UPI Autopay: ಯುಪಿಐ ಆಟೋ ಪೇ ಬಗ್ಗೆ ಇಲ್ಲಿದೆ ಹಂತ ಹಂತವಾದ ಮಾಹಿತಿ
ಯುಪಿಐ ಮೂಲಕ ಆಟೋ ಪೇ ಅಂದರೇನು? ಇದನ್ನು ಸಕ್ರಿಯಗೊಳಿಸುವುದು ಹೇಗೆ ಹಾಗೂ ಅನುಕೂಲಗಳೇನು ಎಂಬ ಮಾಹಿತಿ ಇಲ್ಲಿದೆ.
ನಮ್ಮ ಪೈಕಿಯೇ ಹಲವರು ಮೊಬೈಲ್ ಬಿಲ್ ಪಾವತಿಯಿಂದ ಶುರುವಾಗಿ ಡಿಟಿಎಚ್ ಅಥವಾ ಒಟಿಟಿ ಪಾವತಿ ಅಥವಾ ಮ್ಯೂಚುವಲ್ ಫಂಡ್ ಪಾವತಿಯ ಕ್ರೆಡಿಟ್ ಕಾರ್ಡ್ಗಾಗಿ ಆಟೋ ಪೇ (ಸ್ವಯಂ ಪಾವತಿ) ಆಯ್ಕೆಗಳನ್ನು ಬಳಸುತ್ತೇವೆ. ಆದರೆ ಈ ಸ್ವಯಂ-ಪಾವತಿ ಸೌಲಭ್ಯಗಳನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಪ್ರೊಸೆಸ್ ಮಾಡಲಾಗುತ್ತದೆ. ಕೆಲವು ಸಲ ನಾನಾ ಕಾರಣಗಳಿಗಾಗಿ ಬ್ಯಾಂಕ್ಗಳ ಮೂಲಕದ ಈ ಆಟೋ ಪೇ ಸರಿಯಾಗಿ ಕೆಲಸ ಮಾಡುವುದಿಲ್ಲ. ಈ ಅಡೆತಡೆಗಳನ್ನು ನಿವಾರಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮದಿಂದ (NPCI) ಯುಪಿಐ ಚಾನೆಲ್ ಮೂಲಕ ಸ್ವಯಂ ಪಾವತಿ ಸೌಲಭ್ಯ ಪರಿಚಯಿಸಲಾಗಿದೆ. ಯಾವುದೇ ಯುಪಿಐ ಚಾನೆಲ್ ಮೂಲಕ ರೆಕರಿಂಗ್ ಪಾವತಿಯನ್ನು (ಪುನರಾವರ್ತಿತವಾಗಿ ಕಟ್ಟಬೇಕಾದಂಥದ್ದನ್ನು) ಸುಲಭವಾಗಿ ಪಾವತಿಸಬಹುದು.
ಮೂಲ ಕಲ್ಪನೆ ಏನು? ಮೊಬೈಲ್ ಫೋನ್ ಬಿಲ್‌ಗಳು, ವಿದ್ಯುತ್ ಬಿಲ್‌ಗಳು, ಸಾಲಗಳ ಇಎಂಐ ಪಾವತಿ, ಮನರಂಜನೆ/OTT ಚಂದಾದಾರಿಕೆ, ವಿಮೆ ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಪುನರಾವರ್ತಿತ ಪಾವತಿಗಳಿಗಾಗಿ ಯಾವುದೇ UPI ಅಪ್ಲಿಕೇಷನ್ ಬಳಸಿ, ಗ್ರಾಹಕರು ಈಗ ಪಿರಿಯಾಡಿಕ್ ಇ-ಆದೇಶಗಳನ್ನು ಸಕ್ರಿಯ ಮಾಡಬಹುದು. UPI 2.0 ಅಡಿಯಲ್ಲಿ ಈ ಅನುಕೂಲವನ್ನು ಮಾಡಲಾಗಿದೆ. ಅಂದಹಾಗೆ ನೀವು ಇದನ್ನು ಬ್ಯಾಂಕ್ ಖಾತೆಗಳ ಮೂಲಕ ಮಾಡುವ ಅಗತ್ಯವಿಲ್ಲ; ನಿಮ್ಮ ಯುಪಿಐ ಐಡಿ ಅಥವಾ ಖಾತೆಯು ಯಾವುದೇ ಪ್ರಮಾದ ಆಗದಂತೆ ಪ್ರತಿ ತಿಂಗಳು ಇದನ್ನು ಮಾಡಬಲ್ಲದು.
