AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಬನಾನ್‌ನಿಂದ ಹಿಂದೆ ಸರಿಯಲ್ಲ; ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್

ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇಸ್ರೇಲ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ನಡೆದಿರುವ ಈ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿಲ್ಲ, ಯಾವುದೇ ಕಾರಣಕ್ಕೂ ಲೆಬನಾನ್‌ನಿಂದ ತನ್ನ ಸೈನ್ಯವನ್ನು ಹಿಂಪಡೆಯುವುದಿಲ್ಲ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ದೇಶದ ಭದ್ರತೆಯ ವಿಷಯದಲ್ಲಿ ಇಸ್ರೇಲ್ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆಯೇ ಹೊರತು ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದಿದ್ದಾರೆ.

ಲೆಬನಾನ್‌ನಿಂದ ಹಿಂದೆ ಸರಿಯಲ್ಲ; ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್
Benjamin NetanyahuImage Credit source: AP
ಸುಷ್ಮಾ ಚಕ್ರೆ
|

Updated on: Jun 15, 2026 | 4:01 PM

Share

ಜೆರುಸಲೇಂ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಸಿದ್ಧವಾಗಿರುವ ಶಾಂತಿ ಒಪ್ಪಂದದ ಕುರಿತು ಇಸ್ರೇಲ್ ತನ್ನ ಮೊದಲ ಅಧಿಕೃತ ಮತ್ತು ಆಕ್ರೋಶದ ಪ್ರತಿಕ್ರಿಯೆಯನ್ನು ನೀಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಧ್ಯಸ್ಥಿಕೆಯಲ್ಲಿ ನಡೆದಿರುವ ಈ ಒಪ್ಪಂದವು ಇಸ್ರೇಲ್ ಅನ್ನು ಯಾವುದೇ ರೀತಿಯಲ್ಲೂ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಸ್ಪಷ್ಟಪಡಿಸಿದ್ದಾರೆ.

ಜೂನ್ 19ರ ಶುಕ್ರವಾರದಂದು ಸ್ವಿಜರ್ಲೆಂಡ್‌ನಲ್ಲಿ ಅಧಿಕೃತವಾಗಿ ಸಹಿ ಆಗಲಿರುವ ಈ ಒಪ್ಪಂದವು, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಉಲ್ಲೇಖಿಸಿದೆ. ಆದರೆ, ಇಸ್ರೇಲ್ ಮಾತ್ರ ತನ್ನದೇ ಆದ ಸ್ವತಂತ್ರ ರಕ್ಷಣಾ ನೀತಿಯನ್ನು ಮುಂದುವರಿಸುವುದಾಗಿ ಹೇಳಿದೆ.

“ಟ್ರಂಪ್ ಅವರ ಒಪ್ಪಂದ ನಮಗೆ ಅನ್ವಯಿಸುವುದಿಲ್ಲ. ಇಸ್ರೇಲ್ ದೇಶವು ಅಮೆರಿಕದ ಅಧೀನದಲ್ಲಿಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ! ನಮಗೆ ಅಮೆರಿಕದ ಮೇಲೆ ಅಪಾರ ಪ್ರೀತಿ ಇದೆ ಮತ್ತು ಅಧ್ಯಕ್ಷ ಟ್ರಂಪ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಹಾಗಂತ ಇಸ್ರೇಲ್ ದೇಶವೇನೂ ಯಾವುದೇ ದುರ್ಬಲ ದೇಶವಲ್ಲ” ಎಂದು ಇಸ್ರೇಲ್ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಹೇಳಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ವಿದೇಶಿ ಒತ್ತಡಗಳಿಗೆ ಮಣಿಯುವುದು ಇಸ್ರೇಲ್‌ನ ಭದ್ರತೆಗೆ ಮಾರಕ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ ಎಂದು ಬೆನ್-ಗ್ವಿರ್ ವಾದಿಸಿದ್ದಾರೆ. “ಹಿಂದೆಲ್ಲಾ ನಾವು ಇಸ್ರೇಲ್‌ನ ಭದ್ರತೆಯನ್ನು ಪಣಕ್ಕಿಟ್ಟು ಅಂತಾರಾಷ್ಟ್ರೀಯ ಒತ್ತಡಗಳಿಗೆ ತಲೆಬಾಗಿದಾಗಲೆಲ್ಲಾ, ನಾವು ರಕ್ತದ ಮೂಲಕ ಭಾರಿ ಬೆಲೆ ತೆರಬೇಕಾಗಿ ಬಂದಿದೆ” ಎಂದ ಅವರು 2006ರ ಓಸ್ಲೋ ಒಪ್ಪಂದ ಮತ್ತು ಗಾಜಾದಲ್ಲಿ ಈ ಹಿಂದೆ ತೋರಿದ್ದ ಸಂಯಮವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ಯಾವುದೇ ತರಹದ ರಾಜಿ ಮಾಡಿಕೊಳ್ಳುವುದಿಲ್ಲ. ಯುದ್ಧದ ಸಮಯದಲ್ಲಿ ವಶಪಡಿಸಿಕೊಂಡಿರುವ ಲೆಬನಾನ್ ಭೂಭಾಗದಿಂದ ಇಸ್ರೇಲಿ ಪಡೆಗಳು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್‌ನ ಉತ್ತರದ ಗಡಿ ಗ್ರಾಮಗಳ ಬಳಿ ಮತ್ತೆ ಉಗ್ರರು ಬಂದು ನೆಲೆಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಸಚಿವರು, “ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಒಂದೇ ಒಂದು ಡ್ರೋನ್ ಅಥವಾ ಕ್ಷಿಪಣಿ ಹಾರಿಬಂದರೂ, ಅದಕ್ಕೆ ಪ್ರತಿಯಾಗಿ ಲೆಬನಾನ್‌ನ ರಾಜಧಾನಿ ಬೈರೂತ್‌ನ ಹೆಜ್ಬುಲ್ಲಾ ಭದ್ರಕೋಟೆಯಾದ ದಹಿಯಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಲಿದೆ. ಈ ಹಿಂದೆ ಇದ್ದ ಅದೇ ಆಕ್ರಮಣಕಾರಿ ಶೈಲಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಒಂದು ಕಡೆ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇರಾನ್ ಒಪ್ಪಂದವು ಅಂತಿಮ ಹಂತ ತಲುಪಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಹಾಗೂ ಇರಾನ್ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಅಲ್ಲದೆ, ಇರಾನ್‌ನ ಪರಮಾಣು ಯೋಜನೆಯ ಬಗ್ಗೆ ಚರ್ಚಿಸಲು 60 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಆದರೆ, ಇರಾನ್ ತನ್ನ ಯುರೇನಿಯಂ ದಾಸ್ತಾನನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಹಠ ಹಿಡಿದಿದೆ, ಅಮೆರಿಕ ಅದನ್ನು ತೆಗೆದುಹಾಕಲು ಒತ್ತಾಯಿಸುತ್ತಿದೆ. ಇದರ ನಡುವೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪರಮ ಮಿತ್ರ ರಾಷ್ಟ್ರವಾಗಿರುವ ಇಸ್ರೇಲ್ ಈ ಒಪ್ಪಂದವನ್ನು ಬಹಿರಂಗವಾಗಿಯೇ ತಿರಸ್ಕರಿಸಿರುವುದರಿಂದ, ಈ ಶಾಂತಿ ಒಪ್ಪಂದವು ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ಎಷ್ಟು ಯಶಸ್ವಿಯಾಗಲಿದೆ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More