Tax On Investments: ಹೂಡಿಕೆ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ ಎಂಬ ಮಾಹಿತಿ ಇಲ್ಲಿದೆ
ಫಿಕ್ಸೆಡ್ ಡೆಪಾಸಿಟ್ಸ್ನಿಂದ ಪಿಪಿಎಫ್ ತನಕ ವಿವಿಧ ಹೂಡಿಕೆ ಮೇಲೆ ತೆರಿಗೆ ಲೆಕ್ಕಾಚಾರ ಮಾಡವುದು ಹೇಗೆ ಎಂಬ ವಿವರಣಾತ್ಮಕವಾದ ಲೇಖನ ಇಲ್ಲಿದೆ.
ತಮ್ಮ ಹಣವನ್ನು ಫಿಕ್ಸೆಡ್ ಡೆಪಾಸಿಟ್ಸ್ (Fixed Deposits), ರೆಕರಿಂಗ್ ಡೆಪಾಸಿಟ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಹೂಡಿಕೆ ಮಾಡಲು ಬಯಸುವವರದು ಒಂದು ಬಗೆಯ ಮನಸ್ಥಿತಿ. ಅವರಿಗೆ ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳುವುದು ಇಷ್ಟವಿಲ್ಲ ಎಂದರ್ಥ. ಅಥವಾ ತಮ್ಮ ಪೋರ್ಟ್ಫೋಲಿಯೋದಲ್ಲಿ ಇಂತಿಷ್ಟನ್ನು ನಿಶ್ಚಿತ ಆದಾಯ ಅಥವಾ ಅಪಾಯ ಇಲ್ಲದ ಸುರಕ್ಷಿತ ಹೂಡಿಕೆಯಲ್ಲಿ ತೊಡಗಿಸಲು ಬಯಸುತ್ತಾರೆ. ಇಲ್ಲಿ ಈಗ ಹೇಳಲು ಹೊರಟಿರುವ ಜನಪ್ರಿಯ ಹೂಡಿಕೆ ಆಯ್ಕೆಗಳಿಂದ ಬಡ್ಡಿ ಆದಾಯ ಸೃಷ್ಟಿ ಆಗುತ್ತದೆ ಮತ್ತು ಇದು ಮಾರುಕಟ್ಟೆ ಪರಿಸ್ಥಿತಿ ಹೇಗಿದೆಯೋ ಏನಿದೆಯೋ ಎಂಬುದಕ್ಕೆ ಸುತಾರಾಂ ಸಂಬಂಧಿಸಿರುವುದಲ್ಲ. ಆದರೆ ಈ ರೀತಿ ಗಳಿಸುವ ಬಡ್ಡಿಯನ್ನು ಆದಾಯದ ಹೆಚ್ಚುವರಿ ಮೂಲ ಅಂತ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಇತರ ಆದಾಯದ ಮೂಲಗಳಂತೆಯೇ ದೇಶದ ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
ಇದರ್ಥ ಏನೆಂದರೆ, ಹೂಡಿಕೆ ಮೇಲೆ ಗಳಿಸಿದ ಆದಾಯವು ಸರ್ಕಾರದ ನಿಗದಿ ಮಾಡಿದ ಮಿತಿಯನ್ನು ಮೀರಿದರೆ ಅದು ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಒದಗಿಸಲಾದ ಹಲವಾರು ತೆರಿಗೆ ಉಳಿತಾಯಗಳ ಲಾಭವನ್ನು ಪಡೆಯುವ ಮೂಲಕ ತೆರಿಗೆ ಹೊಣೆಗಾರಿಕೆ ಕಡಿಮೆ ಮಾಡಬಹುದು. ಆದರೆ ಮೊದಲಿಗೆ ಬಡ್ಡಿ ಆದಾಯಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅದನ್ನು ತಿಳಿಸುವ ಪ್ರಯತ್ನವನ್ನೇ ನೀವೀಗ ಓದುತ್ತಿದ್ದೀರಿ.
ಎಫ್ಡಿ ಬಡ್ಡಿ ಎಫ್.ಡಿ. ಮೇಲೆ ಗಳಿಸಿದ ಬಡ್ಡಿಯು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಆ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ಕಾಯ್ದೆ ಅನ್ವಯ ಅದೆಷ್ಟು ತೆರಿಗೆ ದರಗಳನ್ನು ನಿಗದಿ ಮಾಡಲಾಗುತ್ತದೋ ಅದರ ಪ್ರಕಾರ ತೆರಿಗೆ ಪಾವತಿಸಬೇಕು. ಅಲ್ಲದೆ, ಯಾವುದೇ ಹಣಕಾಸು ವರ್ಷದಲ್ಲಿ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿ ಆದಾಯ ರೂ. 40,000 (ಹಿರಿಯ ನಾಗರಿಕರಿಗೆ ರೂ 50,000) ತಲುಪಿದಾಗ ಬ್ಯಾಂಕ್‌ಗಳು ಟಿಡಿಎಸ್ (ಮೂಲದಲ್ಲಿ ತೆರಿಗೆ) ಕಡಿತಗೊಳಿಸುತ್ತವೆ. 40,000 ರೂಪಾಯಿಗಿಂತ ಹೆಚ್ಚಿನ ಆದಾಯದ ಮೇಲೆ ಬ್ಯಾಂಕ್‌ಗಳು ಶೇ 10ರಷ್ಟು ತೆರಿಗೆಯನ್ನು ವಿಧಿಸುತ್ತವೆ ಮತ್ತು ಅದನ್ನು ಮೂಲದಲ್ಲೇ ಕಡಿತಗೊಳಿಸಲಾಗುತ್ತದೆ. ಅನಿವಾಸಿ ಭಾರತೀಯರು ಶೇ 30ರ ದರದಲ್ಲಿ ಟಿಡಿಎಸ್ ಕಟ್ಟಬೇಕಾಗುತ್ತದೆ. ಜತೆಗೆ ಅನ್ವಯವಾಗುವಂತೆ ಹೆಚ್ಚುವರಿ ಶುಲ್ಕ ಹಾಗೂ ಸೆಸ್ ಇರುತ್ತವೆ.
