Budget History: ಭಾರತದ ಬಜೆಟ್​ಗಿದೆ 162 ವರ್ಷಗಳ ಇತಿಹಾಸ: ಆರ್ಥಿಕ ಶಿಸ್ತಿನ ಬುನಾದಿ ಹಾಕಿದ ಜೇಮ್ಸ್ ವಿಲ್ಸನ್ ನೆನಪು

Budget 2022: ಬ್ರಿಟಿಷರ ಕಾಲದಿಂದಲೂ ದೇಶದಲ್ಲಿ ಬಜೆಟ್ ಮಂಡನೆಯ ಪರಂಪರೆ ಆರಂಭವಾಯಿತು. ದೇಶದ ಮೊದಲ ಬಜೆಟ್ ಹೇಗಿತ್ತು? ಹೇಗೆ ರೂಪುಗೊಂಡಿತ್ತು, ಇಲ್ಲಿದೆ ವಿವರ.

Budget History: ಭಾರತದ ಬಜೆಟ್​ಗಿದೆ 162 ವರ್ಷಗಳ ಇತಿಹಾಸ: ಆರ್ಥಿಕ ಶಿಸ್ತಿನ ಬುನಾದಿ ಹಾಕಿದ ಜೇಮ್ಸ್ ವಿಲ್ಸನ್ ನೆನಪು
ಬ್ರಿಟಿಷ್ ಭಾರತದ ಮೊದಲ ಬಜೆಟ್ ಮಂಡಿಸಿದ ಜೇಮ್ಸ್​ ವಿಲ್ಸನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 01, 2022 | 6:30 AM

ಕೊರೊನಾ ಇರಲಿ, ಬೇರೆ ಯಾವುದೇ ಸಂಕಷ್ಟವೇ ಬರಲಿ. ಬಜೆಟ್ (Budget 2022) ಮಂಡನೆ ಮಾತ್ರ ಎಂದಿಗೂ ನಿಲ್ಲುವಂತಿಲ್ಲ. ಬದಲಿಗೆ, ದೇಶಕ್ಕೆ ವಿಷಮ ಕಾಲ ಬಂದಂತೆಲ್ಲ ಬಜೆಟ್​ನ​ ಮಹತ್ವ, ಜವಾಬ್ದಾರಿಗಳು ಹೆಚ್ಚುತ್ತಲೇ ಹೋಗುತ್ತವೆ. ಕೊರೊನಾ 3ನೇ ಅಲೆಯ ಇಳಿಗಾಲದಲ್ಲಿ, ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಸಂಧಿಕಾಲದಲ್ಲಿ ಮಂಡನೆಯಾಗಲಿರುವ ಈ ಬಜೆಟ್ ಮೇಲೆ ನಿರೀಕ್ಷೆಯ ಭಾರ ಪ್ರಬಲವಾಗಿಯೇ ಇದೆ. ಈವರೆಗೆ ನೀವೂ ಅಂಥ ಹಲವು ಬರಹಗಳನ್ನು ಓದಿರುತ್ತೀರಿ, ಆದರೆ ಈ ಲೇಖನದ ಉದ್ದೇಶ ಅದಲ್ಲ. ಬ್ರಿಟಿಷರ ಕಾಲದಿಂದಲೂ ದೇಶದಲ್ಲಿ ಬಜೆಟ್ ಮಂಡನೆಯ ಪರಂಪರೆ ಆರಂಭವಾಯಿತು. ದೇಶದ ಮೊದಲ ಬಜೆಟ್ ಹೇಗಿತ್ತು? ಹೇಗೆ ರೂಪುಗೊಂಡಿತ್ತು, ಇಲ್ಲಿದೆ ವಿವರ.

