AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಲ್ಪ ನಾಚಿಕೆ ಇರಲಿ, ಸಭ್ಯತೆ ಇರಲಿ ಎಂದಿದ್ದ ಖ್ವಾಜಾ ಆಸಿಫ್‌ಗೆ ಫಜ್ಲುರ್ ರೆಹಮಾನ್ ತಿರುಗೇಟು

ಪಾಕಿಸ್ತಾನ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ಫಜ್ಲುರ್ ರೆಹಮಾನ್, ರಕ್ಷಣಾ ಸಚಿವ ಖವಾಜಾ ಆಸಿಫ್‌ಗೆ ಅವರದೇ ಮಾತಿನಲ್ಲಿ ತಿರುಗೇಟು ನೀಡಿದ್ದಾರೆ. ಇರಾನ್‌ನಲ್ಲಿ ಮಹತ್ವದ ರಕ್ಷಣಾ ಮಾತುಕತೆಗಳು ನಡೆಯುತ್ತಿದ್ದಾಗ ಆಸಿಫ್ ಸಂಸತ್ತಿನಲ್ಲಿದ್ದುದನ್ನು ಅವರು ಪ್ರಶ್ನಿಸಿದರು. 'ಸ್ವಲ್ಪ ನಾಚಿಕೆ, ಸ್ವಲ್ಪ ಸಭ್ಯತೆ ಇರಲಿ' ಎಂಬ ಆಸಿಫ್‌ರ ಹಿಂದಿನ ಹೇಳಿಕೆಯನ್ನೇ ಉಲ್ಲೇಖಿಸಿ, ಸರ್ಕಾರದ ಕಾರ್ಯವೈಖರಿಯನ್ನು ವ್ಯಂಗ್ಯವಾಡಿದರು.

ಸ್ವಲ್ಪ ನಾಚಿಕೆ ಇರಲಿ, ಸಭ್ಯತೆ ಇರಲಿ ಎಂದಿದ್ದ ಖ್ವಾಜಾ ಆಸಿಫ್‌ಗೆ ಫಜ್ಲುರ್ ರೆಹಮಾನ್ ತಿರುಗೇಟು
ಖವಾಜಾ ಆಸಿಫ್ Image Credit source: Firstpost
ನಯನಾ ರಾಜೀವ್
|

Updated on: Oct 29, 2026 | 9:00 AM

Share

ಇಸ್ಲಾಮಾಬಾದ್, ಅಕ್ಟೋಬರ್ 29: ಪಾಕಿಸ್ತಾನದ ಸಂಸತ್ತಿನಲ್ಲಿ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಹಿಂದಿನ ಜನಪ್ರಿಯ ಹೇಳಿಕೆಯನ್ನೇ ಬಳಸಿಕೊಂಡು ವಿರೋಧ ಪಕ್ಷದ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ತಿರುಗೇಟು ನೀಡಿದ್ದಾರೆ. ಇರಾನ್‌ನಲ್ಲಿ ಮಹತ್ವದ ರಕ್ಷಣಾ ಮಾತುಕತೆಗಳು ನಡೆಯುತ್ತಿರುವಾಗ ಸಚಿವರು ಸಂಸತ್ತಿನಲ್ಲಿ ಕುಳಿತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಅವರ ವ್ಯಂಗ್ಯಭರಿತ ಮಾತುಗಳು ಸದನದಲ್ಲಿ ನಗುವಿಗೆ ಕಾರಣವಾಗಿವೆ.

ಖ್ವಾಜಾ  ಆಸಿಫ್‌ಗೆ ಅವರದ್ದೇ ಮಾತಿನಿಂದ ತಿರುಗೇಟು ಪಾಕಿಸ್ತಾನದ ರಾಷ್ಟ್ರೀಯ ಸಭೆಯಲ್ಲಿ ಬುಧವಾರ ವಿರೋಧ ಪಕ್ಷದ ನಾಯಕ ಹಾಗೂ ಜಮಾಯತ್ ಉಲೇಮಾ-ಇ-ಇಸ್ಲಾಂ-ಫಜಲ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್, ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರನ್ನು ಟೀಕಿಸಿದ್ದಾರೆ.

