Bad Loans: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಬ್ಯಾಡ್ ಲೋನ್ ಪ್ರಮುಖಾಂಶಗಳಿವು
ಏನಿದು ಬ್ಯಾಡ್ ಬ್ಯಾಂಕ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಈ ಲೇಖನದಲ್ಲಿ ವಿವರ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಣೆ ಮಾಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರದಂದು ಘೋಷಣೆ ಮಾಡಿರುವ ಪ್ರಕಾರ, ಬ್ಯಾಂಕ್ಗಳಿಂದ ಬ್ಯಾಡ್ ಲೋನ್ಗಳನ್ನು ಖರೀದಿ ಮಾಡುವುದಕ್ಕೆ ನ್ಯಾಷನಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್ (NARCL)ಗೆ ಖಾತ್ರಿಯಾಗಿ 30,600 ಕೋಟಿ ರೂಪಾಯಿ ಒದಗಿಸಲಿದೆ. ಸರ್ಕಾರದ ಈ ಖಾತ್ರಿ 5 ವರ್ಷಗಳ ಅವಧಿಗೆ ಸಿಂಧುವಾಗಿರುತ್ತದೆ. ಭಾರತ ಸಾಲ ತೀರುವಳಿ ಕಂಪೆನಿ ಲಿಮಿಟೆಡ್ನ (IDRCL) ಕೂಡ ಸ್ಥಾಪಿಸಲಾಗುವುದು. ಈ ನಿರ್ಧಾರದ ಬಗ್ಗೆ ವರದಿಗಾರರಿಗೆ ವಿವರ ನೀಡಿದ ಹಣಕಾಸು ಸಚಿವೆ, ಕಳೆದ ಆರು ವರ್ಷಗಳಲ್ಲಿ ಬ್ಯಾಂಕ್ಗಳು ಬಾಕಿ ಉಳಿಸಿಕೊಂಡ ಸಾಲದಲ್ಲಿ 5.01 ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ಅದರಲ್ಲಿ 3.1 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು 2018ರ ಮಾರ್ಚ್ನಿಂದ ವಸೂಲಿ ಮಾಡಲಾಗಿದೆ ಎಂದು ಹೇಳಿದರು. ಇಂಥ ದೊಡ್ಡ ಸಂಗತಿ ಬಗ್ಗೆ ಗೊತ್ತಿರಬೇಕಾದ ಮಾಹಿತಿಗಳು ಇಲ್ಲಿವೆ.
ಸರ್ಕಾರ ಬೆಂಬಲಿತ ಭದ್ರತೆ ಅಗತ್ಯ NARCLನಿಂದ ಬ್ಯಾಂಕ್ಗಳಿಂದ 15:85ರ ಅನುಪಾತದಲ್ಲಿ ಬ್ಯಾಡ್ಲೋನ್ಗಳನ್ನು ಖರೀದಿ ಮಾಡಲಾಗುತ್ತದೆ. ಶೇ 15ರಷ್ಟು ನಿವ್ವಳ ಆಸ್ತಿ ಮೌಲ್ಯವನ್ನು ನಗದಿನಲ್ಲಿ ಪಾವತಿಸಲಾಗುತ್ತದೆ ಹಾಗೂ ಬಾಕಿಗೆ ಸೆಕ್ಯೂರಿಟಿ ರಸೀಟ್ (SRs) ವಿತರಿಸಲಾಗುತ್ತದೆ. ಒಂದು ಮಿತಿಯ ನಂತರದಲ್ಲಿ ಮೌಲ್ಯವನ್ನು ಮೀರಿ ನಷ್ಟವಾದಲ್ಲಿ ಸರ್ಕಾರದ ಖಾತ್ರಿ ಬಳಕೆ ಆಗುತ್ತದೆ.