ಅಧಿಕೃತವಾಗಿ ಹೇಳುವುದಾದರೆ ಭಾರತದಲ್ಲಿ ಬಜೆಟ್ ಮಂಡನೆ ಶುರುವಾದ 162ನೇ ವರ್ಷವಿದು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದದ್ದು 1857. ಬ್ರಿಟಿಷರು ಈ ಹೋರಾಟವನ್ನು ಸಿಪಾಯಿ ದಂಗೆ ಎಂದು ಕರೆದು ಅದರ ಪರಿಣಾಮಗಳ ತೀವ್ರತೆ ಕಡಿಮೆ ಮಾಡಲು ಯತ್ನಿಸಿದರಾದರೂ, ಭಾರತವನ್ನು ಇನ್ನಷ್ಟು ವರ್ಷಗಳ ಹಿಡಿತದಲ್ಲಿರಿಸಿಕೊಳ್ಳಬೇಕೆಂದರೆ ಆಡಳಿತ ಸುಧಾರಣೆ ಅನಿವಾರ್ಯ ಎಂದು ಬ್ರಿಟಿಷರಿಗೆ ಮನವರಿಕೆಯಾಯಿತು. ಭಾರತದ ಆಡಳಿತ ಚುಕ್ಕಾಣಿಯು ಈಸ್ಟ್ ಇಂಡಿಯಾ ಕಂಪನಿಯಿಂದ ನೇರವಾಗಿ ಬ್ರಿಟನ್ ಸರ್ಕಾರದ ಸುಪರ್ದಿಗೆ ಬಂತು. ಈ ಬೆಳವಣಿಗೆಯಾದ ಎರಡು ವರ್ಷಕ್ಕೆಲ್ಲ, ಅಂದರೆ 1860ರಲ್ಲೇ ಮೊದಲ ಬಜೆಟ್ ಮಂಡನೆಯಾಗಿತ್ತು.

ಬ್ರಿಟಿಷ್ ಆಡಳಿತದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆಯ ಹಿಂದೆ ಓರ್ವ ಟೋಪಿ ತಯಾರಕರೋರ್ವರು ಇದ್ದರು. ಸ್ವಾತಂತ್ರ್ಯಾಪೂರ್ವದಲ್ಲೇ ಮಂಡನೆಯಾದ ಮೊದಲ ಬಜೆಟ್​ನ ಹಿಂದಿನ ತಲೆ ಸ್ಕಾಟ್​ಲ್ಯಾಂಡ್​ನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ . ಟೋಪಿ ತಯಾರಿಕೆಯ ಮೂಲಕ ವೃತ್ತಿ ಜೀವನ ಆರಂಭಿಸಿದ ಜೇಮ್ಸ್ ವಿಲ್ಸನ್​ ಬ್ರಿಟನ್ ಸಂಸತ್​ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ವೈಸ್​ರಾಯ್ ಲಾರ್ಡ್​ ಕನ್ನಿಂಗ್​ಹ್ಯಾಮ್​ ರಚಿಸಿದ ಆರ್ಥಿಕ ಸಮಿತಿಯ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ್ದರು.

ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಬ್ರಿಟಿಷ್ ಆಡಳಿತ ಹೈರಾಣಾಗಿತ್ತು. ಸೇನೆ ಸುಧಾರಣೆಗೆ ಹೆಚ್ಚು ಹಣ ಸುರಿಯಲು ಆರ್ಥಿಕ ಸ್ಥಿತಿಯೂ ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇಂತಹ ದುಸ್ಥಿತಿಯಲ್ಲಿ ಭಾರತಕ್ಕೆ ಕಾಲಿಟ್ಟವರು ಜೇಮ್ಸ್ ವಿಲ್ಸನ್. ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಜೇಮ್ಸ್ ವಿಲ್ಸನ್ ಕಾಲದಲ್ಲೇ ಆದಾಯ ತೆರಿಗೆ ಪರಿಕಲ್ಪನೆ ಮುಂದಿಟ್ಟ. ಅವರ ಈ ಕಲ್ಪನೆ ಆ ಕಾಲದ ಬೃಹತ್ ವ್ಯಾಪಾರಿಗಳ, ಜಮೀನ್ದಾರರ ನಿದ್ದೆಗೆಡಿಸಿತ್ತು! ಭಾರತದ ಸರ್ಕಾರಿ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಟಿಷ್ ಮಾದರಿಯ ಅಡಿಪಾಯ ಹಾಕಿದವರ ಸಾಲಲ್ಲಿ ಜೇಮ್ಸ್ ವಿಲ್ಸನ್ ಹೆಸರು ಮೊದಲ ಸಾಲಲ್ಲಿ ನಿಲ್ಲುತ್ತದೆ ಎಂದು ಸರ್ ರಿಚರ್ಡ್ ಟೆಂಪಲ್ ತಮ್ಮ ಫೈನಾನ್ಶಿಯಲ್ ಫೌಂಡೇಶನ್ ಆಫ್​ ದಿ ಬ್ರಿಟಿಷ್ ರಾಜ್ ಎಂಬ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

