ಕೆ.ಆರ್.ನಗರಕ್ಕೆ ಸಾರಾ ಮಹೇಶ್, ಪಿರಿಯಾಪಟ್ಟಣಕ್ಕೆ ಮಹದೇವ್: ಚಾಮುಂಡಿ ಬೆಟ್ಟದಲ್ಲಿ ಜೆಡಿಎಸ್ ಉಮೇದುವಾರರ ಪಟ್ಟಿ ಪ್ರಕಟಿಸಿದ ಜಿಟಿ ದೇವೇಗೌಡ
‘ನಾವು ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಜಿ.ಟಿ.ದೇವೇಗೌಡರಿಗೆ ಕೊಟ್ಟಿದ್ದೇನೆ. ಅವರ ನಾಯಕತ್ವದಲ್ಲೇ ಎಲ್ಲವೂ ನಡೆಯಲಿದೆ’ ಎಂದು ಎಚ್.ಡಿ.ದೇವೇಗೌಡ ಘೋಷಿಸಿದರು.
ಮೈಸೂರು: ಜೆಡಿಎಸ್ ವರಿಷ್ಠರ ವಿರುದ್ಧ ಮುನಿಸಿಕೊಂಡು ದೂರ ಸರಿದಿದ್ದ ಹಿರಿಯ ನಾಯಕ ಹಾಗೂ ಶಾಸಕ ಜಿ.ಟಿ.ದೇವೇಗೌಡ ಇದೀಗ ಮತ್ತೆ ಜೆಡಿಎಸ್ ತೆಕ್ಕೆಗೆ ಮರಳಿದ್ದಾರೆ. ನಿನ್ನೆಯಷ್ಟೇ (ಅ 20) ಜಿ.ಟಿ.ದೇವೇಗೌಡರ ಮನೆಗೆ ತೆರಳಿ ಊಟ ಮಾಡಿದ್ದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಹಲವು ಊಹಾಪೋಹಗಳಿಗೆ ತೆರೆ ಎಳೆದರು. ಇಂದು (ಅ 21) ಮತ್ತೆ ಜಿ.ಟಿ.ದೇವೇಗೌಡರ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ‘ಜಿ.ಟಿ.ದೇವೇಗೌಡ ನಾಯಕತ್ವಕ್ಕೆ ಅಪಸ್ವರದ ಮಾತನಾಡಿದಾರೆ ನಾನು ಸಹಿಸುವುದಿಲ್ಲ. ಅಂಥವರು ಜೆಡಿಎಸ್ನಿಂದ ಹೊರಗೆ ಹೋಗಬಹುದು’ ಎಂದು ಎಚ್ಚರಿಸಿದರು.
‘ನಾವು ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಜಿ.ಟಿ.ದೇವೇಗೌಡರಿಗೆ ಕೊಟ್ಟಿದ್ದೇನೆ. ಅವರ ನಾಯಕತ್ವದಲ್ಲೇ ಎಲ್ಲವೂ ನಡೆಯಲಿದೆ. ಮೈಸೂರು ರಾಜಕಾರಣದಲ್ಲಿ ಜಿಟಿಡಿ ತೀರ್ಮಾನವೇ ಅಂತಿಮ. ಅವರ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ’ ಎಂದು ಜಿಟಿಡಿ ವಿರೋಧಿಗಳಿಗೆ ಎಚ್.ಡಿ.ದೇವೇಗೌಡ ನೇರ ಎಚ್ಚರಿಕೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ ಸಹ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದ ನಂತರ ಖುಷಿಯಾಗಿದ್ದಂತೆ ಕಂಡುಬಂದರು. ‘ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮೂರು ವರ್ಷಗಳ ನಂತರ ನನ್ನ ಮನಸ್ಸು ಸಮಾಧಾನದಲ್ಲಿದೆ. ನಾನು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ’ ಎಂದು ಹೇಳಿದರು.
ನನ್ನ ಮತ್ತು ಎಚ್.ಡಿ.ದೇವೇಗೌಡರ ನಡುವೆ ಇನ್ನು ಯಾವ ಗೊಂದಲಗಳೂ ಉಳಿದಿಲ್ಲ. ಚಾಮುಂಡೇಶ್ವರಿಗೆ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜನವರಿಯಲ್ಲಿ ಚಂಡಿಕಾ ಹೋಮ ನಡೆಸಬೇಕು ಎಂದುಕೊಂಡಿದ್ದಾರೆ. ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದರು.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಜೆಡಿಎಸ್ ಪಕ್ಷವು ಜವಾಬ್ದಾರಿ ನೀಡಿದ ನಂತರ ಜಿ.ಟಿ.ದೇವೇಗೌಡರು ಮತ್ತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮೈಸೂರು ಭಾಗದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಿಸಿದರು. ಚಾಮುಂಡೇಶ್ವರಿಗೆ ಜಿ.ಟಿ.ದೇವೇಗೌಡ, ಹುಣಸೂರಿಗೆ ಪುತ್ರ ಹರೀಶ್ ಗೌಡ, ಕೆ.ಆರ್.ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ಟಿ.ನರಸೀಪುರಕ್ಕೆ ಅಶ್ಚಿನ್, ಎಚ್.ಡಿ.ಕೋಟೆಗೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ.