AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Orkut Comeback: ಮತ್ತೆ ಬರಲಿದೆ ಆರ್ಕುಟ್: ಮರುಪ್ರವೇಶಕ್ಕೆ ಸಂಸ್ಥಾಪಕರ ಪ್ರಯತ್ನ, 115 ದೇಶಗಳಿಂದ ಬೆಂಬಲ

ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಆರ್ಕುಟ್ ಸಾಮಾಜಿಕ ಜಾಲತಾಣ ಮತ್ತೆ ಆರಂಭವಾಗಲಿದೆಯೇ? ಸಂಸ್ಥಾಪಕ ಆರ್ಕುಟ್ ಬುಯುಕ್ಕೊಕ್ಟೆನ್ ಅವರ ಹೊಸ ಅಭಿಯಾನಕ್ಕೆ 115 ದೇಶಗಳಿಂದ 2.70 ಲಕ್ಷಕ್ಕೂ ಹೆಚ್ಚು ಜನರು ಬೆಂಬಲ ಸೂಚಿಸಿದ್ದಾರೆ. ಇಂದಿನ ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿ ಮತ್ತು ಎಐ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಜನರನ್ನು ಬೆಸೆಯುವ ಹೊಸ ವೇದಿಕೆಯ ಆಶಯ ಹಂಚಿಕೊಂಡಿದ್ದಾರೆ.

Orkut Comeback: ಮತ್ತೆ ಬರಲಿದೆ ಆರ್ಕುಟ್: ಮರುಪ್ರವೇಶಕ್ಕೆ ಸಂಸ್ಥಾಪಕರ ಪ್ರಯತ್ನ, 115 ದೇಶಗಳಿಂದ ಬೆಂಬಲ
Orkut Comeback
ಮಾಲಾಶ್ರೀ ಅಂಚನ್​
| Edited By: |

Updated on: Oct 10, 2026 | 4:00 PM

Share

ಮುಖ್ಯಾಂಶಗಳು

  • ಮತ್ತೆ ಬರಲಿದೆಯೇ ಆರ್ಕುಟ್? 2.70 ಲಕ್ಷ ಜನರ ಬೆಂಬಲ!
  • 115 ದೇಶಗಳಿಂದ ಆರ್ಕುಟ್ ಮರುಪ್ರವೇಶಕ್ಕೆ ಬೆಂಬಲ.
  • ಆರ್ಕುಟ್ ಮತ್ತೆ ಆರಂಭವಾಗುತ್ತಾ? ಸಂಸ್ಥಾಪಕರ ಹೊಸ ಪ್ರಯತ್ನ!

ಒಂದು ಕಾಲದಲ್ಲಿ ಯುವಜನರ ನೆಚ್ಚಿನ ಸಾಮಾಜಿಕ ಜಾಲತಾಣವಾಗಿದ್ದ ಆರ್ಕುಟ್ (Orkut) ಮತ್ತೆ ಆರಂಭವಾಗಬಹುದೇ ಎಂಬ ಕುತೂಹಲ ಮೂಡಿದೆ. ಆರ್ಕುಟ್‌ನ ಸಂಸ್ಥಾಪಕ ಆರ್ಕುಟ್ ಬುಯುಕ್ಕೊಕ್ಟೆನ್ ಅವರು, ಸ್ನೇಹ ಮತ್ತು ಸಮುದಾಯಗಳ ಮೂಲಕ ಜನರನ್ನು ಬೆಸೆಯುವ ಹೊಸ ಸಾಮಾಜಿಕ ಜಾಲತಾಣವನ್ನು ರೂಪಿಸುವ ಉದ್ದೇಶದಿಂದ ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ 115 ದೇಶಗಳ 2.70 ಲಕ್ಷಕ್ಕೂ ಹೆಚ್ಚು ಜನರು ಬೆಂಬಲ ಸೂಚಿಸಿದ್ದಾರೆ.

ಈ ಅಭಿಯಾನದ ಭಾಗವಾಗಿ ಆರ್ಕುಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜನರು ತಮ್ಮ ಬೆಂಬಲ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಆರ್ಕುಟ್ ಮತ್ತೆ ಯಾವಾಗ ಆರಂಭವಾಗಲಿದೆ ಎಂಬುದರ ಕುರಿತು ಯಾವುದೇ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ.

ಇಂದಿನ ಸಾಮಾಜಿಕ ಜಾಲತಾಣಗಳ ಬಗ್ಗೆ ಅಸಮಾಧಾನ

ಆರ್ಕುಟ್ ಬುಯುಕ್ಕೊಕ್ಟೆನ್ ಅವರು ಸಾಮಾಜಿಕ ಜಾಲತಾಣಗಳು ತಮ್ಮ ಮೂಲ ಉದ್ದೇಶದಿಂದ ದೂರ ಸರಿದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜನರು ಹೊಸ ಸ್ನೇಹಿತರನ್ನು ಹುಡುಕಲು, ಪರಸ್ಪರ ಸಂಪರ್ಕ ಬೆಳೆಸಲು ಮತ್ತು ಸಮುದಾಯಗಳನ್ನು ಕಟ್ಟಲು ನೆರವಾಗಬೇಕಿದ್ದ ಸಾಮಾಜಿಕ ಜಾಲತಾಣಗಳು ಈಗ ಬಳಕೆದಾರರನ್ನು ಹೆಚ್ಚು ಹೊತ್ತು ವೇದಿಕೆಯಲ್ಲಿ ಉಳಿಸಿಕೊಳ್ಳುವ ಹಾಗೂ ಜಾಹೀರಾತುಗಳಿಂದ ಆದಾಯ ಗಳಿಸುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿವೆ ಎಂಬುದು ಅವರ ಆತಂಕ.

