ಒಮನ್‌ನಿಂದ ಭಾರತಕ್ಕೆ ಮಹಾದೇವ್ ಆ್ಯಪ್ ಸೂತ್ರಧಾರಿ ಸೌರಭ್ ಚಂದ್ರಾಕರ್ ಹಸ್ತಾಂತರ: ಸಿಬಿಐ ತಂಡದಿಂದ ಭಾರಿ ಕಾರ್ಯಾಚರಣೆ
ಮಹಾದೇವ್ ಆನ್‌ಲೈನ್ ಬುಕ್ ಬೆಟ್ಟಿಂಗ್ ಆ್ಯಪ್ ಕಿಂಗ್‌ಪಿನ್ ಸೌರಭ್ ಚಂದ್ರಾಕರ್‌ನನ್ನು ಒಮನ್‌ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಕೋಟ್ಯಂತರ ರೂಪಾಯಿ ಅಕ್ರಮ ಬೆಟ್ಟಿಂಗ್ ಮತ್ತು ಹವಾಲಾ ಜಾಲ ನಡೆಸುತ್ತಿದ್ದ ಚಂದ್ರಾಕರ್‌ನನ್ನು CBI ವಶಕ್ಕೆ ಪಡೆದಿದೆ. ವಿದೇಶದಿಂದ ನಿಯಂತ್ರಿಸಲ್ಪಡುತ್ತಿದ್ದ ಈ ಜಾಲ, ಅಧಿಕಾರಿಗಳಿಗೆ ಲಂಚ ನೀಡಿ ಅಕ್ರಮಗಳನ್ನು ನಡೆಸಿತ್ತು. CBI ಮತ್ತು ED ತನಿಖೆ ನಡೆಸಿ, ಆಸ್ತಿ ಜಪ್ತಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ದೆಹಲಿ, ನ.1: ದೇಶಾದ್ಯಂತ ಕೋಟ್ಯಂತರ ರೂಪಾಯಿ ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ ‘ಮಹಾದೇವ್ ಆನ್‌ಲೈನ್ ಬುಕ್’ (Mahadev Online Book) ಆ್ಯಪ್‌ನ ಮುಖ್ಯ ರೂವಾರಿ ಹಾಗೂ ಕಿಂಗ್‌ಪಿನ್ ಸೌರಭ್ ಚಂದ್ರಾಕರ್‌ನನ್ನು ಒಮನ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಯ (CBI) ಕಳುಹಿಸಿದ್ದ ವಿಶೇಷ ತಂಡವೊಂದು ಮುಸ್ಕತ್‌ಗೆ ತೆರಳಿ ಸೌರಭ್ ಚಂದ್ರಾಕರ್‌ನನ್ನು ಭಾರತಕ್ಕೆ ಕರೆತಂದಿದ್ದು, ಸೋಮವಾರ ರಾಯ್‌ಪುರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗುವುದು.
ಇಂಟರ್‌ಪೋಲ್ ಜಾರಿಗೊಳಿಸಿದ್ದ ‘ರೆಡ್ ಕಾರ್ನರ್ ನೋಟಿಸ್’ ಆಧಾರದ ಮೇಲೆ ರಾಯಲ್ ಒಮನ್ ಪೊಲೀಸರು ಸೌರಭ್ ಚಂದ್ರಾಕರ್‌ನನ್ನು ವಶಕ್ಕೆ ಪಡೆದಿದ್ದರು. ಪ್ರಕರಣ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಒಮನ್ ಸರ್ಕಾರಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿ ಹಸ್ತಾಂತರಕ್ಕೆ ಮನವಿ ಮಾಡಿದ್ದವು. ಸೌರಭ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ನಂತರ ಸಿಬಿಐ ತಂಡ ಟ್ರಾನ್ಸಿಟ್ ರಿಮಾಂಡ್ ಪಡೆದು ರಾಯ್‌ಪುರಕ್ಕೆ ಕರೆದೊಯ್ಯಲಿದೆ.
