ಬಹಳ ಆಳಕ್ಕೆ ಹೋಗುತ್ತಿರುವ ಭಾರತ ಆರ್ಮೇನಿಯಾ ಮಿಲಿಟರಿ ಸಂಬಂಧ; ಅಸ್ತ್ರ ಕ್ಷಿಪಣಿ ಖರೀದಿಸಲು ಮುಂದು

India Armenia military relationship: ಏಷ್ಯಾ ಮತ್ತು ಯೂರೋಪ್​ನ ಗಡಿಭಾಗದಲ್ಲಿರುವ ಕೌಕೇಶಿಯನ್ ಪ್ರದೇಶದಲ್ಲಿರುವ ಆರ್ಮೇನಿಯಾ ದೇಶ ಭಾರತದಿಂದ ಅತಿಹೆಚ್ಚು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಭಾರತದಿಂದ ಅಸ್ತ್ರ ಕ್ಷಿಪಣಿ, ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆಯಲು ಆರ್ಮೇನಿಯಾ ಆಲೋಚಿಸುತ್ತಿದೆ. ಭಾರತ ಮತ್ತು ಆರ್ಮೇನಿಯಾ ನಡುವಿನ ಮಿಲಿಟರಿ ಸಂಬಂಧದ ಬಗ್ಗೆ ಒಂದು ವರದಿ.

ಬಹಳ ಆಳಕ್ಕೆ ಹೋಗುತ್ತಿರುವ ಭಾರತ ಆರ್ಮೇನಿಯಾ ಮಿಲಿಟರಿ ಸಂಬಂಧ; ಅಸ್ತ್ರ ಕ್ಷಿಪಣಿ ಖರೀದಿಸಲು ಮುಂದು
ಅಸ್ತ್ರ ಕ್ಷಿಪಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2024 | 7:01 PM

ನವದೆಹಲಿ, ಸೆಪ್ಟೆಂಬರ್ 16: ಕೌಕೇಶಿಯನ್ ಪ್ರದೇಶದಲ್ಲಿ ಸಂಘರ್ಷಗಳಿಂದ ಜರ್ಝರಿತವಾಗಿರುವ ಆರ್ಮೇನಿಯಾ ದೇಶ ಈಗ ತನ್ನ ಮಿಲಿಟರಿ ಅಗತ್ಯತೆಗಳಿಗೆ ಭಾರತದ ಮೇಲೆ ಹೆಚ್ಚೆಚ್ಚು ಅವಲಂಬಿತವಾಗುತ್ತಿದೆ. ಅದರ ಮಿಲಿಟರಿ ಭದ್ರತೆಗೆ ಭಾರತದಿಂದಲೇ ಬಹುತೇಕ ಶಸ್ತ್ರಾಸ್ತ್ರಗಳು ಪೂರೈಕೆ ಆಗುತ್ತಿವೆ. ರಷ್ಯಾ ಮೇಲೆ ಇದ್ದ ಅವಲಂಬನೆಯನ್ನು ಆರ್ಮೇನಿಯಾ ಕ್ರಮೇಣ ಕಡಿಮೆ ಮಾಡುತ್ತಿದೆ. ಭಾರತದಲ್ಲಿ ಸ್ವಂತವಾಗಿ ತಯಾರಿಸಲಾಗುತ್ತಿರುವ ಶಸ್ತ್ರಾಸ್ತ್ರಗಳ ಬಗ್ಗೆ ಆ ದೇಶ ಆಸಕ್ತಿ ತೋರುತ್ತಿದೆ. ಇದೀಗ ಆಕಾಶದಲ್ಲಿ ಸಿಡಿಗುಟ್ಟಿಸಬಲ್ಲ ಅಸ್ತ್ರ ಕ್ಷಿಪಣಿಯನ್ನು ಖರೀದಿಸಲು ಆರ್ಮೇನಿಯಾ ಮುಂದಾಗಿದೆ. ಹಾಗೆಯೇ, ರಷ್ಯಾ ನಿರ್ಮಿತ ಸುಖೋಯ್ 30 ಯುದ್ಧವಿಮಾನಗಳನ್ನು ಅಪ್​ಗ್ರೇಡ್ ಮಾಡಲು ಭಾರತದ ನೆರವು ಯಾಚಿಸುತ್ತಿದೆ ಆರ್ಮೇನಿಯಾ. ಈ ಸಂಬಂಧ ಎರಡೂ ದೇಶಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ದಿ ಪ್ರಿಂಟ್ ವೆಬ್​ಸೈಟ್ ವರದಿ ಮಾಡಿದೆ.

