Car Comparison: ಟಾಟಾ ಪಂಚ್ ಇವಿಗೆ ಟಕ್ಕರ್ ಕೊಡುತ್ತಾ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್?
MG Windsor EV vs Tata Punch: ಭಾರತದಲ್ಲಿ ಇವಿ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಆರಂಭಿಕ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಟಾಟಾ ಪಂಚ್ ಇವಿಗೆ ಪೈಪೋಟಿಯಾಗಿ ಇದೀಗ ಎಂಜಿ ವಿಂಡ್ಸರ್ ಇವಿ ಬಿಡುಗಡೆಯಾಗಲಿದೆ. ಹಾಗಾದ್ರೆ ಈ ಎರಡು ಕಾರುಗಳಲ್ಲಿ ಯಾವುದು ಉತ್ತಮ? ಏನೆಲ್ಲಾ ವಿಶೇಷತೆಗಳಿವೆ? ಎನ್ನುವ ಮಾಹಿತಿ ಇಲ್ಲಿದೆ.
ಎಲೆಕ್ಟ್ರಿಕ್ ಕಾರುಗಳ (Electric Cars) ಮಾರಾಟವು ಕಳೆದ ಕೆಲ ವರ್ಷಗಳಿಂದ ನಿರಂತರ ಏರಿಕೆಯಾಗುತ್ತಿದ್ದು, ವಿವಿಧ ವಿಭಾಗಗಳಲ್ಲಿ ಹಲವು ಇವಿ ಕಾರುಗಳು ಮಾರುಕಟ್ಟೆ ಪ್ರವೇಶಿಸಿವೆ. ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಸದ್ಯ ಟಾಟಾ ಮೋಟಾರ್ಸ್ ಮೋಟಾರ್ಸ್ ಅಗ್ರಸ್ಥಾನದಲ್ಲಿದ್ದು, ಟಾಟಾ ಇವಿ ಕಾರುಗಳಿಗೆ ಪೈಪೋಟಿಯಾಗಿ ಎಂಜಿ ಮೋಟಾರ್ ವಿವಿಧ ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಕಾಮೆಟ್ ಮತ್ತು ಜೆಡ್ಎಸ್ ಇವಿ ಮಾರಾಟ ಮಾಡುತ್ತಿರುವ ಎಂಜಿ ಮೋಟಾರ್ ಇದೀಗ ವಿಂಡ್ಸರ್ ಇವಿ ಬಿಡುಗಡೆ ಮಾಡಿದೆ. ಇದು ಟಾಟಾ ಪಂಚ್ ಇವಿಗೆ ಪ್ರಬಲ ಪೈಪೋಟಿಯಾಗಿದ್ದು, ಹೊಸ ಕಾರುಗಳ ಮತ್ತಷ್ಟು ಮಾಹಿತಿಯನ್ನು ಇಲ್ಲಿ ತಿಳಿಯೋಣ
ವೆರಿಯೆಂಟ್ ಗಳು ಮತ್ತು ಬೆಲೆ
ಪಂಚ್ ಇವಿ ಕಾರು ಸ್ಟ್ಯಾಂಡರ್ಡ್ ಮತ್ತು ಲಾಂಗ್ ರೇಂಜ್ ಆವೃತ್ತಿಗಳೊಂದಿಗೆ ವಿವಿಧ ಎಂಟು ವೆರಿಯೆಂಟ್ ಗಳನ್ನು ಹೊಂದಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ರೂ. 14.29 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ವಿಂಡ್ಸರ್ ಇವಿ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಕೂಡಾ ರೂ. 9.99 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಶೀಘ್ರದಲ್ಲಿಯೇ ವಿಂಡ್ಸರ್ ಇವಿ ಕಾರಿನ ಇತರೆ ವೆರಿಯೆಂಟ್ ಗಳ ಬೆಲೆ ಕೂಡಾ ಘೋಷಣೆಯಾಗಲಿದೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಪಂಚ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ವೆರಿಯೆಂಟ್ ಗಳಲ್ಲಿ 25kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದರೆ ಲಾಂಗ್ ರೇಂಜ್ ವೆರಿಯೆಂಟ್ ಗಳಲ್ಲಿ 35kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಾಗಿದೆ. ಈ ಮೂಲಕ 25kWh ಬ್ಯಾಟರಿ ಪ್ಯಾಕ್ ಜೋಡಣೆಯ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡಿದ್ದಲ್ಲಿ 35kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ವೆರಿಯೆಂಟ್ ಗಳು ಗರಿಷ್ಠ 421 ಕಿ.ಮೀ ಮೈಲೇಜ್ ನೀಡುತ್ತವೆ.
