Small savings account: ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆ ಬಡ್ಡಿ ದರಗಳಲ್ಲಿ ಬದಲಾವಣೆಯಿಲ್ಲ
ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿದಂತೆ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಯಾವುದೇ ಬದಲಾವಣೆ ಮಾಡಿಲ್ಲ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಕಿಸಾನ್ ವಿಕಾಸ್ ಪತ್ರ ಇಂಥ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಯಾವುದೇ ಬದಲಾವಣೆ ಮಾಡದೆ ಹಣಕಾಸು ಸಚಿವಾಲಯದಿಂದ ಹಾಗೇ ಉಳಿಸಲಾಗಿದೆ. ಅಂದ ಹಾಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆಗಾಗಿ ಪರಿಶೀಲನೆ ಮಾಡಲಾಗುತ್ತದೆ. ಸತತ ಐದನೇ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ವಿವಿಧ ನಿಶ್ಚಿತ ಆದಾಯದ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಮಾರ್ಚ್ 31ಕ್ಕೆ ಕೇಂದ್ರ ಸರ್ಕಾರವು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿತು. ಆ ನಂತರ ಆ ಅಧಿಸೂಚನೆಯನ್ನು ವಾಪಸ್ ಪಡೆದುಕೊಂಡು, ಕಣ್ತಪ್ಪಿನಿಂದ ಆಗಿದ್ದು ಎಂದಿತ್ತು.
ನಿಶ್ಚಿತ ಮತ್ತು ಖಾತ್ರಿ ರಿಟರ್ನ್ಗಾಗಿ ಹಲವು ಹೂಡಿಕೆದಾರರು ಸಣ್ಣ ಉಳಿತಾಯ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಪೈಕಿ ಕೆಲವಕ್ಕೆ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ಅನುಕೂಲಗಳು ಸಹ ಇವೆ. ಈ ಹೂಡಿಕೆಗಳು ಮತ್ತು ಅದರ ಮೇಲಿನ ಬಡ್ಡಿಗೆಲ್ಲ ಸರ್ಕಾರವೇ ಖಾತ್ರಿ ಆಗಿರುತ್ತದೆ. ಹಾಗಿದ್ದರೆ 2021- 22ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳಿಗೆ ಇರುವ ಬಡ್ಡಿ ದರಗಳನ್ನು ನೋಡೋಣ. ಪಿಪಿಎಫ್- ವಾರ್ಷಿಕ ಶೇ 7.1, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್- ಶೇ 6.8, ಸುಕನ್ಯಾ ಸಮೃದ್ಧಿ ಯೋಜನಾ- ಶೇ 7.6, ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಖಾತೆಗೆ ಶೇ 4, ಠೇವಣಿಗೆ (ಒಂದು ವರ್ಷದ ಅವಧಿಗೆ) ಶೇ 5.5 ನಿಗದಿಯಾಗಿದ್ದು, ಎರಡರಿಂದ 3 ವರ್ಷದ ಠೇವಣಿಗೂ ಬಡ್ಡಿ ದರ ಶೇ 5.5 ಇದೆ. ಐದು ವರ್ಷಗಳ ಅವಧಿಗಾದರೆ ಬಡ್ಡಿ ದರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 6.7ರಷ್ಟು ಸಿಗುತ್ತದೆ.
ರೆಕರಿಂಗ್ ಡೆಪಾಸಿಟ್ಸ್ (ಸಂಚಿತ ಠೇವಣಿ) ಐದು ವರ್ಷಗಳ ಅವಧಿಗೆ ಶೇ 5.8, ಕಿಸಾನ್ ವಿಕಾಸ್ ಪತ್ರಕ್ಕೆ ಶೇ 6.9ರಷ್ಟಿದೆ. ದೇಶದಲ್ಲಿ ಹಣದುಬ್ಬರ ದರ ಏರಿಕೆ ಹೊರತಾಗಿಯೂ ಈ ರೀತಿಯ ಠೇವಣಿಗೆ ಬಡ್ಡಿ ದರ ಹೆಚ್ಚಳ ಮಾಡದಿರುವ ಬಗ್ಗೆ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅದರ ಈಚಿನ ಹಣಕಾಸು ನೀತಿ ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, 2021ರ ಹಣಕಾಸು ವರ್ಷದ ಉಳಿದ ಅವಧಿಗೆ ಕೂಡ ಶೇ 5ರಷ್ಟು ಮುಂದುವರಿಯಲಿದೆ. ಈಗ ವೈಯಕ್ತಿಕವಾಗಿ ಪರ್ಮನೆಂಟ್ ಅಕೌಂಟ್ ನಂಬರ್ (PAN) ಮತ್ತು ಆಧಾರ್ ಕಾರ್ಡ್ ಜೋಡಣೆ ಆಗುವುದಕ್ಕೆ ಸೆಪ್ಟೆಂಬರ್ 30ರ ತನಕ ಅವಕಾಶ ಇದೆ. “ಕಾಯ್ದೆಯ ಸೆಕ್ಷನ್ 139AA ಅಡಿಯಲ್ಲಿ ಆಧಾರ್ ಮತ್ತು ಪ್ಯಾನ್ ಜೋಡಣೆಗೆ ಕೊನೆ ದಿನವನ್ನು ಜೂನ್ 30, 2021ರಿಂದ ಸೆಪ್ಟೆಂಬರ್ 30, 2021ಕ್ಕೆ ವಿಸ್ತರಿಸಲಾಗಿದೆ,” ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಲವು ವಿಸ್ತರಣೆಗಳನ್ನು ಕೇಂದ್ರದಿಂದ ಮಾಡಲಾಗಿದೆ.
ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು
(Small savings account rate of interest unchanged for July to September quarter by central government. Here is the details)
Published On - 11:30 am, Thu, 1 July 21