Ayan Mukerji: ‘ಬ್ರಹ್ಮಾಸ್ತ್ರ 2’ ಚಿತ್ರದ ಪ್ಲ್ಯಾನ್ನಲ್ಲಿ ಭಾರಿ ಬದಲಾವಣೆ; ಇನ್ನಷ್ಟು ಹಿರಿದಾಗಲಿದೆ ಸೀಕ್ವೆಲ್ ಬಜೆಟ್
Brahmastra Box Office Collection: ಈಗಾಗಲೇ ತಿಳಿದಿರುವಂತೆ ‘ಬ್ರಹ್ಮಾಸ್ತ’ ಕಥೆಯನ್ನು ನಿರ್ದೇಶಕ ಅಯಾನ್ ಮುಖರ್ಜಿ ಅವರು ಮೂರು ಪಾರ್ಟ್ಗಳಲ್ಲಿ ಹೇಳಲಿದ್ದಾರೆ. ಈಗ ಮೊದಲ ಪಾರ್ಟ್ ಬಿಡುಗಡೆ ಆಗಿದೆ.

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಕಲೆಕ್ಷನ್ ಆಗಿದೆ. ಬಾಲಿವುಡ್ ಸಿನಿಮಾಗಳು ಲಾಭವನ್ನೇ ಕಾಣದೇ ಒದ್ದಾಡುತ್ತಿರುವ ಈ ಪರಿಸ್ಥಿತಿಯಲ್ಲಿ ‘ಬ್ರಹ್ಮಾಸ್ತ್ರ’ (Brahmastra) ಚಿತ್ರಕ್ಕೆ ಭಾರಿ ಕಮಾಯಿ ಆಗುತ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಮೂರನೇ ದಿನಕ್ಕೆ 225 ಕೋಟಿ ರೂಪಾಯಿ ಕಲೆಕ್ಷನ್ (Box Office Collection) ಮಾಡಿತು. ನಾಲ್ಕನೇ ದಿನ ಕೂಡ ಒಳ್ಳೆಯ ಕಮಾಯಿ ಆಗಿದೆ. ಇದರ ಪರಿಣಾಮದಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಅಷ್ಟೇ ಅಲ್ಲದೇ, ಈ ಚಿತ್ರದ ಸೀಕ್ವೆಲ್ ಬಗ್ಗೆ ಒಂದು ಬಿಗ್ ನ್ಯೂಸ್ ಕೇಳಿಬರುತ್ತಿದೆ. ‘ಕೆಜಿಎಫ್ 2’ ರೀತಿಯಲ್ಲಿ ‘ಬ್ರಹ್ಮಾಸ್ತ್ರ 2’ ಚಿತ್ರವನ್ನು ಕೂಡ ದೊಡ್ಡ ಕ್ಯಾನ್ವಾಸ್ನಲ್ಲಿ ಕಟ್ಟಿಕೊಡಲು ಅಯಾನ್ ಮುಖರ್ಜಿ ಪ್ಲ್ಯಾನ್ ಮಾಡುತ್ತಿದ್ದಾರೆ.
ಆರಂಭದಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರದ ಬಗ್ಗೆ ಒಂದು ವರ್ಗದ ಪ್ರೇಕ್ಷಕರು ಅನುಮಾನ ಇಟ್ಟುಕೊಂಡಿದ್ದರು. ಕಳಪೆ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ಟ್ರೇಲರ್ ಅನ್ನು ಕಟುವಾಗಿ ಟೀಕಿಸಲಾಗಿತ್ತು. ಸಂದರ್ಶನವೊಂದರಲ್ಲಿ ಗೋಮಾಂಸ ಇಷ್ಟ ಎಂದು ರಣಬೀರ್ ಕಪೂರ್ ಹೇಳಿಕೆ ನೀಡಿದ್ದರಿಂದ ಕೆಲವರು ಈ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸಲು ಆರಂಭಿಸಿದರು. ಏನೇ ಮಾಡಿದರೂ ಕೂಡ ಚಿತ್ರದ ಕಲೆಕ್ಷನ್ಗೆ ತೊಂದರೆ ಆಗಿಲ್ಲ. ಜನರಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ಬಂದಂತೆ ಆಗಿದೆ.
ಈಗಾಗಲೇ ತಿಳಿದಿರುವಂತೆ ‘ಬ್ರಹ್ಮಾಸ್ತ’ ಚಿತ್ರದ ಕಥೆಯನ್ನು ನಿರ್ದೇಶಕ ಅಯಾನ್ ಮುಖರ್ಜಿ ಅವರು ಮೂರು ಪಾರ್ಟ್ಗಳಲ್ಲಿ ಹೇಳಲಿದ್ದಾರೆ. ಈಗ ಮೊದಲ ಪಾರ್ಟ್ ಬಿಡುಗಡೆ ಆಗಿದೆ. ಅದಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿರುವುದರಿಂದ ಎರಡನೇ ಪಾರ್ಟ್ ಅನ್ನು ಇನ್ನಷ್ಟು ಅದ್ದೂರಿಯಾಗಿ ಕಟ್ಟಿಕೊಡಲು ಅಯಾನ್ ಮುಖರ್ಜಿ ನಿರ್ಧರಿಸಿದ್ದಾರೆ. ‘ಕೆಜಿಎಫ್’ ಗೆದ್ದ ಬಳಿಕ ‘ಕೆಜಿಎಫ್ 2’ ಸಿನಿಮಾವನ್ನು ಇನ್ನಷ್ಟು ಅದ್ದೂರಿಯಾಗಿ ನಿರ್ಮಿಸಲಾಯಿತು. ಅದೇ ಮಾದರಿಯಲ್ಲಿ ‘ಬ್ರಹ್ಮಾಸ್ತ್ರ 2’ ಚಿತ್ರದ ಬಜೆಟ್ ಹೆಚ್ಚಿಸಲು ಅಯಾನ್ ಮುಖರ್ಜಿ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೇಳಿಬಂದಿದೆ. ಸೆಟ್, ಗ್ರಾಫಿಕ್ಸ್ ಎಲ್ಲವೂ ಉತ್ಕೃಷ್ಟವಾಗಿ ಇರಲಿವೆಯಂತೆ.
ರಣಬೀರ್ ಕಪೂರ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈ ವರ್ಷ ಅವರು ನಟಿಸಿದ್ದ ‘ಶಂಷೇರಾ’ ಚಿತ್ರ ರಿಲೀಸ್ ಆಗಿ ಸೋಲು ಅನುಭವಿಸಿತು. ಆ ಬೇಸರವನ್ನು ಮರೆಸುವ ರೀತಿಯಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಗೆದ್ದು ಬೀಗುತ್ತಿದೆ. ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಬೂಸ್ಟ್ ಸಿಕ್ಕಂತೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








