RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬುಧವಾರದಂದು ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಎನ್​ಇಎಫ್​ಟಿ, ಆರ್​ಟಿಜಿಎಸ್ ವಿಸ್ತರಣೆ ಮಾಡಿ, ಘೋಷಣೆ ಮಾಡಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಘೋಷಣೆ ಮಾಡಿದರು.

  • TV9 Web Team
  • Published On - 16:19 PM, 7 Apr 2021
RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ
ಸಾಂದರ್ಭಿಕ ಚಿತ್ರ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಬುಧವಾರದಂದು ಮಹತ್ವದ ಘೋಷಣೆ ಮಾಡಿದೆ. ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್ (ಎನ್​ಇಎಫ್​ಟಿ) ಹಾಗೂ ರಿಯಲ್-ಟೈಮ್ ಗ್ರಾಸ್ ಸೆಟ್ಲ್​ಮೆಂಟ್ (ಆರ್​ಟಿಜಿಎಸ್) ಸವಲತ್ತನ್ನು ನಾನ್ ಬ್ಯಾಂಕ್ ಪಾವತಿ ವ್ಯವಸ್ಥೆ ಆಪರೇಟರ್​ಗಳಿಗೂ ವಿಸ್ತರಣೆ ಮಾಡಿದೆ. ಈ ತನಕ ಬ್ಯಾಂಕ್​ಗಳು ಮಾತ್ರ ಆರ್​ಟಿಜಿಎಸ್ ಹಾಗೂ ಎನ್​ಇಎಫ್​ಟಿ ಪಾವತಿ ಅನುಕೂಲ ಬಳಕೆ ಮಾಡುತ್ತಿವೆ. ಇದೀಗ ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ (ಪಿಪಿಐ) ವಿತರಕರು, ಕಾರ್ಡ್ ನೆಟ್​ವರ್ಕ್​ಗಳು, ವೈಟ್ ಲೇಬಲ್ ಎಟಿಎಂ ಆಪರೇಟರ್​ಗಳು ಮತ್ತು ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (TreDS) ಪ್ಲಾಟ್​ಫಾರ್ಮ್​ಗಳು ಕೂಡ ಆರ್​ಟಿಜಿಎಸ್ ಹಾಗೂ ಎನ್​ಇಎಫ್​ಟಿ ಬಳಸಬಹುದು.

ಕೆಲವನ್ನು ಹೊರತುಪಡಿಸಿ, ಆರ್​ಬಿಐನಿಂದ ಕಾರ್ಯ ನಿರ್ವಹಿಸುವ ಕೇಂದ್ರೀಕೃತ ಪಾವತಿ ವ್ಯವಸ್ಥೆಗಳಾದ (CPS) RTGS ಮತ್ತು NEFT ಅನ್ನು ಸದ್ಯಕ್ಕೆ ಬ್ಯಾಂಕ್​ಗಳು ಮಾತ್ರ ಬಳಸಬಹುದು. ಇದೀಗ ಪ್ರಸ್ತಾವ ಮಾಡಿರುವ ಪ್ರಕಾರ, ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ (PPI) ವಿತರಕರು, ಕಾರ್ಡ್ ನೆಟ್​ವರ್ಕ್​ಗಳು, ವೈಟ್​ಲೇಬಲ್ ಎಟಿಎಂ ಆಪರೇಟರ್​ಗಳು ಮತ್ತು ಆರ್​ಬಿಐ ನಿಯಂತ್ರಣಕ್ಕೆ ಒಳಪಟ್ಟಿರುವ ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (TreDS) ಬ್ಯಾಂಕಿಂಗೇತರ ಪಾವತಿ ಆಪರೇಟರ್​ಗಳಿಗೂ ಈ ಸೌಲಭ್ಯ ಒದಗಿಸಲಾಗುತ್ತದೆ. ಈ ವ್ಯವಸ್ಥೆಯಿಂದ ಹಣಕಾಸು ವ್ಯವಸ್ಥೆಯಲ್ಲಿನ ತೀರುವಳಿಯಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲ ಬಳಕೆದಾರ ಸೆಗ್ಮೆಂಟ್​ಗೆ ಡಿಜಿಟಲ್ ಹಣಕಾಸು ವ್ಯವಸ್ಥೆ ತಲುಪಲು ನೆರವಾಗುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆ ಹಾಗೂ ಜಿಡಿಪಿ ಮೇಲೆ ದೊಡ್ಡ ಪರಿಣಾಮ
ಪಾವತಿ ವ್ಯವಸ್ಥೆಯಲ್ಲಿ ಬ್ಯಾಂಕೇತರ ಭಾಗವಹಿಸುವಿಕೆ ಉತ್ತೇಜಿಸಬೇಕು ಎಂಬುದು ಗುರಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. “ಆರ್​ಬಿಐನಿಂದ ಸಕಾರಾತ್ಮಕವಾದ ಬೆಳವಣಿಗೆ ಇದು. ಇದರಿಂದಾಗಿ ಆನ್​ಲೈನ್ ಪಾವತಿಗೆ ಹಾಗೂ ಭಾರತೀಯ ಆರ್ಥಿಕತೆಯ ಡಿಜಿಟೈಸೇಷನ್​ಗೆ ಉತ್ತೇಜನ ಸಿಗುತ್ತದೆ. 24X7 ಎನ್​ಇಎಫ್​ಟಿ, ಆರ್​ಟಿಜಿಎಸ್ ಮುಂತಾದವು ವಾಣಿಜ್ಯ ವ್ಯವಹಾರಗಳಿಗೆ ಸಹಕಾರಿ ಆಗಲಿದೆ. ಆರ್ಥಿಕ ಬೆಳವಣಿಗೆ ಹಾಗೂ ಜಿಡಿಪಿ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಆರ್​ಬಿಐ ಇದೇ ವೇಳೆ, ದಿನದ ಕೊನೆಗೆ ಪೇಮೆಂಟ್ ಬ್ಯಾಂಕ್ಸ್ ಬಾಕಿ ಮಿತಿಯನ್ನು ದಿನದ ಕೊನೆಗೆ 2 ಲಕ್ಷ ರೂಪಾಯಿಗೆ ಏರಿಸಿದೆ. ಈ ಹಿಂದೆ ಇದು 1 ಲಕ್ಷ ರೂಪಾಯಿ ಇತ್ತು. ಬಹಳ ಕಾಲದಿಂದ ಠೇವಣಿ ಮಿತಿ ಹೆಚ್ಚಳಕ್ಕಾಗಿ ಪೇಮೆಂಟ್ಸ್ ಬ್ಯಾಂಕ್​ಗಳು ಬೇಡಿಕೆ ಇಡುತ್ತಾ ಬಂದಿದ್ದವು.

