೀರಾ? ಎಂದು ಕೇಳಿದ್ದಾನೆ. ಆದರೆ ಈ ಅಮೆರಿಕನ್ ವ್ಯಕ್ತಿ ಕೆನಡಾ ಎಂದು ತಪ್ಪಾಗಿ ಅರ್ಥೈಸಿಕೊಂಡು ನಾನು ಕೆನಡಾದಲ್ಲಿ ಯಾವುದೇ ವೀಡಿಯೊಗಳನ್ನು ಮಾಡಿಲ್ಲ ಎಂದು ಹೇಳಿದ್ದು, ಇದು ತಮಾಷೆಯ ಸಂದರ್ಭವಾಗಿ ಏರ್ಪಟ್ಟಿರುವುದನ್ನು ಕಾಣಬಹುದು.
ಇದನ್ನೂ ಓದಿ: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ
ಈ ವಿಡಿಯೋ 2.7 ಮಿಲಿಯನ್‌ಗೂ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಂತ ಅದ್ಭುತ ಇಂಗ್ಲಿಷ್ ಎಂದಿದ್ದಾರೆ. ಇನ್ನೊಬ್ಬರು, ಕರ್ನಾಟಕದವರು ಜನರು ತುಂಬಾ ಒಳ್ಳೆಯವ್ರು. ಭಾಷೆ ಯಾವುದೇ ಇರಲಿ, ಎಲ್ಲವನ್ನೂ ಸರಾಗವಾಗಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾಷೆ ಗೊತ್ತಿಲ್ಲದಿದ್ರೂ ಅರ್ಥ ಮಾಡಿಕೊಂಡು ವ್ಯವಹರಿಸಿದ ರೀತಿ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Thu, 16 July 26




