ಗಡಿ ಕನ್ನಡ ಶಾಲೆಗಳು ಈಗ ತೆಲುಗು ಶಾಲೆಗಳಾಗಿ ಪರಿವರ್ತನೆ: ನಮ್ಮ ಸರ್ಕಾರ ಕಣ್ಮುಚ್ಚಿ ಕುಳಿತಿದೆ!
ಗಡಿ ಭಾಗದಲ್ಲಿ ಕನ್ನಡ ಪ್ರೀತಿಯೇನೋ ಇದೆ. ಆದರೆ, ಸೀಮಾಂಧ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತು ಬಂದೊದಗಿದೆ. ಬರುವ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳು ಕೂಡ ತೆಲುಗು ಮಾಧ್ಯಮದಲ್ಲೇ ವ್ಯಾಸಂಗ ಮಾಡಬೇಕಾದ ಕಡ್ಡಾಯ ಪರಿಸ್ಥಿತಿ ಎದುರಾಗಿದೆ. ಗಡಿ ಭಾಗದ ಕನ್ನಡ ಶಾಲೆಗಳು ಈಗ ತೆಲುಗು ಭಾಷೆಯ ಶಾಲೆಗಳಾಗಿ ಪರಿವರ್ತನೆಯಾಗುತ್ತಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನ ಉಳಿಸುವ ಗೋಜಿಗೆ ಹೋಗುತ್ತಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ಸೀಮಾಂಧ್ರ ಸರ್ಕಾರ […]
ಗಡಿ ಭಾಗದಲ್ಲಿ ಕನ್ನಡ ಪ್ರೀತಿಯೇನೋ ಇದೆ. ಆದರೆ, ಸೀಮಾಂಧ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತು ಬಂದೊದಗಿದೆ. ಬರುವ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳು ಕೂಡ ತೆಲುಗು ಮಾಧ್ಯಮದಲ್ಲೇ ವ್ಯಾಸಂಗ ಮಾಡಬೇಕಾದ ಕಡ್ಡಾಯ ಪರಿಸ್ಥಿತಿ ಎದುರಾಗಿದೆ. ಗಡಿ ಭಾಗದ ಕನ್ನಡ ಶಾಲೆಗಳು ಈಗ ತೆಲುಗು ಭಾಷೆಯ ಶಾಲೆಗಳಾಗಿ ಪರಿವರ್ತನೆಯಾಗುತ್ತಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನ ಉಳಿಸುವ ಗೋಜಿಗೆ ಹೋಗುತ್ತಿಲ್ಲ.
ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ಸೀಮಾಂಧ್ರ ಸರ್ಕಾರ ಮುಂದಾಗಿದೆ. ಅದು ಬರುವ ಶೈಕ್ಷಣಿಕ ವರ್ಷದಿಂದ ಶುರುವಾದರೆ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಗತಿಯೇನು? ಹೌದು. ಇಂಥದೊಂದು ಪ್ರಶ್ನೆ ಗಡಿಭಾಗದ ಆಂಧ್ರದಲ್ಲಿ ಮಾತೃಭಾಷೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತಷ್ಟು ಆತಂಕ ಹೆಚ್ಚಿಸಿದೆ.
ನೆರೆಯ ಆಂಧ್ರ ಪ್ರದೇಶ ರಾಜ್ಯದಲ್ಲಿ ಒಟ್ಟು 79 ಕನ್ನಡ ಮಾಧ್ಯಮ ಶಾಲೆಗಳಿವೆ. ಇದರಲ್ಲಿ ಶತಮಾನೋತ್ಸವ ಕಂಡ ಹಲವು ಕನ್ನಡ ಶಾಲೆಗಳೂ ಇವೆ. ಆದರೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಆಂಧ್ರದಲ್ಲಿ ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗಳಾಗಿ ಕಾರ್ಯನಿರ್ವಹಿಸಲು ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶದ ಸರ್ಕಾರ ನಿರ್ಧರಿಸಿದೆ.
ಸರ್ಕಾರ ಬಿ.ಇ.ಓ. ಮೂಲಕ ಡಿಕ್ಲರೇಷನ್ ಪತ್ರವನ್ನು ಆಯಾ ಗ್ರಾ.ಪಂ, ಎಸ್.ಡಿ.ಎಂ.ಸಿ ಹಾಗೂ ಪೋಷಕರಿಗೆ ಕಳುಹಿಸಿತ್ತು. ಆಂಧ್ರ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳು ತೆಲುಗು ಭಾಷೆಯಾಗಿ ಇಲ್ಲವೇ, ಇಂಗ್ಲೀಷ್ ಮಾಧ್ಯಮದಲ್ಲಿ ಶಾಲೆ ನಡೆಸಲು ಅರ್ಜಿ ತುಂಬಿ ಕಳುಹಿಸಬೇಕು. ಯಾವುದಕ್ಕೆ ಹೆಚ್ಚು ಒಮ್ಮತ ಬರುತ್ತೋ ಅಲ್ಲಿ ತೆಲುಗು ಇಲ್ಲವೇ ಇಂಗ್ಲೀಷ್ ಮಾಧ್ಯಮ ಶುರುವಾಗುತ್ತೆ. ಇದು ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳನ್ನ ಅತಂತ್ರಕ್ಕೆ ಸಿಲುಕಿಸಿದೆ.