ಕೋಟಿ ಕೋಟಿ ಹವಾಲಾ ಹಣ ಮತ್ತು ಬೆಟ್ಟಿಂಗ್ ಜಾಲ ಹೇಗೆ ನಡೀತಿತ್ತು?:
ಸಿಬಿಐ ತನಿಖೆಯಲ್ಲಿ ಮಹಾದೇವ್ ಆನ್‌ಲೈನ್ ಬುಕ್ ಅಕ್ರಮ ಬೆಟ್ಟಿಂಗ್ ಸಾಮ್ರಾಜ್ಯದ ಹಲವು ಸ್ಫೋಟಕ ಸತ್ಯಗಳು ಹೊರಬಂದಿವೆ. ಭಾರತದ ಅತಿ ದೊಡ್ಡ ಅಕ್ರಮ ಬೆಟ್ಟಿಂಗ್ ಸಿಂಡಿಕೇಟ್‌ಗಳಲ್ಲಿ ಒಂದಾದ ಈ ಸಂಸ್ಥೆಯನ್ನು ಭಾರತದ ಹೊರಗೆ ಅಂದರೆ ವಿದೇಶದಿಂದ ನಿಯಂತ್ರಿಸಲಾಗುತ್ತಿತ್ತು. ಕ್ರಿಕೆಟ್, ಫುಟ್‌ಬಾಲ್, ಇಸ್ಪೀಟ್ ಆಟಗಳು ಹಾಗೂ ಇತರ ಕ್ರೀಡೆಗಳ ಮೇಲೆ ದೇಶಾದ್ಯಂತ ಇರುವ ಫ್ರಾಂಚೈಸಿ ಪ್ಯಾನಲ್‌ಗಳು ಮತ್ತು ಬ್ರಾಂಚ್‌ಗಳ ಮೂಲಕ ಯೂಸರ್ಸ್‌ನಿಂದ ಕೋಟ್ಯಂತರ ರೂ. ಬೆಟ್ಟಿಂಗ್ ಸಂಗ್ರಹಿಸಲಾಗುತ್ತಿತ್ತು. ಬೆಟ್ಟಿಂಗ್‌ನಿಂದ ಬಂದ ಕೋಟ್ಯಂತರ ಹಣವನ್ನು ‘ಮ್ಯೂಲ್ ಬ್ಯಾಂಕ್ ಖಾತೆಗಳ’ ಮೂಲಕ ವರ್ಗಾಯಿಸಿ, ಹವಾಲಾ ಮಾರ್ಗದಲ್ಲಿ ವಿದೇಶಕ್ಕೆ ರವಾನಿಸಲಾಗುತ್ತಿತ್ತು. ಈ ಅಕ್ರಮ ಸಿಂಡಿಕೇಟ್ ಯಾವುದೇ ಅಡೆತಡೆಯಿಲ್ಲದೆ ನಡೆಯಲು ಅಧಿಕಾರಿಗಳಿಗೆ ರಕ್ಷಣೆಗಾಗಿ ಲಂಚದ ಹಣ ನೀಡಲಾಗುತ್ತಿತ್ತು.
ಇದನ್ನೂ ಓದಿ: ಜ್ಞಾನೇಶ್ ಕುಮಾರ್ ಜೈಲಿಗೆ ಹೋಗಲಿದ್ದಾರೆ, 2024ರ ಲೋಕಸಭೆ ಚುನಾವಣೆ ಅಕ್ರಮ: ರಾಹುಲ್ ಗಾಂಧಿ ಆರೋಪ
ಛತ್ತೀಸ್‌ಗಢ ಸರ್ಕಾರದ ಮನವಿ – ಸಿಬಿಐ ಚಾರ್ಜ್‌ಶೀಟ್:
ಛತ್ತೀಸ್‌ಗಢ ಸರ್ಕಾರದ ಕೋರಿಕೆಯ ಮೇರೆಗೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ, ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಛತ್ತೀಸ್‌ಗಢ ಜೂಜು ನಿಷೇಧ ಕಾಯ್ದೆಯಡಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ. ಇನ್ನೊಂದೆಡೆ ಜಾರಿ ನಿರ್ದೇಶನಾಲಯ ಸಹ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ್ದು, ಭಾರತ ಹಾಗೂ ವಿದೇಶದಲ್ಲಿದ್ದ ಸೌರಭ್ ಚಂದ್ರಾಕರ್‌ನ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಹೊಸದೆಹಲಿ ಹಾಗೂ ಒಮನ್ ಸರ್ಕಾರದ ನಡುವಿನ ಈ ರಾಜತಾಂತ್ರಿಕ ಸಮನ್ವಯದ ಯಶಸ್ವಿ ಹಸ್ತಾಂತರವನ್ನು ಸಿಬಿಐ ಶ್ಲಾಘಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Sun, 1 November 26




