ದುಡ್ಡು ಮಾಡಲು ಹೋಗಿ 50 ಬಾರಿ ಕೈಸುಟ್ಟುಕೊಂಡವನ ಕೈಹಿಡಿಯಿತು ನಾಟಿಕೋಳಿಮೊಟ್ಟೆ; ಇದು ವೈಟಲ್ ಫಾರ್ಮ್ಸ್ ಕಥೆ..!
Story of Egg Entrepreneur: ದುಡ್ಡು ಮಾಡಿ ಹಣ ಗಳಿಸಬೇಕು ಎಂಬ ಉತ್ಸಾಹದಲ್ಲಿ ಮ್ಯಾಥ್ಯೂ ಅವರು ಮಾಡಿದ 50 ಬಿಸಿನೆಸ್ಗಳು ವಿಫಲವಾಗಿದ್ದವು. ದುಡ್ಡಿಗಿಂತ ಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ ಇರುವ ಉದ್ದಿಮೆ ಆರಂಭಿಸಬೇಕು ಎಂದು ಹೊರಟಾಗ ಸಿಕ್ಕಿದ್ದು ಅಪಾರ ಯಶಸ್ಸು. ಇದು ಅಮೆರಿಕದ ವೈಟಲ್ ಫಾರ್ಮ್ಸ್ ಸಂಸ್ಥಾಪಕನ ಕಥೆ. ಯುವ ಉದ್ದಿಮೆ ಆಕಾಂಕ್ಷಿಗಳಿಗೆ ಮಾದರಿ ಆಗಬಹುದಾದ ಕಥೆ...
ಬಿಸಿನೆಸ್ ಮಾಡಿದರೆ ಹಣ ಗಳಿಸಬಹುದು ಎಂದು ಯಾವ್ಯಾವುದೋ ಬಿಸಿನೆಸ್ ಮಾಡಿದರೆ ಯಡವಟ್ಟಾದೀತು. ಇದಕ್ಕೆ ಅಮೆರಿಕದ ಉದ್ಯಮಿ ಮ್ಯಾಥ್ಯೂ ಓಹೇಯರ್ (Matthew O’Hayer) ಒಳ್ಳೆಯ ನಿದರ್ಶನ. ಹಣ ಮಾಡುವ ಉಮೇದಿನಲ್ಲಿ ಇವರು ಒಂದರ ಹಿಂದೊಂದು ಬೇರೆ ಬೇರೆ ಉದ್ದಿಮೆಗಳಿಗೆ ಕೈಹಾಕಿ ಕೈಸುಟ್ಟುಕೊಂಡವರು. ಬರೋಬ್ಬರಿ 50 ಬಿಸಿನೆಸ್ಗಳನ್ನು ಮಾಡಿ ವಿಫಲರಾಗಿದ್ದರು. ಆದರೆ, 68ರ ಇಳಿವಯಸ್ಸಿನಲ್ಲಿ ಅವರು ಲಾಭಕ್ಕೆ ಆಸೆ ಪಡದೇ ತಮಗಿಷ್ಟವಾದ ಬಿಸಿನೆಸ್ ಆರಂಭಿಸಿದರು. ಅದರ ಫಲವಾಗಿ ಇವತ್ತು ಅವರ ಉದ್ದಿಮೆ ಕೋಟಿ ಕೋಟಿ ಮೊತ್ತದ ಬಿಸಿನೆಸ್ ಮಾಡುತ್ತಿದೆ. ಅದೇ ಇಂದಿನ ಮೊಟ್ಟೆಯ ಕಥೆ. ಇದು ನಮಗೂ ನಿಮಗೂ ಸ್ಫೂರ್ತಿ ತರುವ ಕಥೆಯೂ ಹೌದು.
ಕೋಳಿ ಮೊಟ್ಟೆ… ಬಲು ನಾಟಿ..!