ಏನಿದು NARCL? ಕಂಪೆನಿಗಳ ಕಾಯ್ದೆ ಅಡಿಯಲ್ಲಿ NARCL ಇನ್ಕಾರ್ಪೊರೇಟ್ ಆಗಿದೆ. ಅಸೆಟ್ ರೀಕನ್ಸ್ಟ್ರಕ್ಷನ್ ಕಂಪೆನಿ (ARC) ಆಗಿ ಆರ್ಬಿಐ ಬಳಿ ಲೈಸೆನ್ಸ್ಗೆ ಅರ್ಜಿ ಹಾಕಿದೆ. ಬ್ಯಾಂಕ್ಗಳಿಂದ NARCL ಸ್ಥಾಪಿಸಿದ್ದು, ತಮ್ಮ ಒತ್ತಡದ ಆಸ್ತಿಗಳ ತೀರುವಳಿಗಳ ಅಗ್ರಿಗೇಟ್ ಮತ್ತು ಕನ್ಸಾಲಿಡೇಟ್ ಮಾಡಲು ಬಳಸಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು NARCLನಲ್ಲಿ ಶೇ 51ರಷ್ಟು ಮಾಲೀಕತ್ವವನ್ನು ಹೊಂದಿರುತ್ತವೆ.
ಏನಿದು ಭಾರತ ಸಾಲ ತೀರುವಳಿ ಕಂಪೆನಿ ಲಿಮಿಟೆಡ್ (IDRCL)? IDRCL ಎಂಬುದು ಸೇವಾ ಕಂಪೆನಿ/ಕಾರ್ಯ ನಿರ್ವಹಣೆ ಸಂಸ್ಥೆ. ಮಾರುಕಟ್ಟೆ ವೃತ್ತಿಪರರು ಹಾಗೂ ತಜ್ಞರ ಮೂಲಕ ಆಸ್ತಿಯನ್ನು ನಿರ್ವಹಣೆ ಮಾಡುತ್ತದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು (PSBs) ಮತ್ತು ಸಾರ್ವಜನಿಕ ಎಫ್ಐ (ಹಣಕಾಸು ಸಂಸ್ಥೆ)ಗಳು ಗರಿಷ್ಠ ಪ್ರಮಾಣದ ಶೇ 49ರಷ್ಟು ಪಾಲನ್ನು ಹೊಂದಿರುತ್ತವೆ ಮತ್ತು ಉಳಿದದ್ದನ್ನು ಖಾಸಗಿ ವಲಯದ ಸಾಲ ನೀಡುವ ಸಂಸ್ಥೆಗಳು ಇಟ್ಟುಕೊಂಡಿರುತ್ತವೆ.
28 ARCಗಳು ಈಗಾಗಲೇ ಇರುವಾಗ NARCL- IDRCLನಂಥ ರಚನೆಗಳು ಏಕೆ ಬೇಕಾಗುತ್ತವೆ? ಈಗಾಗಲೇ ಇರುವ ARCಗಳು ಸಣ್ಣ ಮೊತ್ತದ ಸಾಲಗಳು ಒತ್ತಡದಲ್ಲಿ ಸಿಲುಕಿದಾಗ ಅವುಗಳ ತೀರುವಳಿಗೆ ಸಹಾಯ ಮಾಡುತ್ತವೆ. ವಿವಿಧ ಲಭ್ಯ ಇರುವ ವ್ಯವಸ್ಥೆಗಳು, ಐಬಿಸಿ ಉಪಯಕ್ತ ಎಂದು ಸಾಬೀತಾಗಿದೆ. ಆದರೆ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿಗಳಿಗೆ (NPAs) ಹೆಚ್ಚುವರಿಯಾಗಿ ಪರ್ಯಾಯ ಆಯ್ಕೆಗಳು ಬೇಕಾಗುತ್ತವೆ ಮತ್ತು NARCL- IDRCL ರಚನೆಯನ್ನು ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಲಾಯಿತು.