ಎಲ್ಲ ಮೂಲಗಳಿಂದ ಒಟ್ಟು ತೆರಿಗೆಯ ಆದಾಯವು ತೆರಿಗೆ ವ್ಯಾಪ್ತಿಗೆ ಬರುವಷ್ಟಕ್ಕಿಂತ ಕಡಿಮೆ ಇದ್ದಲ್ಲಿ ಫಾರ್ಮ್ 15G (ಹಿರಿಯ ಜನರಿಗೆ 15H) ಸಲ್ಲಿಸುವ ಮೂಲಕ ಟಿಡಿಎಸ್ನಿಂದ ವಿನಾಯಿತಿ ಪಡೆಯಬಹುದು. ಸೆಕ್ಷನ್ 80TTB ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದಲ್ಲಿ 50,000 ರೂಪಾಯಿವರೆಗೆ ಕಡಿತಕ್ಕೆ ಅವಕಾಶ ನೀಡುತ್ತದೆ. ಬ್ಯಾಂಕ್ನಿಂದ ಟಿಡಿಎಸ್ ಅನ್ನು ಕಡಿತಗೊಳಿಸಿದರೆ ಮತ್ತು ಒಟ್ಟು ಆದಾಯವು ವರ್ಷಕ್ಕೆ 5,00,000 ರೂಪಾಯಿಗಿಂತ ಕಡಿಮೆಯಿದ್ದರೆ ಮರುಪಾವತಿಗೆ ಅರ್ಹತೆ ಇರುತ್ತದೆ.
ರೆಕರಿಂಗ್ ಡೆಪಾಸಿಟ್ಗಳ ಬಡ್ಡಿ ರೆಕರಿಂಗ್ ಡೆಪಾಸಿಟ್ ಹೂಡಿಕೆಗಳ ಮೇಲೆ ಯಾವುದೇ ತೆರಿಗೆ ಅನುಕೂಲಗಳು ಲಭ್ಯವಿಲ್ಲ. ಆ ಡೆಪಾಸಿಟ್ಗಳ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಪಾವತಿಸಬೇಕು. ತೆರಿಗೆ ಬ್ರಾಕೆಟ್‌ನ ದರದ ಆಧಾರದಲ್ಲಿ ತೆರಿಗೆಯನ್ನು ಪಾವತಿಸಬೇಕು. ರೆಕರಿಂಗ್ ಡೆಪಾಸಿಟ್ಗಳು ಟಿಡಿಎಸ್ಗೆ ಒಳಪಟ್ಟಿರುತ್ತವೆ. 40,000 ರೂಪಾಯಿಗಿಂತ ಹೆಚ್ಚು ಗಳಿಸಿದ ಬಡ್ಡಿಯ ಮೇಲೆ ಶೇ 10ರ ದರದಲ್ಲಿ ಕಡಿತಗೊಳಿಸಲಾಗುತ್ತದೆ. 40,000 ರೂಪಾಯಿವರೆಗಿನ ಬಡ್ಡಿ ಮೇಲೆ ಯಾವುದೇ ಟಿಡಿಎಸ್ ಇಲ್ಲ.
ಪಿಪಿಎಫ್ ಬಡ್ಡಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ನಿಂದ (PPF) ಗಳಿಸಿದ ಬಡ್ಡಿ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಏಕೆಂದರೆ ಇದು ಸಂಪೂರ್ಣ ವಿನಾಯಿತಿ ಪಡೆದಿದೆ. ವಿನಾಯಿತಿ-ವಿನಾಯಿತಿ-ವಿನಾಯಿತಿ (EEE) ಇದು ಪಿಪಿಎಫ್ಗೆ ಅನ್ವಯಿಸುತ್ತದೆ. ಪರಿಣಾಮ, ಠೇವಣಿ, ಪಡೆದ ಬಡ್ಡಿ ಮತ್ತು ಹಿಂತೆಗೆದುಕೊಳ್ಳುವ ಮೊತ್ತ ಇವೆಲ್ಲವೂ ತೆರಿಗೆ ಮುಕ್ತವಾಗಿರುತ್ತವೆ.