2025ಕ್ಕಿಂತಲೂ 2026ರಲ್ಲಿ ಹೆಚ್ಚು ಉದ್ಯೋಗ ಕತ್ತರಿ; ಎಂಟು ತಿಂಗಳಲ್ಲೇ 1.23 ಲಕ್ಷ ಟೆಕ್ಕಿಗಳ ಲೇ ಆಫ್
ಟೆಕ್ ವಲಯದಲ್ಲಿ ಲೇ ಆಫ್ ಭರಾಟೆ 2026ರಲ್ಲಿ ಬಹಳ ಹೆಚ್ಚಾಗಿದೆ. ಜನವರಿಯಿಂದ ಆಗಸ್ಟ್ವರೆಗೂ ಟೆಕ್ ಕಂಪನಿಗಳು 1.23 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇನ್ನೂ ಹಲವು ಮಂದಿ ಈ ವರ್ಷಾಂತ್ಯದಲ್ಲಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅರಾಕಲ್, ಅಮೇಜಾನ್, ಮೆಟಾ ಸಂಸ್ಥೆಗಳು ಅತಿಹೆಚ್ಚು ಕತ್ತರಿ ಹಾಕಿವೆ.

ನವದೆಹಲಿ, ಸೆಪ್ಟೆಂಬರ್ 2: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ಸರಣಿ ಮುಂದುವರಿದಿದ್ದು, 2026ರ ಕ್ಯಾಲಂಡರ್ ವರ್ಷದ ಆರಂಭಿಕ ಎಂಟು ತಿಂಗಳಲ್ಲೇ (ಜನವರಿಯಿಂದ ಆಗಸ್ಟ್) 1,23,300ಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಿವೆ. ಇದು 2025ರ ಇಡೀ ವರ್ಷದಲ್ಲಿ ನಡೆದಿದ್ದ ಒಟ್ಟು ಉದ್ಯೋಗ ಕಡಿತಕ್ಕಿಂತ ಅಧಿಕವಾಗಿದೆ. 2025ರ ಇಡೀ ವರ್ಷದಲ್ಲಿ ಟೆಕ್ ಕ್ಷೇತ್ರದಲ್ಲಿ ಒಟ್ಟು 1,22,606 ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿತ್ತು. ಈ ವರ್ಷ ಮುಗಿಯಲು ನಾಲ್ಕು ತಿಂಗಳು ಬಾಕಿ ಇರುವಂತೆಯೇ ಆ ಸಂಖ್ಯೆ ದಾಟಿದ್ದು, ಹೊಸ ಆತಂಕ ಸೃಷ್ಟಿಸಿದೆ.
ಅರಾಕಲ್ ಮತ್ತು ಮೈಕ್ರೋಸಾಫ್ಟ್ ಕೊಡುಗೆ
ಅರಾಕಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಭಾರತದಲ್ಲಿ 3,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಿವೆ ಎನ್ನುವಂತಹ ಸುದ್ದಿಗಳು ಇತ್ತೀಚೆಗೆ ಬಂದಿದ್ದವು. ಆದರೆ, ಈಗಾಗಲೇ ಹಲವು ಟೆಕ್ ಸಂಸ್ಥೆಗಳು ದೊಡ್ಡ ಕತ್ತರಿ ಹಾಕಿಯಾಗಿದೆ. ಅರಾಕಲ್, ಡೆಲ್, ಮೆಟಾ, ಅಮೇಜಾನ್ ಮೊದಲಾದ ಸಂಸ್ಥೆಗಳು 2026ರಲ್ಲಿ ಸಾಕಷ್ಟು ಲೇ ಆಫ್ ಮಾಡಿವೆ.
ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ ಜಪಾನೀ ಏಜೆನ್ಸಿ; ಬಿಬಿಬಿ+ ನಿಂದ ಎ- ಗೆ ಏರಿಕೆ; ದೇಶಕ್ಕೆ ಏನು ಲಾಭ?