ಆರ್ಮೇನಿಯಾ ದೇಶ 2019ರಲ್ಲಿ ನಾಲ್ಕು ಸುಖೋಯ್-30 ಜೆಟ್ ವಿಮಾನಗಳನ್ನು ಖರೀದಿಸಿತ್ತು. ಆದರೆ, ಇದಕ್ಕೆ ಬೇಕಾದ ಏರ್ ಟು ಸರ್ಫೇಸ್ ಕ್ಷಿಪಣಿಗಳು ಇಲ್ಲದ ಕಾರಣ ಈ ಜೆಟ್ ವಿಮಾನಗಳು ಹಲ್ಲು ಕಿತ್ತ ಹಾವಿನಂತಾಗಿವೆ. ಈ ಯುದ್ಧವಿಮಾನಗಳಿಗೆ ಕ್ಷಿಪಣಿಗಳನ್ನು ಅಳವಡಿಸಲಾಗುವ ರೀತಿಯಲ್ಲಿ ಸರಿಪಡಿಸಬೇಕೆಂದು ಭಾರತದ ಸಹಾಯ ಯಾಚಿಸುತ್ತಿದೆ ಆರ್ಮೇನಿಯಾ.

ಇದನ್ನೂ ಓದಿ: ರಾಧಿಕಾ ಗುಪ್ತಾ ಶ್ರೀಮಂತ ಉದ್ಯಮಿಯಾದರೂ ಲಕ್ಷುರಿ ಕಾರು ಒಲ್ಲೆ ಎನ್ನುವುದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

ಭಾರತದ ಬಳಿ 272 ಸುಖೋಯ್-20 ಎಂಕೆಐ ಜೆಟ್​ಗಳಿವೆ. ಇವು ಆರ್ಮೇನಿಯಾ ಬಳಿ ಇರುವ ಸುಖೋಯ್​ಗಳಿಗಿಂತ ಭಿನ್ನ. ಭಾರತ ಈ ಜೆಟ್ ವಿಮಾನಕ್ಕೆ ಸಾಕಷ್ಟು ಮಾರ್ಪಾಡು ಮಾಡಿಕೊಂಡಿದೆ. ಮೂಲ ಜೆಟ್ ವಿಮಾನಕ್ಕಿಂತ ಭಾರತದ್ದು ತುಸು ಭಿನ್ನವಾಗಿದೆ. ಈಗ ಆರ್ಮೇನಿಯಾದ ಈ ಸುಖೋಯ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ತುಸು ಸಂಕೀರ್ಣವಾಗಬಹುದು.

ಆರ್ಮೇನಿಯಾಗೆ ಯಾಕೆ ಬೇಕು ಶಸ್ತ್ರಾಸ್ತ್ರ?

ಆರ್ಮೇನಿಯಾ ಮತ್ತು ಅಜರ್​ಬೈಜಾನ್ ಸಾಂಪ್ರದಾಯಿಕ ವೈರತ್ವ ಇರುವ ನೆರೆಯ ದೇಶಗಳಾಗಿವೆ. 2020ರಲ್ಲಿ ನಾಗೊರ್ನೋ ಕಾರಾಬಾಖ್ ಪ್ರದೇಶ ಸಂಬಂಧ ಎರಡೂ ದೇಶಗಳ ಮಧ್ಯೆ ಘರ್ಷಣೆ ಆರಂಭವಾಗಿತ್ತು. ಆರ್ಮೇನಿಯಾ ಮೇಲೆ ಅಜರ್​ಬೈಜಾನ್ ಎರಗಿ ಹೋಗಿತ್ತು. ಈ ಯುದ್ಧದಲ್ಲಿ ಅಜರ್​ಬೈಜಾನ್ ಮೇಲುಗೈ ಸಾಧಿಸಿದೆ.

