ಬೆಂಗಳೂರು: ನಿರ್ಮಾಣದ ವೇಳೆ ಗೋದಾಮಿನ ಶೆಡ್ ಕುಸಿದು ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಕಾರ್ಮಿಕ ಮೋಹಿತ್ ಖಂಡೇವಾಲಾ(31) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೃಹತ್ ಗೋದಾಮಿನ ಶೆಡ್ ನಿರ್ಮಾಣದ ವೇಳೆ ಅವಘಡ ಸಂಭವಿಸಿದ್ದು, ಮತ್ತಿಬ್ಬರು ಕಾರ್ಮಿಕರಿಗೆ ಗಾಯಗಳಾಗಿದೆ. ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ A2B ಹೋಟೆಲ್ ಹಿಂಭಾಗದಲ್ಲಿ ದುರಂತ ಸಂಭವಿಸಿದೆ. 2ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ SVB ಕನ್ಸ್ಟ್ರಕ್ಷನ್ ಶೆಡ್ ನಿರ್ಮಾಣ ಕಾಮಗಾರಿ ನಡೆಸುತ್ತಿತ್ತು.
ದುರಂತದ ವೇಳೆ 15ಕ್ಕೂ ಹೆಚ್ಚು ಉತ್ತರ ಭಾರತ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದೇ ಘಟನೆಗೆ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಮೃತ ಮೋಹಿತ್ ಪತ್ನಿ ದೂರಿನನ್ವಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.