ಹಿಂದೆ ದೂರದ ದೇಶಗಳಲ್ಲಿರುವ ಅಪರಿಚಿತರೊಂದಿಗೆ ಸಂವಹನ ನಡೆಸುವುದು ಹೊಸ ಅನುಭವವಾಗಿತ್ತು. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿನ ಅಲ್ಗಾರಿದಮ್‌ಗಳು ಬಳಕೆದಾರರ ಗಮನವನ್ನು ಸೆಳೆಯುವ ರೀತಿಯಲ್ಲಿ ವಿಷಯಗಳನ್ನು ತೋರಿಸುತ್ತಿವೆ. ಇದರಿಂದ ಮಕ್ಕಳು ಮತ್ತು ಯುವಜನರು ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ಅವಲಂಬಿತರಾಗುವ ಅಪಾಯವಿದೆ. ಒಂಟಿತನ ಮತ್ತು ಖಿನ್ನತೆಯಂತಹ ಸಮಸ್ಯೆಗಳೂ ಹೆಚ್ಚಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಟರ್ನೆಟ್​ನಲ್ಲಿ ಸ್ಟಾರ್​ಲಿಂಕ್ ಪರ ಕೂಗು ಕೇಳುತ್ತೆ ಅಂತ ತಿಂಗಳುಗಳ ಹಿಂದೆಯೇ ಸಿಕ್ಕಿತ್ತು ಸುಳಿವು

ಕೃತಕ ಬುದ್ಧಿಮತ್ತೆಯಿಂದ ವಿಶ್ವಾಸಕ್ಕೆ ಧಕ್ಕೆ?

ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಎಐ ತಂತ್ರಜ್ಞಾನದಿಂದ ರೂಪಿಸಲಾದ ಚಿತ್ರಗಳು, ವಿಡಿಯೊಗಳು ಮತ್ತು ಸಂದೇಶಗಳು ಹೆಚ್ಚುತ್ತಿರುವುದರಿಂದ ಆನ್‌ಲೈನ್‌ನಲ್ಲಿ ಕಾಣುವ ವ್ಯಕ್ತಿ ನಿಜವಾದವರೇ ಅಥವಾ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಬಾಟ್‌ಗಳೇ ಎಂಬುದನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟವಾಗುತ್ತಿದೆ. ಇದರಿಂದ ಅಂತರ್ಜಾಲದಲ್ಲಿನ ನಂಬಿಕೆ ಮತ್ತು ಪಾರದರ್ಶಕತೆಗೆ ಧಕ್ಕೆಯಾಗಬಹುದು ಎಂಬುದು ಅವರ ಅಭಿಪ್ರಾಯ.

ಹೊಸ ಸಾಮಾಜಿಕ ಜಾಲತಾಣವು ನೈಜ ವ್ಯಕ್ತಿಗಳ ನಡುವಿನ ಸಂಪರ್ಕ, ಸ್ನೇಹ ಮತ್ತು ಪರಸ್ಪರ ವಿಶ್ವಾಸಕ್ಕೆ ಆದ್ಯತೆ ನೀಡಬೇಕು ಎಂಬುದು ಅವರ ಆಶಯ. ಜನರನ್ನು ಕೇವಲ ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವಂತೆ ಮಾಡುವ ಬದಲು, ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ನೆರವಾಗಬೇಕು ಎಂದು ಅವರು ಹೇಳಿದ್ದಾರೆ.

2014ರಲ್ಲಿ ಸ್ಥಗಿತಗೊಂಡಿದ್ದ ಆರ್ಕುಟ್

2004ರಲ್ಲಿ ಆರಂಭವಾಗಿದ್ದ ಆರ್ಕುಟ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಬಳಕೆದಾರರು ತಮ್ಮ ವೈಯಕ್ತಿಕ ಪುಟಗಳನ್ನು ರೂಪಿಸುವುದು, ಸ್ನೇಹಿತರನ್ನು ಸೇರಿಸಿಕೊಳ್ಳುವುದು, ಸಂದೇಶಗಳನ್ನು ಹಂಚಿಕೊಳ್ಳುವುದು ಮತ್ತು ವಿವಿಧ ಸಮುದಾಯಗಳಲ್ಲಿ ಭಾಗವಹಿಸುವುದು ಈ ವೇದಿಕೆಯ ಪ್ರಮುಖ ಆಕರ್ಷಣೆಗಳಾಗಿದ್ದವು. ನಂತರ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಹೆಚ್ಚಾದ ಹಿನ್ನೆಲೆಯಲ್ಲಿ ಗೂಗಲ್ 2014ರ ಸೆಪ್ಟೆಂಬರ್‌ನಲ್ಲಿ ಆರ್ಕುಟ್ ಸೇವೆಯನ್ನು ಸ್ಥಗಿತಗೊಳಿಸಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More