ಆ ಪಾತ್ರವನ್ನು ಎರಡು ಬಾರಿ ರಿಜೆಕ್ಟ್ ಮಾಡಿದ ಅಕ್ಷಯ್; ಪ್ರಭಾಸ್ ಮರುಮಾತಿಲ್ಲದೆ ಒಪ್ಪಿದ್ರು
ವಿಷ್ಣು ಮಂಚು ಅವರು ನಟಿಸಿದ ‘ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪಾತ್ರಕ್ಕಾಗಿ ಅಕ್ಷಯ್ ಕುಮಾರ್ ಅವರನ್ನು ಆಯ್ಕೆ ಮಾಡುವ ಪ್ರಯತ್ನದ ಕುರಿತು ವಿವರಿಸಿದ್ದಾರೆ. ಅಕ್ಷಯ್ ಕುಮಾರ್ ಆರಂಭದಲ್ಲಿ ಈ ಪಾತ್ರವನ್ನು ನಿರಾಕರಿಸಿದ್ದರೂ, ವಿಷ್ಣು ಮಂಚು ಅವರ ನಿರಂತರ ಪ್ರಯತ್ನದ ನಂತರ ಅವರು ಒಪ್ಪಿದ್ದಾರೆ. ಪ್ರಭಾಸ್ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡುವುದು ಸುಲಭವಾಗಿತ್ತು ಎಂದು ಹೇಳಿದ್ದಾರೆ.

ಅಕ್ಷಯ್ ಕುಮಾರ್ ಅವರು ಸ್ಟಾರ್ ಹೀರೋ. ‘ಓ ಮೈ ಗಾಡ್’ ಹಾಗೂ ‘ಓ ಮೈ ಗಾಡ್ 2’ ಚಿತ್ರದಲ್ಲಿ ಅವರು ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರವನ್ನು ಅವರು ‘ಕಣ್ಣಪ್ಪ’ ಚಿತ್ರದಲ್ಲೂ ಮಾಡಬೇಕು ಎನ್ನುವ ಬೇಡಿಕೆ ಬಂದಿತ್ತು. ಆದರೆ, ಇದನ್ನು ಅವರು ಎರಡು ಬಾರಿ ರಿಜೆಕ್ಟ್ ಮಾಡಿದ್ದರು. ಕೊನೆಗೂ ಈ ಚಿತ್ರವನ್ನು ಮಾಡಲು ಒಪ್ಪಿದರು. ಈ ಬಗ್ಗೆ ಮುಂಬೈ ಈವೆಂಟ್ನಲ್ಲಿ ವಿಷ್ಣು ಮಂಚು ಅವರು ಮಾತನಾಡಿದ್ದಾರೆ. ‘ಕಣ್ಣಪ್ಪ’ ಚಿತ್ರದಲ್ಲಿ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿ ಇದ್ದಾರೆ.
‘ಕಣ್ಣಪ್ಪ’ ಸಿನಿಮಾ ಮಾಡುವ ವಿಚಾರ ಬಂದಾಗ ಈ ಚಿತ್ರದಲ್ಲಿ ಶಿವನ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಬೇಕು ಎಂದು ವಿಷ್ಣು ಮಂಚುಗೆ ಅನಿಸಿತು. ಎರಡು ಬಾರಿ ಅವರ ಬಳಿ ಕೋರಿಕೆ ಇಟ್ಟರು. ಆದರೆ, ಅವರು ಇದನ್ನು ರಿಜೆಕ್ಟ್ ಮಾಡಿದರು. ಹಾಗಂತ ವಿಷ್ಣು ಮಂಚು ಪ್ರಯತ್ನ ನಿಲ್ಲಿಸಲೇ ಇಲ್ಲ. ಪದೇ ಪದೇ ಅವರ ಬಳಿ ಹೋಗಿ ಕೋರಿಕೆ ಇಟ್ಟರು. ಕೊನೆಗೂ ಅಕ್ಷಯ್ ಕುಮಾರ್ ಇದಕ್ಕೆ ಒಪ್ಪಿದರು.
‘ಅಕ್ಷಯ್ ಕುಮಾರ್ ಈ ಪಾತ್ರವನ್ನು ಮಾಡಲೇಬೇಕಿರಲಿಲ್ಲ. ಆದರೆ, ನನಗೆ ಶಿವ ಅಂತ ಬಂದಾಗ ಅಕ್ಷಯ್ ಕುಮಾರ್ ನೆನಪಾದರು. ಅವರು ಸಿನಿಮಾನ ಎರಡು ಬಾರಿ ರಿಜೆಕ್ಟ್ ಮಾಡಿದರು. ಅಂತಿಮವಾಗಿ ನಾನು ಅವರ ಮನ ಒಲಿಸಿದೆ’ ಎಂದು ವಿಷ್ಣು ಮಂಚು ಹೇಳಿದ್ದಾರೆ.
ಇದನ್ನೂ ಓದಿ: ‘ಕಣ್ಣಪ್ಪ’ ಸಿನಿಮಾದಿಂದ ಪ್ರಭಾಸ್ ಲುಕ್ ಬಹಿರಂಗ; ರುದ್ರನಾದ ರೆಬೆಲ್ ಸ್ಟಾರ್
ಪ್ರಭಾಸ್ ಅವರನ್ನು ಒಪ್ಪಿಸೋದು ಕಷ್ಟ ಆಗಲೇ ಇಲ್ಲ ಎಂದು ಹೇಳಿದರು ವಿಷ್ಣು ಮಂಚು. ಪ್ರಭಾಸ್ ಬಳಿ ಈ ವಿಚಾರವನ್ನು ಮೋಹನ್ ಬಾಬು ಹೇಳಿದರು. ಆ ಬಳಿಕ ಪ್ರಭಾಸ್ ಸಿನಿಮಾ ಮಾಡಲು ಮರು ಮಾತಿಲ್ಲದೆ ಒಪ್ಪಿದರಂತೆ. ‘ಪ್ರಭಾಸ್ ಅವರು ಈ ಸಿನಿಮಾ ಮಾಡಲು ಮರು ಯೋಚಿಸದೆ ಒಪ್ಪಿದರು. ನನ್ನ ತಂದೆ ಬಂದು ಸಿನಿಮಾ ಮಾಡು ಎಂದಿದ್ದಕ್ಕೆ ಅವರಿಗೆ ಭಯ ಆಯಿತು. ನಾನು ಏಕೆ ಕರೆ ಮಾಡಿಲ್ಲ ಎಂದು ಪ್ರಭಾಸ್ ನನ್ನ ಬಳಿ ಪ್ರಶ್ನೆ ಮಾಡಿದ್ದರು’ ಎಂದಿದ್ದಾರೆ ವಿಷ್ಣುಮಂಚು. ಏಪ್ರಿಲ್ 25ರಂದು ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:34 am, Fri, 28 February 25