ಖವಾಜಾ ಆಸಿಫ್ ಈ ಹಿಂದೆ ರಾಜಕೀಯ ವಿರೋಧಿಗಳನ್ನು ಟೀಕಿಸುವಾಗ ಬಳಸಿದ್ದ “ಕೋಯಿ ಶರಮ್ ಹೋತಿ ಹೈ, ಕೋಯಿ ಹಯಾ ಹೋತಿ ಹೈ” ಎಂಬ ಉರ್ದು ಮಾತನ್ನು ಫಜ್ಲುರ್ ರೆಹಮಾನ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಇದರ ಅರ್ಥ, “ಸ್ವಲ್ಪ ನಾಚಿಕೆ ಇರಲಿ, ಸ್ವಲ್ಪ ಸಭ್ಯತೆ ಇರಲಿ” ಎಂಬುದಾಗಿದೆ. ಇರಾನ್‌ನಲ್ಲಿ ರಕ್ಷಣಾ ವಿಚಾರವಾಗಿ ಮಹತ್ವದ ಮಾತುಕತೆಗಳು ನಡೆಯುತ್ತಿರುವಾಗ ಪಾಕಿಸ್ತಾನದ ರಕ್ಷಣಾ ಸಚಿವರು ಸಂಸತ್ತಿನಲ್ಲಿ ಕುಳಿತಿರುವುದೇಕೆ ಎಂದು ಅವರು ಪ್ರಶ್ನಿಸಿದರು. ಈ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ವ್ಯಂಗ್ಯವಾಗಿ ಟೀಕಿಸಿದರು. ಅವರ ಮಾತುಗಳಿಗೆ ಸದನದಲ್ಲಿ ನಗು ವ್ಯಕ್ತವಾಯಿತು. ಖ್ವಾಜಾ ಆಸಿಫ್ ಕೂಡ ಆ ಸಮಯದಲ್ಲಿ ಸದನದಲ್ಲಿದ್ದರು.

ಇರಾನ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳೇನು? ಫಜ್ಲುರ್ ರೆಹಮಾನ್ ಅವರ ಟೀಕೆಯ ಹಿಂದೆ ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳಿವೆ. ವರದಿಗಳ ಪ್ರಕಾರ, ಇರಾನ್‌ನ ಟೆಹ್ರಾನ್‌ನಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿಗೆ ಸಂಬಂಧಿಸಿದ ಉನ್ನತ ಮಟ್ಟದ ಮಾತುಕತೆಗಳು ನಡೆದಿದ್ದವು. ಈ ಚರ್ಚೆಗಳಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಸೌದಿ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಮತ್ತು ಟರ್ಕಿಯ ಗುಪ್ತಚರ ಮುಖ್ಯಸ್ಥ ಇಬ್ರಾಹಿಂ ಕಾಲಿನ್ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಪ್ರಾದೇಶಿಕ ಭದ್ರತೆ, ದೇಶಗಳ ನಡುವಿನ ಸಹಕಾರ ಮತ್ತು ಮಿಲಿಟರಿ ಸಂಘರ್ಷ ಮತ್ತಷ್ಟು ಹೆಚ್ಚಾಗದಂತೆ ತಡೆಯುವ ಪ್ರಯತ್ನಗಳು ಈ ಮಾತುಕತೆಗಳ ಪ್ರಮುಖ ವಿಷಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಕ್ಷಣಾ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ಸಚಿವರು ತಮ್ಮ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಫಜ್ಲುರ್ ರೆಹಮಾನ್ ಎತ್ತಿದರು.

ಇದನ್ನೂ ಓದಿ: ‘ಕಾಶ್ಮೀರಿಗಳಿಗೆ ಪಾಕಿಸ್ತಾನದ ರಕ್ಷಣೆ, ಕೇಂದ್ರ ಸರ್ಕಾರ ಮೌನ’: ತೀವ್ರ ವಿವಾದಕ್ಕೆ ಗುರಿಯಾದ ಫಾರೂಕ್ ಅಬ್ದುಲ್ಲಾ ಹೇಳಿಕೆ