ಸರ್ಕಾರದ ಖಾತ್ರಿ ಏಕೆ ಬೇಕಾಗುತ್ತದೆ? ಬಾಕಿ ಉಳಿಸಿಕೊಂಡ ಎನ್ಪಿಎ ಜತೆ ವ್ಯವಹರಿಸುವ ಈ ರೀತಿಯ ತೀರುವಳಿ ವ್ಯವಸ್ಥೆ ಏನಿದೆ, ಇದಕ್ಕೆ ಸರ್ಕಾರದ ಬೆಂಬಲ ಬೇಕಾಗುತ್ತದೆ. ಇದು ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದು ಮತ್ತು ಅನಿಶ್ಚಿತತೆ ಎದುರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸರ್ಕಾರದ ಖಾತ್ರಿ 30,600 ಕೋಟಿ ರೂಪಾಯಿ ತನಕ NARCL ವಿತರಿಸಿದ ಎಸ್ಆರ್ ಮೂಲಕ ಬೆಂಬಲಿಸಲಾಗುತ್ತದೆ. ಈ ಖಾತ್ರಿ 5 ವರ್ಷಗಳ ಸಿಂಧುತ್ವ ಹೊಂದಿರುತ್ತದೆ. ಯಾವಾಗ ಪೂರ್ತಿ ತೀರುವಳಿ ಆಗುತ್ತದೋ ಅಥವಾ ಪೂರ್ಣವಾಗಿ ಕೊನೆಗೊಳಿಸಲಾಗುತ್ತದೋ ಆಗ ಸರ್ಕಾರದ ಖಾತ್ರಿಯನ್ನು ಬಳಸಲಾಗುತ್ತದೆ. ಎಸ್ಆರ್ನ ಮುಖಬೆಲೆ ಮತ್ತು ವಾಸ್ತವಿಕ ಮೊತ್ತದ ವ್ಯತ್ಯಾಸದ ಕೊರತೆಯನ್ನು ಸರ್ಕಾರದ ಖಾತ್ರಿ ತುಂಬಿಕೊಡುತ್ತದೆ. ಎಸ್ಆರ್ಗಳು ವಹಿವಾಟು ನಡೆಸುವ ಮಟ್ಟಕ್ಕೆ ಅವುಗಳಿಗೆ ಭಾರತ ಸರ್ಕಾರದ ಕಡೆಯಿಂದ ನಗದು ಲಭ್ಯತೆಯನ್ನು ಖಾತ್ರಿ ನೀಡಲಾಗುತ್ತದೆ.
IDRCL ಹಾಗೂ NARCL ಹೇಗೆ ಕೆಲಸ ಮಾಡುತ್ತದೆ? NARCLನಿಂದ ಲೀಡ್ ಬ್ಯಾಂಕ್ನಿಂದ ಆಫರ್ ಮಾಡಿ, ಆಸ್ತಿಯನ್ನು ಖರೀದಿ ಮಾಡಲಾಗುತ್ತದೆ. ಒಂದು ಸಲ NARCL ಆಫರ್ ಒಪ್ಪಿಕೊಂಡ ಮೇಲೆ ಆ ಆಸ್ತಿಯ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಮಾಡುವಲ್ಲಿ IDRCL ನಿರತವಾಗುತ್ತದೆ.
ಈಗಿನ ರಚನೆಯಿಂದ ಬ್ಯಾಂಕ್ಗಳಿಗೆ ಏನು ಅನುಕೂಲ? ಒತ್ತಡದ ಸ್ವತ್ತುಗಳ ತೀರುವಳಿಗೆ ಶೀಘ್ರವಾಗಿ ಕಾರ್ಯ ಕೈಗೊಳ್ಳಲು ಇದು ಪ್ರೋತ್ಸಾಹಿಸುತ್ತದೆ. ಆ ಮೂಲಕ ಉತ್ತಮ ಮೌಲ್ಯ ಪಡೆಯುವುದಕ್ಕೆ ಸಹಾಯ ಆಗುತ್ತದೆ. ಈ ಬಗೆಯ ಆಲೋಚನೆ ಮೂಲಕ ಬ್ಯಾಂಕ್ ಅಧಿಕಾರಿಗಳು ವ್ಯವಹಾರವನ್ನು ಹೆಚ್ಚು ಮಾಡುವತ್ತ ಹಾಗೂ ಸಾಲದ ಬೆಳವಣಿಗೆಯತ್ತ ಗಮ ಹರಿಸುವುದಕ್ಕೆ ಅನುಕೂಲ ಆಗುತ್ತದೆ. ಈ ಒತ್ತಡದ ಆಸ್ತಿಗಳು ಮತ್ತು ಎಸ್ಗಳನ್ನು ಹೊಂದಿರುವ ಬ್ಯಾಂಕ್ಗಳು ಗಳಿಕೆ ಪಡೆಯಲು ಸಾಧ್ಯವಾಗುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ, ಬ್ಯಾಂಕ್ಗಳ ಮೌಲ್ಯಮಾಪನ ಚೇತರಿಕೆಗೆ ಹಾಗೂ ಮಾರುಕಟ್ಟೆ ಬಂಡವಾಳ ಸಂಗ್ರಹಿಸುವ ಸಾಮರ್ಥ್ಯದ ವಿಸ್ತರಣೆಗೆ ಸಹಾಯ ಆಗುತ್ತದೆ.
