Citroen Basalt SUV: ಸಖತ್ ಸ್ಟೈಲಿಶ್ ಆಗಿರೋ ಸಿಟ್ರನ್ ಕೂಪೆ ಎಸ್ ಯುವಿ ಭಾರತದಲ್ಲಿ ಅನಾವರಣ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿ ಅನಾವರಣಗೊಳಿಸಿದ್ದು, ಹೊಸ ಕಾರು ಭಾರತ ಮತ್ತು ದಕ್ಷಿಣ ಅಮೆರಿಕಾದಲ್ಲಿ ಮಾರಾಟಗೊಳ್ಳಲಿದೆ.
ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ (Citroen) ಇತ್ತೀಚೆಗೆ ಭಾರತಕ್ಕೆ ಎಂಟ್ರಿ ನೀಡಿದ್ದು, ಹೊಸ ಕಾರುಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಭಾರತದಲ್ಲಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗಿದ್ದು, ಇದೀಗ ತನ್ನ ಬಹುನೀರಿಕ್ಷಿತ ಬಸಾಲ್ಟ್ ಕೂಪೆ ಎಸ್‌ಯುವಿ (Basalt Coupe-SUV) ಅನಾವರಣಗೊಳಿಸಿದೆ. ಹೊಸ ಕಾರನ್ನು ಸಿಟ್ರನ್ ಕಂಪನಿ ಭಾರತ ಮತ್ತು ದಕ್ಷಿಣ ಅಮೆರಿಕದಲ್ಲಿ ಮಾರಾಟ ಮಾಡಲಿದ್ದು, ಹೊಸ ಕಾರು ವಿಶೇಷ ಫೀಚರ್ಸ್ ಗಳೊಂದಿಗೆ ಅಭಿವೃದ್ದಿಗೊಂಡಿದೆ.
ಹೌದು, ಭಾರತದಲ್ಲಿ ಸದ್ಯ ಸಿ3, ಇಸಿ3, ಸಿ3 ಏರ್ ಕ್ರಾಸ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿ ಇದೀಗ 5ನೇ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಕೂಪೆ ಎಸ್ ಯುವಿ ಕಾರು ಸಿ3 ಮತ್ತು ಸಿ3 ಏರ್ ಕ್ರಾಸ್ ಆಧರಿಸಿ ನಿರ್ಮಾಣಗೊಂಡಿದ್ದು, ಇದು ಮಧ್ಯಮ ಕ್ರಮಾಂಕದ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ. ಹೊಸ ಕಾರಿನಲ್ಲಿ ಸಿ3 ಏರ್ ಕ್ರಾಸ್ ನಲ್ಲಿರುವಂತೆ ಹಲವು ತಾಂತ್ರಿಕ ಅಂಶಗಳನ್ನು ನೀಡಲಾಗುತ್ತಿದ್ದು, ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿರಲಿದೆ.
ಹೊಸ ಬಸಾಲ್ಟ್ ವಿಷನ್ ಕಾರು ಆಕರ್ಷಕವಾದ ಕೂಪೆ ಎಸ್‌ಯುವಿ ಶೈಲಿ ಹೊಂದಿರುವುದರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ. ಇದು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಎಂಜಿ ಆಸ್ಟರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಇದಕ್ಕಾಗಿ ಹೊಸ ಕಾರಿನಲ್ಲಿ ಸಿಟ್ರನ್ ಕಂಪನಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಿದೆ.
ಇದನ್ನೂ ಓದಿ: ಅತ್ಯುತ್ತಮ ಫೀಚರ್ಸ್ ಪ್ರೇರಿತ ಕ್ರೆಟಾ ಇವಿ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಇಂಡಿಯಾ
ಬಸಾಲ್ಟ್ ವಿಷನ್ ಕಾರು ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಎಲ್ಇಡಿ ಹೆಡ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಮತ್ತು ಕೂಪೆ ವಿನ್ಯಾಸಕ್ಕೆ ಪೂರಕವಾದ ಶಾರ್ಕ್ ಫಿನ್ ಆಟೆಂನಾ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ. ಹಾಗೆಯೇ ಹೊಸ ಕಾರಿನ ಒಳಾಂಗಣವು ಕೂಡಾ ಸಾಕಷ್ಟು ಸ್ಥಳಾವಕಾಶದೊಂದಿಗೆ ಪ್ರಯಾಣಿಕರಿಗೆ ಪ್ರೀಮಿಯಂ ಚಾಲನಾ ಅನುಭವ ನೀಡಲಿದ್ದು, ಹೊಸ ಕಾರಿನ ಇಂಟಿರಿಯರ್ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ.
ಇನ್ನು ಹೊಸ ಕಾರಿನ ಒಳಭಾಗದಲ್ಲಿ ಸಿಟ್ರನ್ ಕಂಪನಿಯು ಲೆದರ್ ಆಸನಗಳೊಂದಿಗೆ ಫ್ರಂಟ್ ಸೀಟ್ ವೆಂಟೆಲೆಷನ್ ಸಿಸ್ಟಂ ಜೋಡಣೆ ಮಾಡಿದೆ. ಇದರ ಜೊತೆಗೆ ವೆರ್ ಲೆಸ್ ಚಾರ್ಜಿಂಗ್ ಪಾಡ್, ಆಟೋ ಹೆಡ್ ಲ್ಯಾಂಪ್, ಆಟೋ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಗಳಿರಲಿವೆ.
ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್ ಗಳ ಸುರಕ್ಷತೆ ಹೊಂದಿರುವ ಕಾರುಗಳು!
ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಕಂಪನಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಪರಿಚಯಿಸಲಿದೆಯೆಂತೆ. ಟ್ಯೂನ್ ಮಾಡಲಾಗಿರುವ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, ಇದು 108 ಹಾರ್ಸ್ ಪವರ್ ಮತ್ತು 190 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿರಬಹುದಾಗಿದೆ.
ಈ ಮೂಲಕ ಹೊಸ ಬಸಾಲ್ಟ್ ವಿಷನ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ಸಿಟ್ರನ್ ಕಂಪನಿ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆಯೆಂತೆ. ಇದರೊಂದಿಗೆ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಹೊಸ ಕಾರಿನ ಮೂಲಕ ಸಿಟ್ರನ್ ಕಂಪನಿ ಭಾರತದಲ್ಲಿ ತನ್ನ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.
Published On - 10:21 pm, Wed, 27 March 24