ಪಾಕಿಸ್ತಾನ ಜನರದ್ದು, ಜನರಲ್‌ಗಳದ್ದಲ್ಲ ತಮ್ಮ ಭಾಷಣದಲ್ಲಿ ಫಜ್ಲುರ್ ರೆಹಮಾನ್ ಪಾಕಿಸ್ತಾನದ ಆಡಳಿತ ವ್ಯವಸ್ಥೆಯ ಬಗ್ಗೆಯೂ ಟೀಕೆ ಮಾಡಿದರು. ದೇಶವು ಯಾವುದೇ ಒಬ್ಬ ಜನರಲ್‌ಗೆ ಸೇರಿದ್ದಲ್ಲ, ಅದು ಎಲ್ಲ ನಾಗರಿಕರಿಗೂ ಸೇರಿದೆ ಎಂದು ಹೇಳಿದರು. ಸರ್ಕಾರವು ತನ್ನ ಸಾಂವಿಧಾನಿಕ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ಸಂಸತ್ತಿನ ಅಧಿಕಾರಕ್ಕೆ ಗೌರವ ನೀಡಬೇಕು ಎಂಬುದು ಅವರ ವಾದವಾಗಿತ್ತು. ರಾಜಕೀಯ ಸಂಘರ್ಷ ಮತ್ತು ಹಿಂಸಾಚಾರವನ್ನು ಕಡಿಮೆ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಪ್ರಜಾಪ್ರಭುತ್ವ ಒಪ್ಪಂದದ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು. ಈ ಹೇಳಿಕೆಗಳ ಮೂಲಕ ಪಾಕಿಸ್ತಾನದ ರಾಜಕೀಯದಲ್ಲಿ ಸೇನೆಯ ಪ್ರಭಾವ ಮತ್ತು ಚುನಾಯಿತ ಪ್ರತಿನಿಧಿಗಳ ಅಧಿಕಾರದ ಕುರಿತ ಚರ್ಚೆಯನ್ನು ಅವರು ಮತ್ತೆ ಮುನ್ನೆಲೆಗೆ ತಂದರು.

ಖ್ವಾಜಾ ಆಸಿಫ್ ಬಳಸಿದ್ದ “ಕೋಯಿ ಶರಮ್ ಹೋತಿ ಹೈ, ಕೋಯಿ ಹಯಾ ಹೋತಿ ಹೈ” ಎಂಬ ಮಾತು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಬಹಳ ಪ್ರಸಿದ್ಧವಾಗಿದೆ. ಅವರು ಹಿಂದೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷದ ಶಾಸಕರನ್ನು ಟೀಕಿಸುವಾಗ ಈ ಮಾತನ್ನು ಬಳಸಿದ್ದರು. ನಂತರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿ, ಮೀಮ್‌ಗಳ ರೂಪದಲ್ಲಿಯೂ ಜನಪ್ರಿಯವಾಯಿತು. ರಾಜಕೀಯ ನಾಯಕರು ಪರಸ್ಪರ ವ್ಯಂಗ್ಯವಾಡುವಾಗ ಈ ಮಾತನ್ನು ಬಳಸುವುದು ಸಾಮಾನ್ಯವಾಗಿದೆ. ಈಗ ಫಜ್ಲುರ್ ರೆಹಮಾನ್ ಅದೇ ಮಾತನ್ನು ಖವಾಜಾ ಆಸಿಫ್ ವಿರುದ್ಧ ಬಳಸಿರುವುದು ಪಾಕಿಸ್ತಾನದ ರಾಜಕೀಯದಲ್ಲಿ ಗಮನ ಸೆಳೆದಿದೆ.

ಇರಾನ್‌ನಲ್ಲಿನ ಪ್ರಾದೇಶಿಕ ಭದ್ರತಾ ಮಾತುಕತೆಗಳು ಮತ್ತು ಪಾಕಿಸ್ತಾನದ ಆಂತರಿಕ ರಾಜಕೀಯ ಎರಡೂ ಈ ಘಟನೆಯ ಕೇಂದ್ರಬಿಂದುವಾಗಿವೆ. ಖವಾಜಾ ಆಸಿಫ್ ಅವರ ಹಿಂದಿನ ಹೇಳಿಕೆಯನ್ನೇ ಬಳಸಿಕೊಂಡು ಫಜ್ಲುರ್ ರೆಹಮಾನ್ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಸಂಸತ್ತಿನಲ್ಲಿ ರಾಜಕೀಯ ವ್ಯಂಗ್ಯಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More