900 ಕೋಟಿ ರೂಪಾಯಿ ಹಿಟ್ ನೀಡಿದ ಈ ನಿರ್ದೇಶಕ ಯಾರು ಅಂತ ಗೊತ್ತಾಯ್ತಾ?
ತಾವು ಆ್ಯಕ್ಷನ್-ಕಟ್ ಹೇಳಿದ ಸಿನಿಮಾ 900 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದರಿಂದ ಇವರು ತಿರುಮಲ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವರಿಗೆ ಮುಡಿ ನೀಡಿದ್ದರಿಂದ ಇವರ ಗೆಟಪ್ ಬದಲಾಗಿದೆ. ತಕ್ಷಣ ನೋಡಿದರೆ ಗುರುತು ಸಿಗುವುದು ಕಷ್ಟ. ಆದರೂ ಇವರನ್ನು ಗುರುತಿಸಿದ ಅಭಿಮಾನಿಗಳು ಫೋಟೋ ತೆಗೆಸಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಇವರು?
2023ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ‘ಅನಿಮಲ್’ ಚಿತ್ರ (Animal Movie) ಕೂಡ ಇದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದರು. ವಿಮರ್ಶೆಯ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿತು. ವಿಶ್ವಾದ್ಯಂತ ಈ ಚಿತ್ರಕ್ಕೆ ಆದ ಕಲೆಕ್ಷನ್ ಬರೋಬ್ಬರಿ 900 ಕೋಟಿ ರೂಪಾಯಿಗಿಂತಲೂ ಅಧಿಕ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ‘ಅನಿಮಲ್’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈಗ ಅವರ ಹೊಸ ಫೋಟೋ ವೈರಲ್ ಆಗಿದೆ. ಅದರಲ್ಲಿ ಅವರ ಗೆಟಪ್ ಸಂಪೂರ್ಣ ಬದಲಾಗಿದೆ.
‘ಅನಿಮಲ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರಿಂದ ಸಂದೀಪ್ ರೆಡ್ಡಿ ವಂಗಾ ಅವರಿಗೆ ಖುಷಿ ಆಗಿದೆ. ಇಷ್ಟು ದಿನಗಳ ಕಾಲ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುವುದರಲ್ಲಿ ಅವರು ಬ್ಯುಸಿ ಆಗಿದ್ದರು. ಈಗ ಸಮಯ ಮಾಡಿಕೊಂಡು ಆಂಧ್ರದ ತಿರುಮಲ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮುಡಿ ಕೊಟ್ಟಿದ್ದಾರೆ. ಇಷ್ಟು ದಿನ ಉದ್ದ ಕೂದಲು ಬಿಟ್ಟುಕೊಂಡು ಕಾಣಿಸಿಕೊಳ್ಳುತ್ತಿದ್ದ ಅವರನ್ನು ಈಗ ಬೋಳು ತಲೆಯ ಗೆಟಪ್ನಲ್ಲಿ ನೋಡಿದರೆ ಒಮ್ಮೆಲೆ ಗುರುತು ಹಿಡಿಯುವುದು ಕಷ್ಟ.
ಇದನ್ನೂ ಓದಿ: ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೆ: ‘ಅನಿಮಲ್’ ಸಿನಿಮಾ ವಿರುದ್ಧ ಸಿಡಿದೆದ್ದ ಖುಷ್ಬು
ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕಾಣಿಸಿಕೊಂಡ ಸಂದೀಪ್ ರೆಡ್ಡಿ ವಂಗಾ ಅವರನ್ನು ನೋಡಿ ಅಲ್ಲಿದ್ದ ಕೆಲವರು ಮಾತನಾಡಿಸಿದ್ದಾರೆ. ‘ಸಾಮಾನ್ಯವಾಗಿ ನಾನು ಪ್ರತಿವರ್ಷ ಇಲ್ಲಿಗೆ ಬರುತ್ತೇನೆ. ಆದರೆ ಈ ನಡುವೆ ಸ್ವಲ್ಪ ಗ್ಯಾಪ್ ಆಗಿತ್ತು’ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ. ನಿಮ್ಮ ಮುಂದಿನ ಸಿನಿಮಾ ಯಾವುದು ಎಂದು ಕೇಳಿದಕ್ಕೆ ‘ಪ್ರಭಾಸ್ ಜೊತೆಗೆ ಸ್ಪಿರಿಟ್ ಚಿತ್ರದ ಕೆಲಸ ಈಗಾಗಲೇ ಶುರುವಾಗಿದೆ’ ಎಂದು ಸಂದೀಪ್ ಉತ್ತರಿಸಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ವೈರಲ್ ವಿಡಿಯೋ:
Director Sandeep Reddy Vanga Visits Tirumala & Talks About Prabhas #Spirit Movie | #SandeepReddyVanga #Tirupati pic.twitter.com/yq7Obo4NRG
— Suresh Kondeti (@santoshamsuresh) March 6, 2024
ಸಂದೀಪ್ ರೆಡ್ಡಿ ವಂಗಾ ಅವರನ್ನು ನೋಡಿದ ಕೆಲವು ಅಭಿಮಾನಿಗಳು ಫೋಟೋ ತೆಗೆಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. ಸಂದೀಪ್ ನಿರ್ದೇಶನ ಮಾಡುವ ಸಿನಿಮಾಗಳು ವಿವಾದ ಸೃಷ್ಟಿ ಮಾಡುತ್ತವೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಈ ಸಿನಿಮಾದ ವಿರುದ್ಧ ಮಾತನಾಡಿದ್ದಾರೆ. ಅಂಥ ಟೀಕೆಗಳ ಬಗ್ಗೆ ಸಂದೀಪ್ ಅವರು ತಲೆ ಕೆಡಿಸಿಕೊಂಡಿಲ್ಲ. ಅವರ ಮುಂದಿನ ಸಿನಿಮಾ ಹೇಗಿರಲಿದೆ ಎಂದು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅವರು ಕೈ ಜೋಡಿಸಿರುವುದರಿಂದ ನಿರೀಕ್ಷೆ ಜೋರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.