ಮ್ಯಾಥ್ಯೂ ಓಹೇಯರ್ ಅವರು ಸ್ಥಾಪಿಸಿದ ವೈಟಲ್ ಫಾರ್ಮ್ಸ್ (vital farms) ಎಂಬ ಮೊಟ್ಟೆ ಕಂಪನಿ ಇವತ್ತು 450 ಮಿಲಿಯನ್ ಡಾಲರ್ (ಸುಮಾರು 4,000 ಕೋಟಿ ರೂಗೂ ಹೆಚ್ಚು) ಮೌಲ್ಯದ ಸಂಸ್ಥೆಯಾಗಿ ಬೆಳೆದಿದೆ. ಕಳೆದ ವರ್ಷ ಇವರ ಕಂಪನಿ 4,000 ಕೋಟಿ ರೂ ಆದಾಯ ಗಳಿಸಿದೆ.
ಇವರ ಕಂಪನಿಯಲ್ಲಿ ಸಿಗುವ ಮೊಟ್ಟೆ ಸಾಧಾರಣದ್ದಲ್ಲ. ನಮ್ಮ ಹಳ್ಳಿಗಳಲ್ಲಿ ಹೊಲಗಳಲ್ಲಿ ಕಾಳುಗಳನ್ನು ಹೆಕ್ಕಿ ತಿಂದು ಹುಲಸಾಗಿ ಬೆಳೆಯುವ ಕೋಳಿಗಳು (pasture raised hens) ಇಡುವ ನಾಟಿ ಮೊಟ್ಟೆಗಳಂಥವನ್ನು ಇವರು ಮಾರುತ್ತಾರೆ. ಅದಕ್ಕೆಂದೇ ಕೋಳಿಗಳನ್ನು ಮುಕ್ತವಾಗಿ ಬಿಟ್ಟು ಸಾಕುತ್ತಾರೆ.
ಇದನ್ನೂ ಓದಿ: ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲವಾ? ಕ್ರೆಡಿಟ್ ಸ್ಕೋರ್ ಹೋದೀತೆಂಬ ಭಯವಾ? ನಿಮ್ಮ ಮುಂದಿರುವ ಆಯ್ಕೆಗಳು ಇಲ್ಲಿವೆ
ಇಂಟರ್ನೆಟ್ನಲ್ಲಿ ಓದಿದ ಒಂದು ಲೇಖನದಿಂದ ಸ್ಫೂರ್ತಿ…!
ಪ್ರತಿಯೊಬ್ಬ ಸಾಧಕರಿಗೂ ಯಾವುದಾದರೂ ಪ್ರೇರಣೆ ಇರುತ್ತದೆ. ಮ್ಯಾಥ್ಯೂ ಅವರಿಗೆ ಪ್ರೇರಣೆ ನೀಡಿದ್ದು ಅವರ ಸ್ನೇಹಿತ ಜಾನ್ ಮೆಕೇ ಅವರ ಒಂದು ಲೇಖನ. ಸ್ವತಃ ಉದ್ಯಮಿಯೂ ಆಗಿರುವ ಜಾನ್ ಮೆಕೇ 2006ರಲ್ಲಿ ‘ಕಾನ್ಷಿಯಸ್ ಕ್ಯಾಪಿಟಲಿಸಂ’ (Conscious Capitalism- ಪ್ರಜ್ಞಾಪೂರ್ವಕ ಬಂಡವಾಳಶಾಹಿ) ಎಂಬ ಲೇಖನವೊಂದನ್ನು ಬರೆದಿದ್ದರು. ವ್ಯವಹಾರದಲ್ಲಿ ಲಾಭದ ಜೊತೆಗೆ ಸಾಮಾಜಿಕ ಜವಾಬ್ದಾರಿ ಯಾಕೆ ಮುಖ್ಯ ಎಂಬುದನ್ನು ಮನಮುಟ್ಟುವಂತೆ ಬರೆದಿದ್ದರು.
