Future Group: ಫ್ಯೂಚರ್- ರಿಲಯನ್ಸ್ ವ್ಯವಹಾರಕ್ಕೆ ದೊರೆಯದ ಅಗತ್ಯ ಮತ; ಒಪ್ಪಿಗೆ ನೀಡಲಿಲ್ಲ ಸಾಲಗಾರರರು
ರಿಲಯನ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಗತ್ಯ ಅನುಮತಿಯನ್ನು ಪಡೆಯುವುದಕ್ಕೆ ಫ್ಯೂಚರ್ ಸಮೂಹವು ವಿಫಲವಾಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.
ತನ್ನ ರೀಟೇಲ್, ಹೋಲ್ಸೇಲ್ ಮತ್ತು ವೇರ್ಹೌಸಿಂಗ್ ಆಸ್ತಿಯನ್ನು ರಿಲಯನ್ಸ್ಗೆ (Reliance) ಮಾರಾಟ ಮಾಡಬೇಕು ಎಂಬ ಯೋಜನೆಯಲ್ಲಿ ಇದ್ದ, ಸಾಲದ ಸುಳಿಯಲ್ಲಿ ಸಿಲುಕಿರುವ ಫ್ಯೂಚರ್ ಸಮೂಹಕ್ಕೆ ಹಿನ್ನಡೆ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ಗೆ 24,713 ಕೋಟಿ ರೂಪಾಯಿಗೆ ಮಾರಾಟ ಮಾಡಬೇಕು ಎಂದು ಅದಾಗಲೇ ಮಾತುಕತೆ ಆಗಿತ್ತು. ಆದರೆ ಅಮೆಜಾನ್ನಿಂದ ನಡೆಸಿದ್ದ ಕಾನೂನು ಹೋರಾಟದ ಕಾರಣಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಭದ್ರತಾ ಸಾಲಗಾರರಿಂದ (Secured Creditors) ಅಗತ್ಯ ಪ್ರಮಾಣದ, ಶೇ 75ರಷ್ಟು ಅನುಮತಿ ಪಡೆಯುವುದಕ್ಕೆ ಶುಕ್ರವಾರ ವಿಫಲವಾದ ಹಿನ್ನೆಲೆಯಲ್ಲಿ ಫ್ಯೂಚರ್ ಸಮೂಹಕ್ಕೆ ಭಾರೀ ಹಿನ್ನಡೆ ಆಗಿದೆ. ಶೇ 75ಕ್ಕಿಂತ ಹೆಚ್ಚು ಷೇರುದಾರರು ಮತ್ತು ಭದ್ರತಾ ರಹಿತ ಸಾಲಗಾರರು ರಿಲಯನ್ಸ್ ಜತೆಗಿನ ವ್ಯವಹಾರದ ಪರವಾಗಿ ಮತ ಹಾಕಿದರೆ, ಭದ್ರತಾ ಸಾಲಗಾರರು ಶೇ 69.29 ಮತದಾನದೊಂದಿಗೆ ಕಂಪೆನಿ ನಿರ್ಧಾರದ ವಿರುದ್ಧವಾಗಿ ಮತ ಹಾಕಿದರು. ಶೇ 30.71ರಷ್ಟು ಮಂದಿ ಫ್ಯೂಚರ್ ನಿರ್ಧಾರದ ಪರವಾಗಿ ಮತ ಚಲಾಯಿಸಿದರು ಎಂದು ನಿಯಂತ್ರಕರ ಫೈಲಿಂಗ್ನಲ್ಲಿ ಫ್ಯೂಚರ್ ರೀಟೇಲ್ ಲಿಮಿಟೆಡ್ (FRL) ತಿಳಿಸಿದೆ.
ಭದ್ರತಾ ರಹಿತ ಸಾಲಗಾರರು ಶೇ 78.22ರಷ್ಟು ರಿಲಯನ್ಸ್ ಜತೆಗಿನ ವಹಿವಾಟಿನ ಪರ ಒಲವು ತೋರಿದರೆ, ಶೇ 21.78ರಷ್ಟು ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಇನ್ನು ಕಂಪೆನಿಯ ಶೇ 85.94ರಷ್ಟು ಷೇರುದಾರರು ವ್ಯವಹಾರದ ಪರ ನಿಂತರೆ, ಶೇ 14.06ರಷ್ಟು ಮಂದಿ ವಿರುದ್ಧವಾಗಿ ಅಭಿಪ್ರಾಯ ದಾಖಲಿಸಿದರು. ಜತೆಗೆ ಸಮೂಹದ ಕಂಪೆನಿ ಫ್ಯೂಚರ್ ಲೈಫ್ಸ್ಟೈಲ್ ಫ್ಯಾಷನ್ಸ್ನ ಭದ್ರತಾ ಸಾಲಗಾರರ ಪೈಕಿ ಶೇ 82.75ರಷ್ಟು ಮತಗಳು ಕಂಪೆನಿಯ ನಿರ್ಧಾರದ ವಿರುದ್ಧ ಬಂದರೆ, ಶೇ 17.25ರಷ್ಟು ಪರವಾಗಿ ಬಂದವು. ಅನ್ಸೆಕ್ಯೂರ್ಡ್ ಕ್ರೆಡಿಟರ್ಸ್ ಶೇ 6.07ರಷ್ಟು ನಿರ್ಧಾರದ ವಿರುದ್ಧವಾಗಿ ಹಾಗೂ ಶೇ 93.93 ಪರವಾಗಿ ಇದ್ದರೆ, ಷೇರುದಾರರಲ್ಲಿ ಶೇ 18.09ರಷ್ಟು ನಿರ್ಧಾರದ ವಿರುದ್ಧವಾಗಿ ಹಾಗೂ ಶೇ 81.91ರಷ್ಟು ತೀರ್ಮಾನದ ಪರವಾಗಿದ್ದರು.
ಮಾಧ್ಯಮಗಳಲ್ಲಿ ಗುರುವಾರ ವರದಿ ಆದಂತೆ, ಫ್ಯೂಚರ್ ಸಮೂಹಕ್ಕೆ ಹೆಚ್ಚಿನ ಸಾಲಗಳನ್ನು ನೀಡಿರುಚ ಸಾಲದಾತರ ಗುಂಪು ಕಡಿಮೆ ಮೌಲ್ಯಮಾಪನದ ಕಾರಣ ರಿಲಯನ್ಸ್ ಇಂಡಸ್ಟ್ರೀಸ್‌ನ ಘಟಕವಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ಗೆ ಆಸ್ತಿಗಳನ್ನು ಮಾರಾಟ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದೆ. ರಿಲಯನ್ಸ್ ತನ್ನ ಆಫರ್ ಅನ್ನು ಆಗಸ್ಟ್ 2020ರಲ್ಲಿ ಒಪ್ಪಿಕೊಂಡಿದ್ದ 24,713 ಕೋಟಿ ರೂಪಾಯಿಯಿಂದ ಕಡಿಮೆ ಮಾಡಿದ್ದು ಮಾತ್ರವಲ್ಲದೆ, ಪರಿಷ್ಕೃತ ಬೆಲೆಯಲ್ಲಿಯೂ ಒಪ್ಪಂದವನ್ನು ಮುಂದುವರಿಸಲು ಪೂರೈಸಬೇಕಾದ ಹಲವಾರು ಷರತ್ತುಗಳನ್ನು ವಿಧಿಸಿದೆ ಎಂದು ಅದು ಹೇಳಿದೆ. ಪ್ರಾಕ್ಸಿ ಸಲಹೆಗಾರರಲ್ಲಿ ಒಬ್ಬರು ಮಾಧ್ಯಮದ ಜತೆ ಮಾತನಾಡಿ, “ಸಾಮಾನ್ಯ ಸಂದರ್ಭದಲ್ಲಿ ಕಂಪೆನಿಯು ಒಪ್ಪಂದದ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ ಅಥವಾ ಅವರು ಹಿಂತಿರುಗಿ ಮತ್ತು ಒಪ್ಪಂದವನ್ನು ತೆಗೆದುಕೊಳ್ಳಲು ಸಾಲದಾತರಿಗೆ ಮನವರಿಕೆ ಮಾಡಬೇಕಾಗುತ್ತದೆ. ಆದರೆ ಸಾಲದಾತರು ಅಥವಾ ಷೇರುದಾರರು ಮುಂದುವರಿಯುವವರೆಗೆ ಒಪ್ಪಂದವನ್ನು ಮುಂದೂಡುವ ಸಾಧ್ಯತೆಯಿದೆ.”
ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣದ (NCLT)ಮುಂಬೈ ಪೀಠವು ಫೆಬ್ರವರಿ 28ರಂದು ರಿಲಯನ್ಸ್ ರೀಟೇಲ್ ಜೊತೆಗಿನ ಪ್ರಸ್ತಾವಿತ ಒಪ್ಪಂದದ ಕುರಿತು ಷೇರುದಾರರು ಮತ್ತು ಸಾಲಗಾರರ ಸಭೆಗಳನ್ನು ಕರೆಯಲು ಫ್ಯೂಚರ್ ರೀಟೇಲ್ಗೆ ಅವಕಾಶ ಮಾಡಿಕೊಟ್ಟಿತು. ಫ್ಯೂಚರ್ ಸಮೂಹವು ತನ್ನ ಸಾಲದಾತರಿಗೆ 27,000 ಕೋಟಿ ರೂಪಾಯಿಗಿಂತ ಹೆಚ್ಚು ಸಾಲ ನೀಡಬೇಕಿದೆ. ಫೆಬ್ರವರಿಯಲ್ಲಿ ತಮ್ಮ ಗುತ್ತಿಗೆಯನ್ನು ಮುಕ್ತಾಯಗೊಳಿಸಿದ ನಂತರ ಬಹು ಫ್ಯೂಚರ್ ರೀಟೇಲ್ ಔಟ್‌ಲೆಟ್‌ಗಳ ನಿಯಂತ್ರಣವನ್ನು ರಿಲಯನ್ಸ್ ತೆಗೆದುಕೊಂಡಿತು. ಇದು ಮಾರ್ಚ್ 15ರಂದು ಜಾಹೀರಾತನ್ನು ನೀಡಿದ ಸಾಲದಾತರನ್ನು ಕೆರಳಿಸಿತು. ಫ್ಯೂಚರ್ ರಿಟೇಲ್ ಆಸ್ತಿಯಲ್ಲಿ ವ್ಯಾಪಾರ ಮಾಡುವ ಯಾರಾದರೂ ಎಲ್ಲ ಸಮಯಕ್ಕೂ ಸಾಲದಾತರ ಸಾಲಕ್ಕೆ ಜವಾಬ್ದಾರರಾಗಿರುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸುತ್ತದೆ.
ಈ ಮಧ್ಯೆ, ಬಾಕಿ ಪಾವತಿಸದ ಕಾರಣಕ್ಕಾಗಿ ಫ್ಯೂಚರ್ ಸಮೂಹವನ್ನು ಸ್ಟೇಟ್-ರನ್ ಬ್ಯಾಂಕ್ ಆಫ್ ಇಂಡಿಯಾ NCLTಗೆ ಒಯ್ದಿದೆ. ರಿಲಯನ್ಸ್ ರೀಟೇಲ್ ಕೂಡ ಅಮೆಜಾನ್.ಕಾಮ್ ಇಂಕ್ ಜತೆಗೆ ಈ ಒಪ್ಪಂದದ ಬಗ್ಗೆ ಕಾನೂನು ಹೋರಾಟದಲ್ಲಿ ತೊಡಗಿದೆ.
ಇದನ್ನೂ ಓದಿ: Future Group: ಫ್ಯೂಚರ್ ರೀಟೇಲ್, ಫ್ಯೂಚರ್ ಎಂಟರ್ಪ್ರೈಸಸ್ನಿಂದ ತಪ್ಪಿದ 8,158 ಕೋಟಿಯ ಸಾಲ ಮರುಪಾವತಿ