ಬಳ್ಳಾರಿ: ವರ್ಕ್ ಫ್ರಂ ಹೋಂ ಕೆಲಸದ ಹೆಸರಿನಲ್ಲಿ ಐಟಿ ಉದ್ಯೋಗಿಗೆ 4.33 ಲಕ್ಷ ರೂ. ವಂಚನೆ
Cyber Crime: ಸೈಬರ್ ಕ್ರೈಂ ಪ್ರಕರಣಗಳು ರಾಜ್ಯದಾದ್ಯಂತ ದಿನೇದಿನೆ ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಅರೆಕಾಲಿಕ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರು ಕೋಟ್ಯಂತರ ರೂ. ಕಳೆದುಕೊಂಡ ಬಗ್ಗೆ ವರದಿಯಾಗಿತ್ತು. ಇದೀಗ ಬಳ್ಳಾರಿ ಯುವಕನೊಬ್ಬನ ಸರದಿ. ವರ್ಕ್ ಫ್ರಂ ಹೋಂ ಆಮಿಷಕ್ಕೆ ಬಲಿಯಾಗಿ ಬಳ್ಳಾರಿಯ ರವಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಬಳ್ಳಾರಿ, ಫೆಬ್ರವರಿ 21: ವರ್ಕ್ ಫ್ರಂ ಹೋಂ (Work From Home) ಕೆಲಸದ ಹೆಸರಿನಲ್ಲಿ ಐಟಿ ಉದ್ಯೋಗಿಯೊಬ್ಬರಿಗೆ (IT Employee) 4.33 ಲಕ್ಷ ರೂಪಾಯಿ ಪಂಗನಾಮ ಹಾಕಿದ ಕೃತ್ಯ ಬೆಳಕಿಗೆ ಬಂದಿದೆ. ಬಳ್ಳಾರಿಯ (Ballari) ರವಿ ಎಂಬ ಯುವಕ ವಂಚನೆಗೆ ಒಳಗಾದವರು. ಮನೆಯಲ್ಲೇ ಕುಳಿತು ಹೊಟೇಲ್ ಬ್ಯುಸಿನೆಸ್ ಮಾಡಿ ಹಣ ಸಂಪಾದಿಸಿ ಎಂಬ ವಾಟ್ಸ್‌ಅ್ಯಪ್ ಸಂದೇಶ ರವಿಗೆ ಬಂದಿತ್ತು. ಇದನ್ನು ನಂಬಿದ ಅವರು ಮರುಳಾಗಿದ್ದಾರೆ. ಒಂದೇ ದಿನದಲ್ಲಿ 4,33,000 ರೂ. ಹಣ ಕಳೆದುಕೊಂಡಿದ್ದಾರೆ.
ರೇಟಿಂಗ್ ಅ್ಯಂಡ್ ರಿವ್ಯೂ ಕೊಟ್ರೆ ನಿತ್ಯ 6000 ರೂ. ಲಾಭದ ಭರವಸೆ ನೀಡಲಾಗಿತ್ತು. ಟಿಲಿಗ್ರಾಂನಲ್ಲಿ ಬಿಸಿನೆಸ್ ಟಾಸ್ಕ್ ನೀಡುತ್ತಿದ್ದ ಹೊಟೇಲ್ ಕಂಪನಿ, ಟಾಸ್ಕ್ ಕೊಟ್ಟು ಹಂತ ಹಂತವಾಗಿ ಲಕ್ಷ ಲಕ್ಷ ರೂಪಾಯಿ ಹಣ ಪಡೆದಿದೆ. ರೋಹಿಣಿ ಸಿಯಾ ಎಂಬ ವ್ಯಕ್ತಿಯಿಂದ ಮೋಸವಾಗಿದೆ ಎಂದು ರವಿ ದೂರಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡಿ ಲಕ್ಷ ಲಕ್ಷ ಹಣ ಗಳಿಸಲು ಆಮಿಷ್ ತೋರಿಸಿ ವಂಚನೆ ಎಸಗಲಾಗಿದೆ.
ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡ ಖದೀಮರು!
ರವಿ ಅವರ ಮೂರು ಬ್ಯಾಂಕ್ ಖಾತೆಗಳಿಂದ ಯುಪಿಐ ಆ್ಯಪ್ ಮೂಲಕ 4.33 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಲಾಭಾಂಶ ಪಡೆಯಬೇಕಿದ್ದರೆ ಮತ್ತೆ 1.80 ಲಕ್ಷ ರೂ. ಟ್ಯಾಕ್ಸ್ ಭರಿಸಬೇಕು ಎಂದು ರವಿಗೆ ಸೂಚನೆ ನೀಡಲಾಗಿತ್ತು. ಅಷ್ಟರಲ್ಲೇ, ಉದ್ಯೋಗ ಸಿಗದೆ ಕಂಗಾಲಾಗಿದ್ದ ರವಿ ಬಳ್ಳಾರಿ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲಿ ದೂರು ದಾಖಲಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸೈಬರ್ ಅಪರಾಧಗಳ ಮೂಲಕ 3 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಸೈಬರ್ ವಂಚಕರು ಜನರಿಂದ ಎಗರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಸಾವಿರಾರು ಜನರನ್ನು ನಂಬಿಸಿ 158 ಕೋಟಿ ವಂಚನೆ ಮಾಡಿದ್ದ ದೊಡ್ಡ ಗ್ಯಾಂಗ್ ಅರೆಸ್ಟ್
ಇಂಥದ್ದೇ ಘಟನೆಯೊಂದರಲ್ಲಿ, ಅರೆಕಾಲಿಕ ಉದ್ಯೋಗದ ಆಮಿಷ ನಂಬಿ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರು ಬರೋಬ್ಬರಿ 2.77 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು.
ವರ್ಕ್ ಫ್ರಂ ಹೋಂ ಕೆಲಸ ನೀಡುವುದಾಗಿ ಜನರನ್ನು ನಂಬಿಸಿ ಇನ್ಸ್ಟಾಗ್ರಾಂ ಅಕೌಂಟ್ಗೆ ಲಿಂಕ್ ಕಳಿಸಿ ನಂತರ ಹಣ ಎಗರಿಸುತ್ತಿದ್ದ ಗ್ಯಾಂಗ್ ಒಂದನ್ನು ಇತ್ತೀಚೆಗಷ್ಟೇ ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಇಲ್ಲಿವರೆಗೆ 158 ಕೋಟಿ 94 ಲಕ್ಷ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿತ್ತು.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