ಇದನ್ನೂ ಓದಿ: ಸಾಲ ಕೇಳಿದ ಪಾಕಿಸ್ತಾನಕ್ಕೆ ಭಾರತದ ಉಲ್ಲಾಸ್ ಸ್ಕೀಮ್ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ ಎಡಿಬಿ

ಈ ಯುದ್ಧದ ಬಳಿಕ ಆರ್ಮೇನಿಯಾ ತನ್ನ ಮಿಲಿಟರಿ ಅಗತ್ಯಗಳಿಗೆ ಭಾರತದತ್ತ ಹೊರಳಲು ಆರಂಭಿಸಿದೆ. ಅಜರ್​ಬೈಜಾನ್​ಗೆ ಪಾಕಿಸ್ತಾನ, ಟರ್ಕಿಯ ಬೆಂಬಲ ಇದೆ. ಆರ್ಮೇನಿಯಾ ತನ್ನ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಪಡೆಯುತ್ತಿತ್ತು. ಆದರೆ, ರಷ್ಯಾ ಆರ್ಮೇನಿಯಾಗೆ ಏಕಪಕ್ಷೀಯ ಬೆಂಬಲ ನೀಡಲು ಸಿದ್ಧ ಇಲ್ಲ. ಆರ್ಮೇನಿಯಾ ಮತ್ತು ಅಜರ್​ಬೈಜಾನ್ ಎರಡೂ ದೇಶಗಳು ರಷ್ಯಾಗೆ ಬೇಕಿವೆ. ಹೀಗಾಗಿ ಯಾರ ಪರ ನಿಲುವನ್ನು ರಷ್ಯಾ ತಳೆದಿಲ್ಲ.

ಈ ಕಾರಣಕ್ಕೆ ಆರ್ಮೇನಿಯಾ ತನ್ನ ಮಿಲಿಟರಿ ಅಗತ್ಯಗಳಿಗೆ ಭಾರತವನ್ನು ಸಂಪರ್ಕಿಸುತ್ತಾ ಬಂದಿದೆ. ಹಲವು ಕ್ಷಿಪಣಿ, ರಾಡಾರ್, ಆರ್ಟಿಲರಿ ಗನ್, ಸೈಟಿಂಗ್ ಸಿಸ್ಟಮ್ಸ್ ಇತ್ಯಾದಿ ಸಾಕಷ್ಟು ಯುದ್ಧಾಸ್ತ್ರ, ಮದ್ದುಗುಂಡುಗಳನ್ನು ಭಾರತವು ಆರ್ಮೇನಿಯಾಗೆ ಸರಬರಾಜು ಮಾಡಿದೆ. ಆಕಾಶ್ 1ಎಸ್ ಎಂಬ ಏರ್ ಡಿಫೆನ್ಸ್ ಸಿಸ್ಟಂ, ಹಾಗು ಪಿನಾಕ ಎಂಬ ರಾಕೆಟ್ ಸಿಸ್ಟಂ ಅನ್ನು ಆರ್ಮೇನಿಯಾ ಖರೀದಿಸುತ್ತಿದೆ. ಅಸ್ತ್ರ ಕ್ಷಿಪಣಿ ಜೊತೆಗೆ, ಶಕ್ತಿಶಾಲಿಯಾದ ಬ್ರಹ್ಮೋಸ್ ಕ್ಷಿಪಣಿಯನ್ನೂ ಪಡೆಯಲು ಆರ್ಮೇನಿಯಾ ಆಲೋಚಿಸುತ್ತಿದೆ.

ಇದನ್ನೂ ಓದಿ: ಭಾರತದ ಚಿಪ್ ತಯಾರಕ ಪಾಲಿಮಾಟೆಕ್ ಸಂಸ್ಥೆಯಿಂದ ಬಹರೇನ್​ನಲ್ಲಿ ಹೊಸ ಘಟಕ; 3 ವರ್ಷದಲ್ಲಿ 850 ಕೋಟಿ ರೂ ಹೂಡಿಕೆ

ಭಾರತದ ಡಿಫೆನ್ಸ್ ರಫ್ತಿನಲ್ಲಿ ಆರ್ಮೇನಿಯಾ ಪಾಲು ಅತಿ ಹೆಚ್ಚು. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಕೌಕೇಶಿಯಾ ಪ್ರದೇಶದಲ್ಲಿ ಆರ್ಮೇನಿಯಾ ದೇಶವು ಭಾರತಕ್ಕೆ ಸ್ಟ್ರಾಟಿಜಿಕ್ ಪಾರ್ಟ್ನರ್ ಆಗಬಹುದು. ಹೀಗಾಗಿ, ಆರ್ಮೇನಿಯಾಗೆ ಮಿಲಿಟರಿ ಶಸ್ತ್ರಗಳ ಮಾರಾಟದಿಂದ ಭಾರತಕ್ಕೆ ಬೇರೆ ಬೇರೆ ರೀತಿಯಲ್ಲಿ ಲಾಭಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