ಈ ಲೇಖನ ಮ್ಯಾಥ್ಯೂ ಓಹೇಯರ್ ಅವರ ಮನಸಿಗೆ ನಾಟಿತು, ಚಿಂತನೆಗೆ ಹಚ್ಚಿತು. ಸಾಮಾಜಿಕ ಕಳಕಳಿ ಇರುವಂತಹ ವ್ಯವಹಾರಗಳ್ಯಾವುವು ಎಂದು ಅವರು ಹುಡುಕತೊಡಗಿಇದರು. ಆಗ ಅವರಿಗೆ ತೋಚಿದ್ದು ಮೊಟ್ಟೆಗಳೇ. ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಬಹುತೇಕ ಮೊಟ್ಟೆಗಳು ಕೋಳಿಫಾರ್ಮ್ ಮೊಟ್ಟೆಗಳೇ ಆಗಿದ್ದವು. ಆಗ ಇವರು ವಿಭಿನ್ನವಾಗಿ ಕೋಳಿ ಸಾಕುವ ಐಡಿಯಾ ಮಾಡಿದರು.
ಇದನ್ನೂ ಓದಿ: ಇಸ್ರೋದಲ್ಲಿ ಕೆಲಸ ಕೊಡ್ತೀವಿ ಎಂದು ಕರೆದರೆ ಐಐಟಿಯವರು ಹೋಗೋದೇ ಇಲ್ವಂತೆ; ಕಟುಸತ್ಯ ಬಿಚ್ಚಿಟ್ಟ ಇಸ್ರೋ ಮುಖ್ಯಸ್ಥ ಸೋಮನಾಥ್
ಮರುವರ್ಷವೇ, ಅಂದರೆ 2007ರಲ್ಲಿ ಅಮೆರಿಕದ ಟೆಕ್ಸಾಸ್ನಲ್ಲಿ 27 ಎಕರೆಯ ಫಾರ್ಮ್ ಖರೀದಿಸಿ, ಅಲ್ಲಿ ಕೋಳಿಗಳನ್ನು ಮುಕ್ತವಾಗಿ ಬಿಟ್ಟು ಸಾಕತೊಡಗಿದರು. ನೈಸರ್ಗಿಕವಾಗಿ ಬೆಳೆದ ಈ ಕೋಳಿಗಳು ಇಡುವ ಮೊಟ್ಟೆ ಸ್ವಾದಿಷ್ಟಕರವಾಗಿತ್ತಲ್ಲದೇ, ಹೆಚ್ಚು ಪೌಷ್ಟಿಕತೆಯಿಂದಲೂ ಕೂಡಿತ್ತು.
ಇವರನ್ನು ನೋಡಿ ಅಕ್ಕಪಕ್ಕದ ರೈತರೂ ಕೂಡ ಇದೇ ರೀತಿ ಕೋಳಿಗಳನ್ನು ಸಾಕತೊಡಗಿದರು. ಮ್ಯಾಥ್ಯೂ ಅವರ ವೈಟಲ್ ಫಾರ್ಮ್ಸ್ ಸಂಸ್ಥೆಯ ಮೊಟ್ಟೆಗಳು ಜನಪ್ರಿಯವಾಗತೊಡಗಿದವು. ವಾಲ್ಮಾರ್ಟ್ ಇತ್ಯಾದಿ ಸೂಪರ್ ಮಾರ್ಕೆಟ್ ಅಂಗಡಿಗಳು ಈ ಮೊಟ್ಟೆಗಳನ್ನು ಖರೀದಿಸಿ ಮಾರತೊಡಗಿದವು. ಇವತ್ತು ಅಮೆರಿಕದ ವಿವಿಧೆಡೆ ವೈಟಲ್ ಫಾರ್ಮ್ಸ್ನ ಮೊಟ್ಟೆಗಳು ಲಭ್ಯ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