CUET UG 2026: ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ NTA
ಸಿಯುಇಟಿ-ಯುಜಿ ಪರೀಕ್ಷೆಯಲ್ಲಿ ಮೇ 30ರಂದು ತಾಂತ್ರಿಕ ದೋಷದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ NTA ಮತ್ತೊಂದು ಅವಕಾಶ ನೀಡಿದೆ. ಬಯೋಮೆಟ್ರಿಕ್ ನೋಂದಣಿ ಮಾಡಿದ್ದರೂ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದವರಿಗೆ ಮರು ಪರೀಕ್ಷೆ ನಡೆಸಲಾಗುವುದು. ಟಿಸಿಎಸ್ ತನ್ನ ತಾಂತ್ರಿಕ ದೋಷಕ್ಕೆ ವಿಷಾದ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಗಂಭೀರ ಲೋಪದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಶನಿವಾರ (ಮೇ 30) ನಡೆದ ಸಿಯುಇಟಿ-ಯುಜಿ (CUET-UG) ಪ್ರವೇಶ ಪರೀಕ್ಷೆಯ ವೇಳೆ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದರಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಅವಕಾಶವನ್ನು ಪ್ರಕಟಿಸಿದೆ.
ಎನ್‌ಟಿಎ (NTA) ಸ್ಪಷ್ಟನೆ:
ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ NTA, “ಇಂದಿನ ತಾಂತ್ರಿಕ ಅಡಚಣೆಯು ಕೆಲವು CUET (UG)ಅಭ್ಯರ್ಥಿಗಳಿಗೆ ತೊಂದರೆ ಉಂಟುಮಾಡಿದೆ. ಶನಿವಾರ (30.05.2026) ಮೊದಲ ಶಿಫ್ಟ್‌ನಲ್ಲಿ (Shift-I) ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ, ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಂಡಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು,” ಎಂದು ತಿಳಿಸಿದೆ.
ಪರೀಕ್ಷಾ ಸಮಯದಲ್ಲಿ ಬದಲಾವಣೆ:
ಟಿಸಿಎಸ್ (TCS) ಸಂಸ್ಥೆಯು ತನ್ನ ಕಡೆಯಿಂದ ಉಂಟಾದ ತಾಂತ್ರಿಕ ದೋಷದಿಂದಾಗಿ ಕೆಲವು ಕೇಂದ್ರಗಳಲ್ಲಿ ಪರೀಕ್ಷೆ ವಿಳಂಬವಾಗಿದೆ ಎಂದು ವರದಿ ಮಾಡಿದೆ. ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗಿದ್ದು, ಯಾವುದೇ ಅಭ್ಯರ್ಥಿಗೆ ನಷ್ಟವಾಗದಂತೆ ಪೂರ್ಣ ಪರಿಹಾರ ಸಮಯವನ್ನು (Compensatory Time) ನೀಡಲಾಗಿತ್ತು.
ಇದೇ ಕಾರಣಕ್ಕೆ ಮಧ್ಯಾಹ್ನದ ಅವಧಿಯ ಪರೀಕ್ಷೆಯ ಸಮಯವನ್ನು ಪರಿಷ್ಕರಿಸಲಾಗಿತ್ತು. ಮಧ್ಯಾಹ್ನ 3:00 ಗಂಟೆಯ ಬದಲಿಗೆ 4:00 ಗಂಟೆಗೆ ಪರೀಕ್ಷೆ ಆರಂಭಿಸಲಾಗಿತ್ತು ಹಾಗೂ ಅಭ್ಯರ್ಥಿಗಳ ಪ್ರವೇಶದ ಸಮಯವನ್ನು ಮಧ್ಯಾಹ್ನ 2:30 ಕ್ಕೆ ನಿಗದಿಪಡಿಸಲಾಗಿತ್ತು. ಬೆಳಗ್ಗಿನ ಶಿಫ್ಟ್‌ನ ವಿದ್ಯಾರ್ಥಿಗಳಿಗೆ ಪೂರ್ಣ ಸಮಯವನ್ನು ನೀಡಲಾಗಿದ್ದು, ಪರೀಕ್ಷೆ ಮುಗಿದ ನಂತರವಷ್ಟೇ ಹೊರಹೋಗಲು ಅನುಮತಿಸಲಾಗಿತ್ತು.
ಟಿಸಿಎಸ್ (TCS) ವಿಷಾದ:
ಟಿಸಿಎಸ್ ಮುಖ್ಯಸ್ಥ ಕೆ. ಕೃತಿವಾಸನ್ ಅವರು ಮಾತನಾಡಿ, “ಬೆಳಗಿನ ಶಿಫ್ಟ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಪರೀಕ್ಷೆ ವಿಳಂಬವಾಗಿತ್ತು. ನಮ್ಮ ತಾಂತ್ರಿಕ ತಂಡವು ತಕ್ಷಣವೇ ಸಮಸ್ಯೆಯನ್ನು ಗುರುತಿಸಿ ಪರಿಹರಿಸಿದೆ. ಪರೀಕ್ಷೆಯ ಪವಿತ್ರತೆಗೆ ಯಾವುದೇ ಧಕ್ಕೆಯಾಗದಂತೆ ಪರೀಕ್ಷೆಯನ್ನು ಪುನರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಂಟಾದ ಅನನುಕೂಲತೆಗೆ ವಿಷಾದಿಸುತ್ತೇವೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ; ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ
ಪೋಷಕರು ಮತ್ತು ವಿದ್ಯಾರ್ಥಿಗಳ ಆಕ್ರೋಶ:
ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಇಂತಹ ಗಂಭೀರ ಲೋಪಗಳು ನಡೆದಿರುವುದಕ್ಕೆ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀವ್ರವಾದ ಬಿಸಿಲಿನಲ್ಲಿ ಪರೀಕ್ಷಾ ಕೇಂದ್ರಗಳ ಹೊರಗೆ 3-4 ಗಂಟೆಗಳ ಕಾಲ ಕಾಯಬೇಕಾಯಿತು ಮತ್ತು ಕೇಂದ್ರಗಳಲ್ಲಿ ಯಾವುದೇ ಸರಿಯಾದ ಸಂವಹನ ವ್ಯವಸ್ಥೆ ಇರಲಿಲ್ಲ ಎಂದು ‘X’ ನಲ್ಲಿ ದೂರಿದ್ದಾರೆ.
ಸಹಾಯವಾಣಿ:
ವಿದ್ಯಾರ್ಥಿಗಳಿಗೆ ಸಹಾಯ ಮಾಡಲು NTA ವಿಶೇಷ ಸಹಾಯವಾಣಿ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ಒದಗಿಸಿದೆ:
- ಸಹಾಯವಾಣಿ ಸಂಖ್ಯೆ: +91-11-40759000
- ಇಮೇಲ್: cuet-ug@nta.ac.in
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