Layoffs.fyi ಪಟ್ಟಿಯಲ್ಲಿ 2026ರಲ್ಲಿ ಹೆಚ್ಚು ಲೇ ಆಫ್ ಮಾಡಿರುವ ಟೆಕ್ ಸಂಸ್ಥೆಗಳು
- ಅರಾಕಲ್: 21,000
- ಅಮೇಜಾನ್: 17,267
- ಡೆಲ್: 11,000
- ಮೆಟಾ: 10,400
- ಮೈಕ್ರೋಸಾಫ್ಟ್: 4,800
ಪೇಪಾಲ್, ಬ್ಲಾಕ್, ಸಿಸ್ಕೋ ಸಂಸ್ಥೆಗಳು ತಲಾ 4,000 ಉದ್ಯೋಗಿಗಳಿಗೆ ಕತ್ತರಿ ಹಾಕುವುದಾಗಿ ಹೇಳಿವೆ. ಇದರ ಜೊತೆಗೆ ಅರಾಕಲ್, ಮೈಕ್ರೋಸಾಫ್ಟ್ ಸಂಸ್ಥೆಗಳು ಮತ್ತಷ್ಟು ಲೇ ಆಫ್ ಮಾಡಲು ಯೋಜಿಸಿವೆ. ಜೊಮಾಟೊ, ಎಟ್ಸಿ, ಝಿಲ್ಲೋ, ಎರಿಕ್ಸನ್, ಲುಸಿಡ್ ಮೋಟರ್ಸ್, ವೈಸ್ಟೆಕ್, ಎಎಸ್ಎಂಎಲ್, ಅಟ್ಲಾಸಿಯನ್ ಮೊದಲಾದ ಇತರ ಪ್ರಮುಖ ಕಂಪನಿಗಳು ಕೂಡ ಲೇ ಆಫ್ ಮಾಡಿವೆ.
ಎಐ (AI) ಮತ್ತು ಕ್ಲೌಡ್ ಹೂಡಿಕೆಗೆ ಆದ್ಯತೆ
ಕಂಪನಿಗಳು ಕೃತಕ ಬುದ್ಧಿಮತ್ತೆ (AI), ಎಐ ಆಟೋಮೇಷನ್ ಮತ್ತು ಕ್ಲೌಡ್ ಮೂಲಸೌಕರ್ಯ (Cloud Infrastructure) ಅಭಿವೃದ್ಧಿಗೆ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡುತ್ತಿದ್ದು, ಸಾಂಪ್ರದಾಯಿಕ ಐಟಿ ಮತ್ತು ತಂತ್ರಜ್ಞಾನ ವಿಭಾಗದ ವೆಚ್ಚಗಳನ್ನು ತಗ್ಗಿಸಲು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.
ಇದನ್ನೂ ಓದಿ: ಜಾಗತಿಕವಾಗಿ ನಡುಗಿರುವ ಷೇರುಪೇಟೆಗಳು; ಭಾರತದಲ್ಲೂ ಸೆನ್ಸೆಕ್ಸ್, ನಿಫ್ಟಿ ಕುಸಿತ; ಈ ಅಲುಗಾಟಕ್ಕೆ ಏನು ಕಾರಣ?
ಭಾರತೀಯ ಟೆಕ್ಕಿಗಳ ಮೇಲೆ ಪ್ರಭಾವ
ಅಮೆರಿಕನ್ ಮತ್ತು ಜಾಗತಿಕ ಕಂಪನಿಗಳ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳು (GCC) ಭಾರತದಲ್ಲಿ ಹೆಚ್ಚಿರುವುದರಿಂದ, ದೇಶದ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಂತಹ ಪ್ರಮುಖ ಐಟಿ ಹಬ್‌ಗಳಲ್ಲಿರುವ ಇಂಜಿನಿಯರ್‌ಗಳ ಮೇಲೆಯೂ ಈ ಲೇ-ಆಫ್ ಬಿಸಿ ತಟ್ಟಿದೆ.
ವರ್ಷಾಂತ್ಯದ ವೇಳೆಗೆ ತಂತ್ರಜ್ಞಾನ ಸಂಸ್ಥೆಗಳಲ್ಲಿ ಮರುರಚನೆ (Restructuring) ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