ವ್ಯಾಪಾರ ವಹಿವಾಟುಗಳಿಗೆ ಸರ್ಕಾರ ಭದ್ರತೆ ನೀಡುತ್ತದೆ. ಹೀಗಾಗಿ, ಸರ್ಕಾರಕ್ಕೆ ತೆರಿಗೆ ನೀಡಬೇಕೆಂದು ಬಹುವಾಗಿ ಜೇಮ್ಸ್ ವಿಲ್ಸನ್ಸ್ ಪ್ರತಿಪಾದಿಸಿದ್ದರು. ಪ್ರಸಿದ್ಧ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್​ ಸ್ಥಾಪಿಸಿದವರೂ ಇವರೇ. ಪತ್ರಿಕೋದ್ಯಮದಲ್ಲೂ ಹೆಸರೊತ್ತಿದ್ದ ಅವರು ಈಗ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ‘ದಿ ಎಕನಾಮಿಸ್ಟ್’​ ನಿಯತಕಾಲಿಕೆಯ ಸ್ಥಾಪಕ ಸಂಪಾದಕರಾಗಿ 16 ವರ್ಷ ಸೇವೆ ಸಲ್ಲಿಸಿದ್ದರು. ಇತಿಹಾಸದ ಹಾಳೆಗಳಲ್ಲಿ ಬಜೆಟ್​ನ ಹಿಂದಿನ ಕಥೆಗಳನ್ನು ಹುಡುಕುತ್ತಾ ಸಾಗಿದರೆ ತೆರೆದುಕೊಳ್ಳುವ ದಾರಿ ವಿಸ್ಮಯಕಾರಿ. ಟೋಪಿ ತಯಾರಿಕೆಯಿಂದ ವೃತ್ತಿ ಜೀವನ ಆರಂಭಿಸಿ, ವಸಾಹಾತು ಭಾರತದ ಬಜೆಟ್ ರೂಪಿಸುವವರೆಗೆ ಬೆಳೆದ ಜೇಮ್ಸ್ ವಿಲ್ಸನ್ ನಮಗೆ ನೆನಪಾಗಬೇಕು.

ಬರಹ: ಗುರುಗಣೇಶ್ ಭಟ್ ಡಬ್ಗುಳಿ

ಇದನ್ನೂ ಓದಿ: Budget 2022: ಕೇಂದ್ರ ಬಜೆಟ್​ನಿಂದ ಕರ್ನಾಟಕದ ನಿರೀಕ್ಷೆಗಳಿವು: ರಾಜ್ಯದ ಅಭಿವೃದ್ಧಿಗೆ ಸಿಗಲಿದೆಯೇ ನಿರೀಕ್ಷಿತ ನೆರವು ಇದನ್ನೂ ಓದಿ: Budget 2022: ಕೃಷಿ ಸಾಲ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ರೈಲ್ವೆಗೆ ಹೆಚ್ಚಿನ ಅನುದಾನ; ಬಜೆಟ್​ ಕುರಿತ ಪ್ರಮುಖ ಬೇಡಿಕೆಗಳಿವು