ಅನುಕೂಲಗಳೇನು? ಸಾಲಗಳು, ವಿಮೆ, ಮ್ಯೂಚುವಲ್ ಫಂಡ್‌ಗಳು ಇತ್ಯಾದಿ ಎಲ್ಲ ಇಎಂಐ ಪಾವತಿಗಳು ಯುಪಿಐ ಆಟೋ ಪೇ ಮೂಲಕ ನಿಗದಿತ ದಿನಾಂಕಗಳಂದು ಮಾಡಬಹುದು. ಅದಕ್ಕೆ ರಿಮೈಂಡರ್ (ಜ್ಞಾಪನೆಗಳನ್ನು) ಮಾಡಬಹುದು. ವಿಳಂಬ ಶುಲ್ಕಗಳು ಮತ್ತು ದಂಡಗಳನ್ನು ತಪ್ಪಿಸಿ, ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಪಾವತಿಗಳನ್ನು ಮಾಡಲಾಗುತ್ತದೆ.
ಯುಪಿಐ ಪುನರಾವರ್ತಿತ ಆದೇಶಗಳಲ್ಲಿ ಪ್ರತಿ ಗ್ರಾಹಕರು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಇತ್ಯಾದಿ ಪಾವತಿ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅಗತ್ಯವಿರುವ ಮೊತ್ತವು 2,000 ರೂಪಾಯಿ ತನಕ ಮಾತ್ರ. ಪುನರಾವರ್ತಿತ ಪಾವತಿಗಳನ್ನು ಸುರಕ್ಷಿತ ಮತ್ತು ಅನುಕೂಲಕರ ರೀತಿಯಲ್ಲಿ ಮಾಡಲಾಗುತ್ತದೆ.
ಯಾರು ಬಳಸಬಹುದು? UPI ಐಡಿ ಮತ್ತು ಆ್ಯಪ್ ಹೊಂದಿರುವ ಯಾವುದೇ ವ್ಯಕ್ತಿಯು ಇದನ್ನು ಒಂದು ನಿಮಿಷದೊಳಗೆ ಮಾಡಬಹುದು. ಮೂಲಭೂತವಾಗಿ ಯುಪಿಐ ಖಾತೆಯನ್ನು ಒಂದು ಅಥವಾ ಬಹು ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆ ಮಾಡಲಾಗಿದೆ ಮತ್ತು ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಡೆಬಿಟ್ ಮಾಡಲಾಗುತ್ತದೆ. ಆದರೆ ಅದನ್ನು ಬ್ಯಾಂಕಿಂಗ್ ಇಂಟರ್ಫೇಸ್ ಮೂಲಕ ಮಾಡಬೇಕಾಗಿಲ್ಲ. ಕೇವಲ UPI ಇಂಟರ್ಫೇಸ್ ಬಳಸಬಹುದು.
ಇದು ಹೇಗೆ ಕೆಲಸ ಮಾಡುತ್ತದೆ? ಯಾವುದೇ UPI- ಸಕ್ರಿಯಗೊಳಿಸಿದ ಅಪ್ಲಿಕೇಷನ್ನಲ್ಲಿ ‘ಆದೇಶ’ ಆಯ್ಕೆಯು ಲಭ್ಯವಿರುತ್ತದೆ. ಇದು ಗ್ರಾಹಕರಿಗೆ ಆಟೋ-ಡೆಬಿಟ್ ಆದೇಶವನ್ನು ನೀಡಲು, ಅನುಮೋದಿಸಲು, ಮಾರ್ಪಡಿಸಲು, ನಿಲ್ಲಿಸಲು ಅಥವಾ ಹಿಂತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಖಾತೆಯನ್ನು ಒಮ್ಮೆ UPI PIN ಮೂಲಕ ದೃಢೀಕರಿಸಿ ಮತ್ತು ನಿಮ್ಮ ಮಾಸಿಕ ಮೊತ್ತವು ರೂ. 2,000ಕ್ಕಿಂತ ಕಡಿಮೆ ಅಥವಾ ಸಮನಾಗಿದ್ದರೆ ನಂತರದ ಮಾಸಿಕ ಪಾವತಿಗಳನ್ನು ಖಾತೆಯಿಂದ ಆಟೋ (ಸ್ವಯಂಚಾಲಿತವಾಗಿ) ಡೆಬಿಟ್ ಮಾಡಲಾಗುತ್ತದೆ.
2,000 ರೂಪಾಯಿವರೆಗಿನ ಸ್ವಯಂ ಪಾವತಿಗೆ UPI- ಸಕ್ರಿಯಗೊಳಿಸಿದ ಬ್ಯಾಂಕ್ ID ಅಥವಾ QR ಸ್ಕ್ಯಾನ್ ಬಳಸಿ ಇ-ಆದೇಶವನ್ನು ಸೃಷ್ಟಿಸಬೇಕು. UPI PIN ದೃಢೀಕರಣದ ನಂತರ ಪ್ರತಿ ಆದೇಶವನ್ನು ಪ್ರೊಸೆಸ್ ಮಾಡಲಾಗುತ್ತದೆ.
