ಟ್ರಂಪ್ ನಮ್ಮ ಕರಾವಳಿ ಮೇಲೆ ದಾಳಿ ನಡೆಸಿದರೆ ಗಲ್ಫ್ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ; ಇರಾನ್ ಎಚ್ಚರಿಕೆ
ಅಮೆರಿಕ ನೌಕಾಪಡೆಗಳನ್ನು ಸ್ಥಳಾಂತರಿಸುತ್ತಿದ್ದಂತೆ ಇರಾನ್ ದೊಡ್ಡ ಎಚ್ಚರಿಕೆ ಸಂದೇಶ ರವಾನಿಸಿದೆ. ಟ್ರಂಪ್ ಭೂದಾಳಿಯನ್ನು ಪ್ರಾರಂಭಿಸಿದರೆ ಇಡೀ ಕೊಲ್ಲಿಯಾದ್ಯಂತ ಸಮುದ್ರ ಗಣಿಗಳು ಸ್ಥಾಪಿಸುವುದಾಗಿ ಟೆಹ್ರಾನ್ ಬೆದರಿಕೆ ಹಾಕಿದೆ. ಅಮೆರಿಕ ದೇಶದ ಕರಾವಳಿ ಅಥವಾ ದ್ವೀಪಗಳ ಮೇಲೆ ದಾಳಿ ಮಾಡುವ ಯೋಜನೆ ಮುಂದುವರಿದರೆ ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ಗಣಿಗಳನ್ನು ಸ್ಥಾಪಿಸುವುದಾಗಿ ಇರಾನ್ ಹೇಳಿದೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಇರಾನ್ ಮೇಲೆ ಒತ್ತಡ ಹೇರಲು ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಆಕ್ರಮಣವನ್ನು ಮಾಡಲು ಅಮೆರಿಕ ಸಂಚು ಮಾಡಿದೆ ಎಂದು ಹೇಳಲಾಗಿದೆ.

ಟೆಹ್ರಾನ್, ಮಾರ್ಚ್ 23: ಇರಾನ್ ದೇಶದ ಕರಾವಳಿ ಅಥವಾ ದ್ವೀಪಗಳ ಮೇಲೆ ಯಾವುದಾದರೂ ದಾಳಿ ನಡೆದರೆ ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ಸ್ಫೋಟಕ ಸಮುದ್ರ ಗಣಿಗಳನ್ನು ನಿಯೋಜಿಸಬೇಕಾಗುತ್ತದೆ ಎಂದು ಇರಾನ್‌ನ ರಕ್ಷಣಾ ಮಂಡಳಿ ಇಂದು ಎಚ್ಚರಿಸಿದೆ. ಇಂದು ರಾತ್ರಿಯೊಳಗೆ ಇರಾನ್‌ನ (Iran War) ಪ್ರಮುಖ ಜಲಮಾರ್ಗವನ್ನು ಮತ್ತೆ ತೆರೆಯಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಇರಾನ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಇರಾನ್ ಮೇಲಿನ ನಿರಂತರ ದಾಳಿಗಳಿಂದ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗವನ್ನು ಹೊಂದಿದೆ. ಇದು 1970ರ ದಶಕದ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟನ್ನು ಉಂಟುಮಾಡಿದೆ.
ಇದನ್ನೂ ಓದಿ: ಇರಾನ್‌ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!
“ಇರಾನ್‌ನ ಕರಾವಳಿ ಅಥವಾ ದ್ವೀಪಗಳ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ” ಎಂದು ಇರಾನ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶಕ್ಕೆ ಯುಎಸ್ ಮೆರೀನ್‌ಗಳನ್ನು ನಿಯೋಜಿಸುವ ಸಾಧ್ಯತೆಯ ಬಗ್ಗೆ ಟೆಹ್ರಾನ್‌ನಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಇರಾನ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮತ್ತೆ ತೆರೆಯುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು, ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಇರಾನ್‌ನ ಖಾರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳಲು ಅಥವಾ ದಿಗ್ಬಂಧನ ಮಾಡಲು ಅಮೆರಿಕ ಪ್ಲಾನ್ ಮಾಡುತ್ತಿದೆ. ಅದಕ್ಕೆ ತಿರುಗೇಟು ನೀಡಲು ಇರಾನ್ ಕೂಡ ಸಜ್ಜಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Mon, 23 March 26