ಏನಿದು ಎನ್​ಇಎಫ್​ಟಿ ಹಾಗೂ ಆರ್​ಟಿಜಿಎಸ್?
ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್ (ಎನ್​ಇಎಫ್​ಟಿ) ಅಂದರೆ ಇದು ಕೂಡ ಪಾವತಿ ವ್ಯವಸ್ಥೆ. ಒಬ್ಬರಿಂದ ಮತ್ತೊಬ್ಬರಿಗೆ ಹಣ ವರ್ಗಾವಣೆಗೆ ಇದು ಅನುಕೂಲ ಮಾಡಿಕೊಡುತ್ತದೆ. ಎನ್​ಇಎಫ್​ಟಿ ಬಳಸಿ, ಯಾವುದೇ ಬ್ಯಾಂಕ್ ಶಾಖೆಯಿಂದ ಜನರು ಎಲೆಕ್ಟ್ರಾನಿಕಲಿ ಹಣ ಬೇರೆ ಯಾವುದೇ ಬ್ಯಾಂಕ್ ಹಾಗೂ ಶಾಖೆಯ ಖಾತೆದಾರರಿಗೆ ಹಣ ವರ್ಗಾವಣೆ ಮಾಡಬಹುದು. ಆದರೆ ಹಣ ವರ್ಗಾವಣೆ ರಿಯಲ್ ಟೈಮ್​​ನಲ್ಲಿ ಆಗುವುದಿಲ್ಲ. ಹಣ ವರ್ಗಾವಣೆಯ ತೀರುವಳಿಯು ಅರ್ಧ ಗಂಟೆಯ ಹನ್ನೆರಡು ಬ್ಯಾಚ್​ನಲ್ಲಿ ಆಗುತ್ತದೆ.

ರಿಯಲ್-ಟೈಮ್ ಗ್ರಾಸ್ ಸೆಟ್ಲ್​ಮೆಂಟ್ (ಆರ್​ಟಿಜಿಎಸ್) ಕೂಡ ಮತ್ತೊಂದು ಬಗೆಯ ಪಾವತಿ ವ್ಯವಸ್ಥೆ. ಫಲಾನುಭವಿಯ ಖಾತೆಗೆ ರಿಯಲ್ ಟೈಮ್​ನಲ್ಲಿ ಸಗಟು ಆಧಾರದಲ್ಲಿ ಆಗುತ್ತದೆ. ಆರ್​ಟಿಜಿಎಸ್ ವ್ಯವಸ್ಥೆ ಪ್ರಾಥಮಿಕವಾಗಿ ದೊಡ್ಡ ಮಟ್ಟದ ವಹಿವಾಟಿಗೆ ಮೀಸಲಾಗಿರುವಂಥದ್ದು. ಮತ್ತು ತಕ್ಷಣವೇ ತೀರುವಳಿ ಆಗುತ್ತದೆ.

ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

(RBI governor Shaktikanta Das announced extension of RTGS and NEFT facilities to payments bank on Wednesday.)