ಅರ್ಹ ಅಪ್ಲಿಕೇಷನ್‌ಗಳು BHIM, Paytm ಮತ್ತು IndusInd ಬ್ಯಾಂಕ್ ಅಧಿಕೃತ ಅಪ್ಲಿಕೇಷನ್‌ನಂತಹವು UPI ಸ್ವಯಂ ಪಾವತಿಗೆ ಅರ್ಹವಾಗಿವೆ. NPCI ಹೇಳಿಕೆ ಪ್ರಕಾರ, ಇದುವರೆಗೆ ಬೇರೆ ಯಾವುದೇ ಆ್ಯಪ್ ಅರ್ಹವಾಗಿಲ್ಲ.
ಅರ್ಹ ಅಗ್ರಿಗೇಟರ್ಸ್ ಯುಪಿಐ ಸ್ವಯಂ ಪಾವತಿ ಆದೇಶಕ್ಕೆ ಬಹುತೇಕ ಅರ್ಧ ಡಜನ್ ಪಾವತಿ ಅಗ್ರಿಗೇಟರ್ಸ್ ಅಥವಾ ಪ್ಲಾಟ್ಫಾರ್ಮ್ಗಳು ಅರ್ಹವಾಗಿವೆ. ಈ ಅಗ್ರಿಗೇಟರ್ಸ್ ಪೈಕಿ ಯಾವುದನ್ನಾದರೂ ಬಳಸಿಕೊಂಡು ಆಟೋ ಪೇ ಸೌಲಭ್ಯವನ್ನು ಆರಂಭಿಸಬಹುದು. ರೇಜೋರ್‌ಪೇ, ಪೇಟಿಎಂ, ಕ್ಯಾಮ್ಸ್ ಪೇ, ಪೇಯು, ಬಿಲ್ ಡೆಸ್ಕ್, ಪೇಜಿ ಮತ್ತು ಡಿಜಿಯೋ ಇವೆಲ್ಲವೂ ಪ್ಲಾಟ್ಫಾರ್ಮ್ಗಳು.
ವಾಣಿಜ್ಯ ಬ್ಯಾಂಕ್ಗಳು 25ಕ್ಕೂ ಹೆಚ್ಚು ಬ್ಯಾಂಕ್ಗಳು ಯುಪಿಐ ಆಟೋ ಪೇ ಸೌಲಭ್ಯವನ್ನು ಹೊಂದಿವೆ. ಈ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದರೆ ಮತ್ತು UPI ID ಹೊಂದಿದ್ದರೆ ಈ ಸೌಲಭ್ಯವನ್ನು ಪಡೆಯಬಹುದು.
ದೊಡ್ಡ ವಾಣಿಜ್ಯ ಬ್ಯಾಂಕ್ಗಳಲ್ಲಿ ಬಹುತೇಕ ಎಲ್ಲವೂ ಪಟ್ಟಿಯಲ್ಲಿವೆ. ಅವುಗಳೆಂದರೆ, SBI, PNB, HDFC ಬ್ಯಾಂಕ್, ICICI ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಸ್ಇಂಡ್ ಬ್ಯಾಂಕ್, IDFC FIRST ಬ್ಯಾಂಕ್, ಯೆಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, IDBI ಬ್ಯಾಂಕ್, HSBC, ಪಂಜಾಬ್ ಮತ್ತು ಸಿಂದ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್ ಮತ್ತು ಆರ್‌ಬಿಎಲ್.
ಇತರ ಬ್ಯಾಂಕ್ಗಳು ಮೂರು ಪೇಮೆಂಟ್ ಬ್ಯಾಂಕ್ಗಳು – ಅವುಗಳೆಂದರೆ, ಪೇಟಿಎಂ ಪೇಮೆಂಟ್ ಬ್ಯಾಂಕ್, ಎನ್‌ಎಸ್‌ಡಿಎಲ್ ಪೇಮೆಂಟ್ ಬ್ಯಾಂಕ್ ಮತ್ತು ಜಿಯೋ ಪೇಮೆಂಟ್ ಬ್ಯಾಂಕ್.
ಕೆಲವು ಸಣ್ಣ ಹಣಕಾಸು ಬ್ಯಾಂಕ್ಗಳು ಮತ್ತು ಸಹಕಾರಿ ಬ್ಯಾಂಕ್ಗಳು ಕೂಡ ಪಟ್ಟಿಯಲ್ಲಿವೆ. ಅವುಗಳೆಂದರೆ, ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್, ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಶಿವಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್.
ಯುಪಿಐ ಆಟೋ ಪೇ ಪಟ್ಟಿಯಲ್ಲಿ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಥಾಣೆ ಜನತಾ ಸಹಕಾರಿ ಬ್ಯಾಂಕ್ ಕೂಡ ಸ್ಥಾನ ಪಡೆದಿವೆ.
ಇದನ್ನೂ ಓದಿ: 5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ
(What Is UPI Auto Pay How To Activate And What Are The Benefits Here Is An Explainer)
Published On - 11:42 am, Sat, 14 August 21