‘ಕೇಸ್ ಹಿಂಪಡೆಯಿರಿ’: ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್; ಆದರೂ ಇಲ್ಲ ಕ್ಷಮೆ
ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂಬ ನಿಲುವು ತಾಳಿದ್ದಾರೆ. ತಮ್ಮನ್ನು ಕ್ಷಮಿಸುವಂತೆ ಆರೋಪಿಗಳು ಹಾಗೂ ಅವರ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡರೂ ಕೂಡ ರಮ್ಯಾ ಅವರು ಮನಸ್ಸು ಬದಲಾಯಿಸಿಲ್ಲ.

ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಹಾಗೂ ಕೆಟ್ಟ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಈ ಘಟನೆ ನಡೆದಿದೆ. ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ನಟಿ ರಮ್ಯಾ ಅವರ ಮುಂದೆ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಟ್ಟು ಕ್ಷಮೆ ಯಾಚಿಸಿದ ಘಟನೆ ನಡೆದಿದೆ. ಆದರೂ ಕೂಡ ರಮ್ಯಾ ಅವರು ಆರೋಪಿಗಳನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.
ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಆರೋಪಿಗಳು ಕೋರ್ಟ್ ಆವರಣದಲ್ಲಿ ನಟಿ ರಮ್ಯಾ ಅವರ ಕಾಲಿಗೆ ಬಿದ್ದು, ‘ಇದೊಂದು ಬಾರಿ ಕ್ಷಮಿಸಿಬಿಡಿ, ನಮ್ಮಿಂದ ದೊಡ್ಡ ತಪ್ಪಾಗಿದೆ’ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಕಳೆದ ವಿಚಾರಣೆಯ ವೇಳೆಯೂ ಆರೋಪಿಗಳು ಇದೇ ರೀತಿ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಬಾರಿ ಆರೋಪಿಗಳ ಕುಟುಂಬದವರೂ ಕೂಡ ರಮ್ಯಾ ಅವರ ಬಳಿ ಬಂದು ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸುವಂತೆ ವಿನಂತಿಸಿಕೊಂಡರು.
ಆದರೆ, ಆರೋಪಿಗಳ ಈ ಕ್ಷಮಾಪಣೆಯನ್ನು ಕಟ್ಟುನಿಟ್ಟಾಗಿ ತಿರಸ್ಕರಿಸಿರುವ ನಟಿ ರಮ್ಯಾ ತಮ್ಮ ನಿಲುವಿನಲ್ಲಿ ಕೊಂಚವೂ ಸಡಲಿಕೆ ತೋರಿಲ್ಲ. ‘ಕೈಯಲ್ಲಿ ಮೊಬೈಲ್ ಇದೆ, ಇಂಟರ್ನೆಟ್ ಸಿಗುತ್ತದೆ ಎಂಬ ಕಾರಣಕ್ಕೆ ಯಾರ ವಿರುದ್ಧ, ಹೇಗೆ ಬೇಕಾದರೂ ಅಶ್ಲೀಲವಾಗಿ ಕಾಮೆಂಟ್ ಹಾಕಬಹುದಾ? ನಾನು ಯಾವುದೇ ಕಾರಣಕ್ಕೂ ಈ ಕೇಸ್ ವಾಪಸ್ ಪಡೆಯುವುದಿಲ್ಲ’ ಎಂದು ರಮ್ಯಾ ಅವರು ಖಡಕ್ ಆಗಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಟ್ರೋಲ್ ಹಾಗೂ ಸೈಬರ್ ದೌರ್ಜನ್ಯಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿರುವ ಅವರು, ‘ನ್ಯಾಯಾಲಯ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ನಾನು ಬರಲು ಸಿದ್ಧ. ಆದರೆ ಯಾರಿಗೂ ಕ್ಷಮೆ ನೀಡುವ ಪ್ರಶ್ನೆಯೇ ಇಲ್ಲ. ಇದೊಂದು ಘಟನೆ ಪ್ರತಿಯೊಬ್ಬರಿಗೂ ಸೂಕ್ತ ಪಾಠವಾಗಬೇಕು. ಮುಂದೆ ಇನ್ನೊಬ್ಬ ಹೆಣ್ಣುಮಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಸಾವಿರ ಬಾರಿ ಯೋಚಿಸುವಂತಾಗಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಅಶ್ಲೀಲ ಕಮೆಂಟ್; ರಮ್ಯಾ, ವಿಜಯಲಕ್ಷ್ಮೀ ಬಳಿಕ ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ
ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶಗಳನ್ನು ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ರಮ್ಯಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತೀವ್ರ ತನಿಖೆ ನಡೆಸಿ, ನಿಂದನೆ ಮಾಡಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ವಿಚಾರಣೆ ಚುರುಕುಗೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




