ಸರ್ಕಾರದ ಮಧ್ಯಪ್ರವೇಶ; ಗೂಗಲ್ ಮತ್ತು ಭಾರತೀಯ ಸ್ಟಾರ್ಟಪ್ಗಳ ವ್ಯಾಜ್ಯ ತಾತ್ಕಾಲಿಕ ಶಮನ
Google vs Indian Startups: ಮಾರ್ಚ್ 1ರಂದು ಗೂಗಲ್ನ ಪ್ಲೇಸ್ಟೋರ್ನಿಂದ ಡೀಲಿಸ್ಟ್ ಆಗಿದ್ದ 100ಕ್ಕೂ ಹೆಚ್ಚು ಭಾರತೀಯ ಆ್ಯಪ್ಗಳು ಈಗ ಮತ್ತೆ ಲಿಸ್ಟ್ ಆಗಿವೆ. ಕೇಂದ್ರ ಐಟಿ ಸಚಿವ ಎ ವೈಷ್ಣವ್ ನಿನ್ನೆ ಗೂಗಲ್ ಮತ್ತು ಭಾರತೀಯ ಸ್ಟಾರ್ಟಪ್ ಕಂಪನಿಗಳ ಜೊತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಪ್ಲೇಸ್ಟೋರ್ನ ಆ್ಯಪ್ ಬಿಲ್ಲಿಂಗ್ ನಿಯಮಗಳಿಗೆ ಬದ್ಧವಾಗಿಲ್ಲ ಎಂಬ ಕಾರಣವೊಡ್ಡಿ ಗೂಗಲ್ ಸಂಸ್ಥೆ ಕೆಲ ಭಾರತೀಯ ಆ್ಯಪ್ಗಳನ್ನು ಪ್ಲೇಸ್ಟೋರ್ ಲಿಸ್ಟ್ನಿಂದ ತೆಗೆದುಹಾಕಿತ್ತು.
ನವದೆಹಲಿ, ಮಾರ್ಚ್ 5: ತನ್ನ ಪ್ಲೇಸ್ಟೋರ್ನಲ್ಲಿ ಡೀಲಿಸ್ಟ್ ಮಾಡಲಾಗಿದ್ದ ಕೆಲ ಭಾರತೀಯ ಆ್ಯಪ್ಗಳನ್ನು ಮತ್ತೆ ರೀಸ್ಟೋರ್ ಮಾಡಲು ಗೂಗಲ್ ಒಪ್ಪಿಕೊಂಡಿದೆ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ (Union minister Ashwini Vaishnaw) ಹೇಳಿದ್ದಾರೆ. ಮಂಗಳವಾರ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ ಎ ವೈಷ್ಣವ್, ಗೂಗಲ್ ಮತ್ತು ಆ್ಯಪ್ ಕಂಪನಿಗಳ ನಡುವಿನ ಪೇಮೆಂಟ್ ವ್ಯಾಜ್ಯಕ್ಕೆ ಪರಿಹಾರ ಹುಡುಕುತ್ತಿರುವುದಾಗಿ ಹೇಳಿದ್ದಾರೆ. ನಿನ್ನೆ ಸೋಮವಾರ ಗೂಗಲ್ ಮತ್ತು ಭಾರತೀಯ ಸ್ಟಾರ್ಟಪ್ ಕಂಪನಿಗಳ ಪ್ರತಿನಿಧಿಗಳು ಕೇಂದ್ರ ಸಚಿವರು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದ್ದರು.
‘ಗೂಗಲ್ ಮತ್ತು ಸ್ಟಾರ್ಟಪ್ ಸಮುದಾಯ, ಎರಡೂ ನಮ್ಮನ್ನು ಭೇಟಿ ಮಾಡಿವೆ. ರಚನಾತ್ಮಕವೆನಿಸುವ ಚರ್ಚೆಗಳು ನಡೆದವು. ಶುಕ್ರವಾರ ಬೆಳಗ್ಗೆ ಇದ್ದ ರೀತಿಯಲ್ಲಿ ಎಲ್ಲಾ ಆ್ಯಪ್ಗಳನ್ನು ಲಿಸ್ಟ್ನಲ್ಲಿ ಇಡಲು ಗೂಗಲ್ ಒಪ್ಪಿಕೊಂಡಿದೆ,’ ಎಂದು ಕೇಂದ್ರ ಸಚಿವರು ಹೇಳಿದರು.
ಇದನ್ನೂ ಓದಿ: ಗೂಗಲ್ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್ಗಳ ನೈಜ ಉಪಯೋಗ ಕಂಡುಹಿಡಿಯಿರಿ
‘ನಮ್ಮ ತಂತ್ರಜ್ಞಾನ ಅಭಿವೃದ್ದಿ ಕಾರ್ಯಗಳಿಗೆ ಗೂಗಲ್ ಬೆಂಬಲ ಸಿಗುತ್ತಾ ಬಂದಿದೆ. ಮುಂಬರುವ ತಿಂಗಳಲ್ಲಿ ಸ್ಟಾರ್ಟಪ್ ಕಂಪನಿಗಳು ಮತ್ತು ಗೂಗಲ್ ದೀರ್ಘಕಾಲದ ನಿರ್ಣಯಕ್ಕೆ ಬರಬಹುದೆಂದು ಭಾವಿಸದ್ದೇನೆ,’ ಎಂದು ಸಚಿವ ಎ ವೈಷ್ಣವ್ ಹೇಳಿದ್ದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಎನ್ಐ ಮಾಡಿದ ಟ್ವೀಟ್
#WATCH | Union Minister of Electronics & IT, Ashwini Vaishnaw, says “Google and start-up company, both have met with us. We have had very constructive discussions and finally, Google has agreed to list all the Apps as on the status which was there on Friday morning (1st March),… pic.twitter.com/lyXJu9XeK4
— ANI (@ANI) March 5, 2024
ಭಾರತ್ ಮ್ಯಾಟ್ರಿಮೊನಿ, ಇನ್ಫೋ ಎಡ್ಜ್, ಶಾದಿ ಡಾಟ್ ಕಾಮ್, ಕುಕು ಎಫ್ಎಂ ಮೊದಲಾದ ಕಂಪನಿಗಳಿಗೆ ಸೇರಿದ ನೂರಕ್ಕೂ ಹೆಚ್ಚು ಆ್ಯಪ್ಗಳನ್ನು ಮಾರ್ಚ್ 1ರಂದು ಗೂಗಲ್ ತನ್ನ ಪ್ಲೇಸ್ಟೋರ್ನಿಂದ ಡೀಲಿಸ್ಟ್ ಮಾಡಿತ್ತು. ಆ್ಯಪ್ ಬಿಲ್ಲಿಂಗ್ ನಿಯಮಗಳಿಗೆ ಈ ಕಂಪನಿಗಳು ಬದ್ಧವಾಗಿಲ್ಲ ಎಂಬುದು ಗೂಗಲ್ನ ಪ್ರಮುಖ ಆರೋಪವಾಗಿದೆ.
ಇದನ್ನೂ ಓದಿ: ಇಲಾನ್ ಮಸ್ಕ್ ಈಗ ವಿಶ್ವದ ಅತಿಶ್ರೀಮಂತ ಅಲ್ಲ, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಕಷ್ಟದಲ್ಲಿ ಟೆಸ್ಲಾ ಮುಖ್ಯಸ್ಥ
ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಶನ್ ಇತ್ಯಾದಿ ಉದ್ಯಮ ಸಂಘಟನೆಗಳು ಗೂಗಲ್ನ ಈ ಕ್ರಮವನ್ನು ಪ್ರಶ್ನಿಸಿದ್ದವು. ಅದಾದ ಬಳಿಕ ಕೇಂದ್ರ ಸಚಿವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರ್ಧರಿಸಿ, ಗೂಗಲ್ ಮತ್ತು ಸ್ಟಾರ್ಟಪ್ ಕಂಪನಿಗಳ ಪ್ರತಿನಿಧಿಗಳನ್ನು ಕರೆಸಿ ಸಭೆ ನಡೆಸಿದ್ದರು. ಈಗ ಅವರ ಸಂಧಾನ ಯಶಸ್ವಿಯಾಗಿದೆ. ಪ್ಲೇಸ್ಟೋರ್ನಲ್ಲಿ ಮ್ಯಾಟ್ರಿಮೋನಿ ಆ್ಯಪ್ಗಳು, ಇನ್ಫೋಎಡ್ಜ್ನ ಜೀವನ್ ಸಾಥಿ, ನೌಕ್ರಿ ಇತ್ಯಾದಿ ಆ್ಯಪ್ಗಳು ರೀಸ್ಟೋರ್ ಆಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