Anekal Election Results: ಆನೇಕಲ್ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್ : ಕಾಂಗ್ರೆಸ್-ಬಿಜೆಪಿ ನಡುವೆಯೇ ಪೈಪೋಟಿ
Anekal Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದಲ್ಲಿ ಶೇ. 55.43ರಷ್ಟು ಮತದಾನವಾಗಿತ್ತು.

Anekal Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದಲ್ಲಿ (Anekal Assembly Elections 2023) ಶೇ. 55.43ರಷ್ಟು ಮತದಾನವಾಗಿತ್ತು. ಆನೇಕಲ್ ಕ್ಷೇತ್ರದಲ್ಲಿರುವ ಒಟ್ಟು ಮತದಾರರು 402595, ಪುರುಷರು 210896, ಮಹಿಳೆಯರು 191683.
ಎರಡು ದಶಕಗಳಿಂದ ಬಿಜೆಪಿ ಪ್ರಾಬಲ್ಯವಿದ್ದ ಅನೇಕಲ್ ವಿಧಾನಸಬಾ ಕ್ಷೇತ್ರವು ದಶಕದಿಂದೀಚೆಗೆ ‘ಕೈ’ ವಶದಲ್ಲಿದೆ. ಈ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆದು, ಮುದುಡಿರುವ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡಲಾಗುತ್ತಿದೆ. ಸತತ ಎರಡು ಸಲ ಗೆದ್ದಿರುವ ಕಾಂಗ್ರೆಸ್ ನ ಬಿ.ಶಿವಣ್ಣ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದ್ದಾರೆ. ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಹುಲ್ಲಹಳ್ಳಿ ಶ್ರೀನಿವಾಸ್ ಹಾಗೂ ಜೆಡಿಎಸ್ ನ ಕೆ.ಪಿ.ರಾಜು ಅವರು ಈ ಸಲ ಗೆದ್ದು ಹುಮ್ಮಸ್ಸಿನಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಕೈ-ಕಮಲದ ನಡುವೆ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆದಿದೆ.
ಇದೇ ಕ್ಷೇತ್ರದಿಂದ ರಾಜಕೀಯ ಭವಿಷ್ಯ ರೂಪಿಸಿ ಕೊಂಡ ಬಿಜೆಪಿಯ ಎ.ನಾರಾಯಣಸ್ವಾಮಿ ಹ್ಯಾಟ್ರಿಕ್ ಗೆಲುವು ಪಡೆದು, ನಾಲ್ಕನೇ ಬಾರಿ ಸೋತರು. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನ ಬಿ.ಶಿವಣ್ಣ ಅವರಿಂದ ಪರಾಭವಗೊಂಡ ಎ.ನಾರಾಯಣಸ್ವಾಮಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಗೆದ್ದು, ಈಗ ಕೇಂದ್ರ ಸಚಿವರೂ ಆಗಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಇವರ ಪ್ರಾಬಲ್ಯ ಇದ್ದೇ ಇದೆ.
– ಆನೇಕಲ್ ವಿಧಾನಸಭಾ ಕ್ಷೇತ್ರ ರಚನೆಯಾದ 1997 ರಿಂದ 1994ರವರೆಗೆ ಕಾಂಗ್ರೆಸ್ ಪಡೆಯದ್ದೇ ಪಾರಮ್ಯ ,1978ರಲ್ಲಿ ಮಾತ್ರ ಜೆಎನ್ ಪಿ ಅಭ್ಯರ್ಥಿ ವೈ.ರಾಮಕೃಷ್ಣ ಗೆದ್ದಿದ್ದರು. 1983ರವರೆಗೆ ಬಿಜೆಪಿಯ ಸುಳಿವೇ ಇರಲಿಲ್ಲ. ಕ್ರಮೇಣ ಪಕ್ಷ ಸಂಘಟನೆ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿತು. ಪರಿಣಾಮ, 1994 ರಿಂದ 2013ರವರೆಗೆ ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರದ ಚುಕ್ಕಾಣಿ ಹಿಡಿದಿದ್ದರು.
ಅನೇಕಲ್ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸಕ್ಕೆ ರಕ್ತಪಾತದ ನೆತ್ತರು ಮೆತ್ತಿಕೊಂಡಿದೆ. ರಾಜಕೀಯ ವೈಷಮ್ಯ ಹಾಗೂ ಇನ್ನಿತರೆ ಕಾರಣಗಳಿಗಾಗಿ ಹತ್ಯೆಗಳು ನಡೆದಿವೆ. 11 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಬಿಜೆಪಿ ಟಿಕೆಟ್ ಗಾಗಿ 10 ಮಂದಿ ಆಕಾಂಕ್ಷಿಗಳ ಮಧ್ಯೆ ಪ್ರಬಲ ಪೈಪೋಟಿ ನಡೆದಿತ್ತು. ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಪ್ತ ಟಿ.ವಿ.ಬಾಬು, ಬಂಡಾಪುರ ರಾಮಚಂದ್ರ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷಸಂದೀಪ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಪ್ತ ಫಟಾಫಟ್ ಶ್ರೀನಿವಾಸ್, ಮಂಜುನಾಥ್ ಮದ್ದೂರಪ್ಪ, ಬಿ.ವೈ.ರವಿಚಂದ್ರ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಬಿಜೆಪಿ ವರಿಷ್ಠರು ಅಂತಿಮವಾಗಿ ಹುಲ್ಲಹಳ್ಳಿ ಶ್ರೀನಿವಾಸ್ ಅವರಿಗೆ ಮಣೆ ಹಾಕಿದರು. ಇದರಿಂದ ಉಳಿದ ಆಕಾಂಕ್ಷಿಗಳು ಆರಂಭದಲ್ಲಿ ಮುನಿಸಿಕೊಂಡಿದ್ದರು. ಆನಂತರ ಒಗ್ಗಟ್ಟಿನ ಮಂತ್ರ ಪಠಿಸಿದರು. ಮೇಲ್ನೋಟಕ್ಕೆ ಮಾತ್ರ ಒಗ್ಗಟ್ಟಾಗಿದ್ದೇವೆ ಎನ್ನುತ್ತಿರುವ ಟಿಕೆಟ್ ವಂಚಿತ ಅತೃಪ್ತರು ಒಳ ಏಟು ನೀಡುವ ಸಾಧ್ಯತೆ ಇದೆ. ತಮ್ಮ ಆಪ್ತ ಟಿ.ವಿ.ಬಾಬು ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಈವರೆಗೆ ಕ್ಷೇತ್ರದತ್ತ ಮುಖ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ತಮಿಳುನಾಡಿಗೆ ಅಂಟಿಕೊಂಡಿರುವ ಹಾಗೂ ಗ್ರಾಮೀಣ ಪ್ರದೇಶಗಳಿಂದ ಕೂಡಿರುವ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಅಭ್ಯರ್ಥಿಗಳ ಗೆಲುವಿನಲ್ಲಿ ಇವರೇ ನಿರ್ಣಾಯಕ ಮತದಾರರು. ಒಂದು ಲಕ್ಷಕ್ಕೂ ಅಧಿಕ ತಮಿಳು ಭಾಷಿಕ ದಲಿತರಿದ್ದಾರೆ. ಇದಲ್ಲದೆ, ರೆಡ್ಡಿ, ಒಕ್ಕಲಿಗ, ತೊಗಟವೀರ, ಲಿಂಗಾಯಿತ, ಕುರುಬ ಹಾಗೂ ಮುಸ್ಲಿಮರು ಕೂಡ ಇದ್ದಾರೆ.