ವಿಂಡ್ಸರ್ ಇವಿ ಕಾರಿನಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು 38kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 136 ಹಾರ್ಸ್ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 331 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನು ಓದಿ: ಬೆಲೆ ಇಳಿಕೆ ಮೂಲಕ ಇವಿ ಕಾರು ಖರೀದಿದಾರಿಗೆ ಬಂಪರ್ ಆಫರ್ ನೀಡಿದ ಟಾಟಾ ಮೋಟಾರ್ಸ್
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಆಕ್ಟಿ.ಇವಿ (acti.ev) ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಪಂಚ್ ಇವಿ ಮೈಕ್ರೊ ಎಸ್ ಯುವಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಹೊಂದಿದೆ. ಸ್ಪೋಟಿಯಾಗಿರುವ ಮುಂಭಾಗದ ವಿನ್ಯಾಸದೊಂದಿಗೆ 16 ಇಂಚಿನ ಅಲಾಯ್ ವ್ಹೀಲ್, ಆಲ್ ವ್ಹೀಲ್ ಡಿಸ್ಕ್ ಬೇಕ್ ಸೇರಿದಂತೆ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಲೆದರ್ ಆಸನಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹಿಲ್ ಹೋಲ್ಡ್ ಅಸಿಸ್ಟ್, ಕನೆಕ್ಟೆಡ್ ಕಾರ್ ಟೆಕ್, ವೈರ್ ಲೆಸ್ ಚಾರ್ಜರ್, ಮುಂಭಾಗದಲ್ಲಿ ವೆಂಟಿಲೆಟೆಡ್ ಆಸನಗಳು, ಕ್ರೂಸ್ ಕಂಟ್ರೋಲ್ ಮತ್ತು ಆಯ್ಕೆ ರೂಪದಲ್ಲಿ ಸನ್ ರೂಫ್ ಸೌಲಭ್ಯಗಳನ್ನು ನೀಡಲಾಗಿದೆ.
ವಿಂಡ್ಸರ್ ಇವಿ ಕಾರು ಮಾದರಿಯನ್ನು ಎಂಜಿ ಕಂಪನಿಯು ವಿಶಿಷ್ಟ ವಿನ್ಯಾಸ ಮತ್ತು ಆಕಾರದೊಂದಿಗೆ ಐದು ಜನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿದ್ದು, ಇದು ಮೂಲಭೂತವಾಗಿ ದೊಡ್ಡ ಹ್ಯಾಚ್ಬ್ಯಾಕ್ ಅನ್ನು ಹೋಲುತ್ತದೆ. ಹಾಗೆಯೇ ಹೊಸ ಕಾರಿನಲ್ಲಿ ಫ್ಲಶ್ ಡೋರ್ ಹ್ಯಾಂಡಲ್‌ಗಳು, ಎರಡೂ ಬದಿಯಲ್ಲೂ ಫುಲ್ ವಿಡ್ತ್ ಎಲ್ಇಡಿ ಲೈಟ್ ಬಾರ್ ಗಳನ್ನು ನೀಡಲಾಗಿದ್ದು, ಬಂಪರ್‌ನಲ್ಲಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸುವುದರೊಂದಿಗೆ ಸ್ಟೆಪ್ಡ್ ಫ್ರಂಟ್-ಎಂಡ್ ವಿನ್ಯಾಸವನ್ನು ನೀಡಲಾಗಿದೆ. ಜೊತೆಗೆ 15.6 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ಟು ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಫ್ಲೋಟಿಂಗ್ ಸೆಂಟರ್ ಕನ್ಸೋಲ್, 135 ಡಿಗ್ರಿಗಳಷ್ಟು ಒರಗಿಕೊಳ್ಳುವ ಆಸನಗಳು, ವೈರ್ ಲೆಸ್ ಚಾರ್ಜಿಂಗ್, ದೊಡ್ಡದಾದ ಪನೋರಮಿಕ್ ಸನ್‌ರೂಫ್ ಸೌಲಭ್ಯವು ಐಷಾರಾಮಿ ಡ್ರೈವ್ ಅನುಭವ ನೀಡುತ್ತದೆ.
ಸುರಕ್ಷಾ ಸೌಲಭ್ಯಗಳು
ಹೊಸ ಪಂಚ್ ಇವಿ ಎಲ್ಲಾ ವೆರಿಯೆಂಟ್ ಗಳಿಗೂ ಅನ್ವಯಿಸುವಂತೆ ಆರು ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಎಸ್ ಸಿ, ಬ್ಲೈಂಡ್ ವ್ಯೂ ಮಾನಿಟರ್ ಸಿಸ್ಟಂ, ತ್ರಿ ಪಾಯಿಂಟ್ ಸೀಟ್ ಬೆಲ್ಟ್ಸ್ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ನೀಡಲಾಗಿದೆ. ಹಾಗೆಯೇ ಎಂಜಿ ವಿಂಡ್ಸರ್ ನಲ್ಲೂ ಕೂಡಾ 6 ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, 360 ಡಿಗ್ರಿ ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟಿಪಿಎಂಎಸ್ ಸೇರಿದಂತೆ ಹಲವು ಫೀಚರ್ಸ್ ನೀಡಿದೆ.
ಇದನ್ನು ಓದಿ: ಗುಜರಿ ಪಾಲಿಸಿ ಅಡಿ ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್
ಯಾವುದು ಬೆಸ್ಟ್?
ಆರಂಭಿಕ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿರುವ ಟಾಟಾ ಪಂಚ್ ಇವಿಗೆ ಎಂಜಿ ವಿಂಡ್ಸರ್ ಇವಿ ಪ್ರಬಲ ಪೈಪೋಟಿಯಾಗಿ ಎನ್ನಬಹುದು. ಬೆಲೆ ಜೊತೆಗೆ ಬ್ಯಾಟರಿ, ಸುರಕ್ಷಾ ಸೌಲಭ್ಯಗಳು ಸಹ ವಿಂಡ್ಸರ್ ನಲ್ಲಿ ಅತ್ಯುತ್ತಮವಾಗಿದ್ದು, ಪಂಚ್ ಗಿಂತಲೂ ಹೆಚ್ಚಿನ ಮಟ್ಟದ ಕ್ಯಾಬಿನ್ ಸೌಲಭ್ಯದೊಂದಿಗೆ ಆರಾಮದಾಯಕ ಆಸನಗಳನ್ನು ಹೊಂದಿದೆ. ಹೀಗಾಗಿ ಪಂಚ್ ಕಾರಿಗಿಂತಲೂ ವಿಂಡ್ಸರ್ ಇವಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ವಿಂಡ್ಸರ್ ಇವಿ ಬೈ ಬ್ಯಾಕ್ ಆಫರ್ ಮತ್ತು ಬ್ಯಾಟರಿ ಲೀಸ್ ಆಯ್ಕೆಗಳು ಪ್ರಮುಖ ಆಕರ್ಷಣೆಯಾಗಲಿವೆ ಎನ್ನಬಹುದು.