ಈಗ ಇದನ್ನು ಸ್ಥಾಪಿಸಲು ಕಾರಣ ಏನು? ಆರ್ಥಿಕ ನಷ್ಟ ಮತ್ತು ದಿವಾಳಿತನ ಸಂಹಿತೆ (IBC) ಸೇರಿದಂತೆ ವಿವಿಧ ಕಾನೂನು ಅಡಿಯಲ್ಲಿ ಬ್ಯಾಂಕ್ಗಳು ಎನ್ಪಿಎ ಖಾತೆಗಳಿಂದ ತೀಕ್ಷ್ಣವಾದ ವಸೂಲಾತಿ ಬಗ್ಗೆ ಗಮನ ಕೇಂದ್ರೀಕರಿಸಿವೆ. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಎನ್ಪಿಎಗಳು ಬ್ಯಾಂಕ್ಗಳ ಬ್ಯಾಲೆನ್ಸ್ ಶೀಟ್ನಲ್ಲಿ ಹಾಗೇ ಕುಳಿತಿವೆ. ಅದಕ್ಕೆ ಕಾರಣ ಏನೆಂದರೆ, ಆಸ್ತಿ ಗುಣಮಟ್ಟ ಪರಿಶೀಲನೆಯಿಂದ ಬಯಲು ಮಾಡುವ ಬ್ಯಾಡ್ ಲೋನ್ ಕೇವಲ ತುಂಬ ದೊಡ್ಡ ಮಟ್ಟದಾಗಿರುತ್ತವೆ ಅನ್ನೋದು ಮಾತ್ರ ಅಲ್ಲ. ಅದರ ಜತೆಗೆ ನಾನಾ ಸಾಲ ನೀಡುವ ಸಂಸ್ಥೆಗಳ ಮಧ್ಯೆ ಹಂಚಿಹೋಗಿರುತ್ತದೆ. ಈ ಹಿಂದಿನಿಂದ ಉಳಿದುಕೊಂಡು ಬಂದಿರುವ ಅನುತ್ಪಾದಕ ಆಸ್ತಿಗಳಿಗೆ ಬ್ಯಾಂಕ್ಗಳಿಗೆ ಉನ್ನತ ಮಟ್ಟದ ಪ್ರಾವಿಷನ್ ಮಾಡಿದಲ್ಲಿ ವೇಗವಾದ ತೀರುವಳಿಗೆ ವಿಶಿಷ್ಟವಾದ ಅವಕಾಶ ಸಿಗುತ್ತದೆ.
ಖಾತ್ರಿಯನ್ನು ಬಳಸಿಕೊಳ್ಳಬೇಕಾಗಬಹುದಾ? ಆಸ್ತಿ ಮಾರಾಟದಿಂದ ದೊರೆಯುವ ಮೊತ್ತ ಹಾಗೂ ಎಸ್ಆರ್ನ ಮುಖಬೆಲೆಯ ಮಧ್ಯೆ ಕೊರತೆ ಬಂದಾಗ ಸರ್ಕಾರದ ಖಾತ್ರಿಯನ್ನು ಬಳಸಲಾಗುತ್ತದೆ. ಆದರೆ ಅದಕ್ಕೆ ಒಟ್ಟಾರೆ ಮಿತಿ ಅಂತ 30,600 ಕೋಟಿ ರೂಪಾಯಿ ಹಾಗೂ 5 ವರ್ಷದ ಸಮಯ ಇದೆ. ಈ ವಿಚಾರದಲ್ಲಿ ಹೇಳಬೇಕೆಂದರೆ, ಸಾಕಷ್ಟು ಆಸ್ತಿಗಳಿವೆ. ಬರಬೇಕಾದ ವೆಚ್ಚಕ್ಕಿಂತ ಹೆಚ್ಚಿನದು ಮಾರಾಟದ ಮೂಲಕ ಲಭ್ಯವಾಗುತ್ತದೆ ಎಂಬುದು ಸದ್ಯದ ಮಟ್ಟಿಗೆ ನಿರೀಕ್ಷೆ ಆಗಿದೆ.
ಶೀಘ್ರವಾದ ಹಾಗೂ ವೇಗವಾದ ತೀರುವಳಿಯನ್ನು ಸರ್ಕಾರ ಹೇಗೆ ಖಾತ್ರಿ ಪಡಿಸುತ್ತದೆ? ಸರ್ಕಾರದ ಖಾತ್ರಿಯು 5 ವರ್ಷಗಳ ಅವಧಿಯದ್ದಾಗಿದೆ. ಆ ಖಾತ್ರಿಯನ್ನು ಬಳಸಿಕೊಳ್ಳುವುದು ಒಂದೋ ತೀರುವಳಿ ಅಥವಾ ಮುಕ್ತಾಯ ಎಂದಾಗಿರುತ್ತದೆ. ಈ ತೀರುವಳಿಯಲ್ಲಿ ತಡವಾದರೆ NARCLನಿಂದ ಖಾತ್ರಿ ಶುಲ್ಕ ನೀಡಬೇಕು. ಇದಿ ಸಮಯ ಕಳೆದಂತೆಲ್ಲ ಹೆಚ್ಚಾಗುತ್ತಲೇ ಹೋಗುತ್ತದೆ.
NARCL ಬಂಡವಾಳ ರಚನೆ ಹೇಗೆ ಮತ್ತು ಅದರಲ್ಲಿ ಸರ್ಕಾರದ ಪಾಲೆಷ್ಟು? ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳ ಈಕ್ವಿಟಿ ಮೂಲಕ NARCLಗೆ ಬಂಡವಾಳ ದೊರೆಯುತ್ತದೆ. ಅಗತ್ಯಕ್ಕೆ ತಕ್ಕಂತೆ ಸಾಲವನ್ನು ಸಹ ಎತ್ತುತ್ತದೆ. ಸರ್ಕಾರದ್ದೇ ಖಾತ್ರಿಯಾದ್ದರಿಂದ ಆರಂಭದಲ್ಲೇ ಬಂಡವಾಳ ಬೇಕು ಅಂತೇನಿಲ್ಲ.
ಒತ್ತಡದ ಆಸ್ತಿಗಳ ತೀರುವಳಿಗೆ NARCLನ ಕಾರ್ಯತಂತ್ರ ಏನಾಗಿರಲಿದೆ? ಒತ್ತಡದ ಸಾಲದಲ್ಲಿನ ಆಸ್ತಿ ಮೌಲ್ಯ ತಲಾ 500 ಕೋಟಿ ರೂಪಾಯಿಯ ತೀರುವಳಿ, ಆ ಮೂಲಕ 2 ಲಕ್ಷ ಕೋಟಿಯ ಗುರಿಯನ್ನು ಹೊಂದಿದೆ. ಮೊದಲ ಹಂತದಲ್ಲಿ ಪೂರ್ತಿಯಾಗಿ ಪ್ರಾವಿಷನ್ ಇರುವ ಆಸ್ತಿ ಮೊತ್ತವಾದ 90 ಸಾವಿರ ಕೋಟಿ ರೂಪಾಯಿಗಳನ್ನು NARCLಗೆ ವರ್ಗಾವಣೆ ಮಾಡಲಾಗುತ್ತದೆ. ಕಡಿಮೆ ಪ್ರಾವಿಷನ್ ಇರುವ ಆಸ್ತಿಯನ್ನು ಎರಡನೇ ಹಂತದಲ್ಲಿ ವರ್ಗಾವಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್
(Explainer About What Is Bad Bank Details And How It Works )
Published On - 9:40 pm, Thu, 16 September 21