ನೆರೆಯ ಆಂಧ್ರದಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಇವೆ. 20ಕ್ಕೂ ಹೆಚ್ಚು ಕನ್ನಡ ಶಾಲೆಗಳು ಶತಮಾನೋತ್ಸವ ಕಂಡಿವೆ. ಆಂಧ್ರದಲ್ಲಿ 79 ಕನ್ನಡ ಶಾಲೆಗಳಿದ್ದರೆ, ತೆಲಂಗಾಣದಲ್ಲಿ 26 ಕನ್ನಡ ಮಾಧ್ಯಮ ಶಾಲೆಗಳಿವೆ. ಆಂಧ್ರದ ಅನಂತಪುರ, ಕರ್ನೂಲು ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಶಾಲೆಗಳಿದ್ದು, ಇಲ್ಲಿ ಕನ್ನಡ ಮಾಧ್ಯಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸದ ಅವಕಾಶವಿದೆ. ಆದರೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರವು ಬರುವ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಶುರು ಮಾಡಲು ನಿರ್ಧರಿಸಿದೆ.
ಹೀಗಾದಲ್ಲಿ ಹಲವು ದಶಕಗಳಿಂದ ಕನ್ನಡ ಓದುತ್ತಿರುವ ಮಕ್ಕಳು ಕನ್ನಡ ಬಿಟ್ಟು ಅನಿವಾರ್ಯವಾಗಿ ತೆಲುಗು, ಇಲ್ಲವೇ ಇಂಗ್ಲೀಷ್ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇದು ಗಡಿಭಾಗದ ಕನ್ನಡಿಗರಿಗೆ ನುಂಗಲಾರದ ತುತ್ತಾಗಿದೆ.
ಈಗಾಗ್ಲೇ ಅನಂತಪುರಂ ಜಿಲ್ಲೆಯ ಮಡೇನಹಳ್ಳಿಯ ಕನ್ನಡ ಮಾಧ್ಯಮ ಶಾಲೆ ಸಂಪೂರ್ಣ ತೆಲುಗು ಶಾಲೆಯಾಗಿ ಪರಿವರ್ತನೆಗೊಂಡಿದೆ. ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳು ಈಗ ಮೊದಲ ಭಾಷೆಯನ್ನಾಗಿ ತೆಲುಗು ಆಯ್ಕೆ ಮಾಡಿಕೊಂಡಿದ್ದಾರೆ! ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡಿದ ಗಡಿಭಾಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಅವಕಾಶ ಸಿಗುವುದಿಲ್ಲ.
ಕನ್ನಡ ಭಾಷೆಯ ಮಕ್ಕಳು ಅನ್ನೋ ಕಾರಣಕ್ಕಾಗಿ ಸೀಮಾಂಧ್ರ–ತೆಲಂಗಾಣದಲ್ಲೂ ಅವರಿಗೆ ಅವಕಾಶ ಸಿಗುವುದಿಲ್ಲ. ಇದರಿಂದ ಮಕ್ಕಳಿಗೆ ತುಂಬಾ ಅನ್ಯಾಯವಾಗುತ್ತಿದೆ. ಕರ್ನಾಟಕ ಸರ್ಕಾರ ಗಡಿ ಭಾಗದ ಕನ್ನಡ ಶಾಲಾ ಮಕ್ಕಳ ನೆರವಿಗೆ ಬರಬೇಕು ಅನ್ನೋದು ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರ ಹಕ್ಕೊತ್ತಾಯ. -ಎಂ. ಗಿರಿಜಾಪತಿ, ಜಿಲ್ಲಾಧ್ಯಕ್ಷ, ಅನಂತಪುರಂ ಕನ್ನಡ ಶಿಕ್ಷಕರ ಸಂಘ
ಕರ್ನಾಟಕ ಸರ್ಕಾರ ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಸರಿಗೆ ಮಾತ್ರ ಗಡಿನಾಡು ಅಭಿವೃದ್ದಿ ಪ್ರಾಧಿಕಾರ ಇದೆ. ಗಡಿ ಭಾಗದ ಕನ್ನಡ ಶಾಲೆಯ ಮಕ್ಕಳು, ಅಲ್ಲಿನ ಶಿಕ್ಷಕರು ಪ್ರತಿಯೊಂದಕ್ಕೂ ಹೋರಾಟ ಮಾಡಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನ ಕರ್ನಾಟಕ ಸರ್ಕಾರವೇ ವಿತರಣೆ ಮಾಡುತ್ತಿದೆ.
ಇದನ್ನ ಹೊರತುಪಡಿಸಿ, ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು, ಜೊತೆಗೆ ಉದ್ಯೋಗದಲ್ಲಿ ಆದ್ಯತೆ ನೀಡುವುದನ್ನ ಕರ್ನಾಟಕ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಅತಂತ್ರಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಈಗಲಾದರೂ ಗಡಿ ಭಾಗದಲ್ಲಿ ಕನ್ನಡದ ಕಂಪು ಸೂಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ. -ಬಸವರಾಜ ಹರನಹಳ್ಳಿ
Published On - 9:38 pm, Sat, 31 October 20