ಶವವಾಗಿ ಪತ್ತೆಯಾದ ಡ್ಯಾನ್ಸರ್; ರಿತೇಶ್ ದೇಶಮುಖ್ ಸಿನಿಮಾ ಶೂಟಿಂಗ್ ವೇಳೆ ಅವಘಡ
‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣದ ವೇಳೆ ದುರ್ಘಟನೆ ನಡೆದಿದೆ. ಶೂಟಿಂಗ್ ವೇಳೆ ಡ್ಯಾನ್ಸರ್ ಒಬ್ಬರು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಎರಡು ದಿನಗಳ ಬಳಿಕ ಅವರ ಶವ ಪತ್ತೆಯಾಗಿದೆ. ರಿತೇಶ್ ದೇಶಮುಖ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಡ್ಯಾನ್ಸರ್ ಸಾವಿನ ನಂತರ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.

ಸಿನಿಮಾದ ಶೂಟಿಂಗ್ ವೇಳೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಅಪಾಯಕಾರಿ ಲೊಕೇಷನ್ಗಳಲ್ಲಿ ಚಿತ್ರೀಕರಣ ಮಾಡುವಾಗ ಸ್ವಲ್ಪ ಮೈಮರೆತರೂ ಪ್ರಾಣಕ್ಕೆ ಹಾನಿ ಆಗುತ್ತದೆ. ಈ ಮೊದಲು ಅನೇಕ ಚಿತ್ರತಂಡಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದುಂಟು. ಈಗ ರಿತೇಶ್ ದೇಶಮುಖ್ (Riteish Deshmukh) ನಟನೆಯ ‘ರಾಜಾ ಶಿವಾಜಿ’ ಸಿನಿಮಾತಂಡದಲ್ಲಿ ಕೂಡ ಇಂಥದ್ದೇ ಅವಘಡ ಸಂಭವಿಸಿದೆ. 26 ವರ್ಷದ ಡ್ಯಾನ್ಸರ್ (Dancer) ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 2 ದಿನಗಳ ಕಳೆದ ಬಳಿಕ ಅವರ ಶವ ಪತ್ತೆ ಆಗಿದೆ. ಈ ಅವಘಡ ಸಂಭವಿಸಿದ ಬಳಿಕ ‘ರಾಜಾ ಶಿವಾಜಿ’ (Raja Shivaji) ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದೆ.
ಎರಡು ದಿನಗಳ ಹಿಂದೆ ಸತಾರಾ ಜಿಲ್ಲೆಯಲ್ಲಿ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಕೃಷ್ಣ ಮತ್ತು ವೆನ್ನಾ ನದಿಯ ಸಂಗಮದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರೀಕರಣದಲ್ಲಿ ಡ್ಯಾನ್ಸರ್ ಸೌರಭ್ ಶರ್ಮಾ ಕೂಡ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಕೃಷ್ಣ ನದಿ ಬಳಿ ತೆರಳಿದ ಸೌರಭ್ ಅವರು ಕೊಚ್ಚಿಕೊಂಡು ಹೋದರು. 2 ದಿನಗಳ ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ.
‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣಕ್ಕಾಗಿ ಡ್ಯಾನ್ಸರ್ಗಳು ಬಣ್ಣದ ಪೌಡರ್ ಹಚ್ಚಿಕೊಂಡಿದ್ದರು. ಅದನ್ನು ತೊಳೆದುಕೊಳ್ಳಲು ಡ್ಯಾನ್ಸರ್ ಸೌರಭ್ ಅವರು ಕೃಷ್ಣ ನದಿಗೆ ಇಳಿದಿದ್ದರು. ಆಗ ಅವರು ಆಯ ತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಕೂಡಲೇ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಯಿತು. ಆದರೂ ಕೂಡ ಸೌರಭ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: ನಟಿ ಜೆನಿಲಿಯಾ ಮತ್ತೆ ಪ್ರೆಗ್ನೆಂಟ್ ಎಂದವರಿಗೆ ಉತ್ತರ ಕೊಟ್ಟ ರಿತೇಶ್
ಅಪಘಾತದಿಂದ ಸೌರಭ್ ಶರ್ಮಾ ಸಾವು ಸಂಭವಿಸಿದೆ ಎಂದು ಸತಾರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಈ ದುರ್ಘಟನೆ ನಡೆದಿದ್ದರಿಂದ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ರಿತೇಶ್ ದೇಶಮುಖ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಒಡೆತನದ ‘ಮುಂಬೈ ಫಿಲ್ಮ್ ಕಂಪನಿ’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.
ಮರಾಠ ರಾಜ ಛತ್ರಪತಿ ಶಿವಾಜಿ ಜೀವನದ ವಿವರಗಳನ್ನು ಆಧರಿಸಿ ‘ರಾಜಾ ಶಿವಾಜಿ’ ಸಿನಿಮಾ ಮೂಡಿಬರುತ್ತಿದೆ. ಮುಖ್ಯಪಾತ್ರದಲ್ಲಿ ರಿತೇಶ್ ದೇಶಮುಖ್ ನಟಿಸುತ್ತಿದ್ದಾರೆ. ಭಾಗ್ಯಶ್ರೀ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿ ಮತ್ತು ಮರಾಠಿಯಲ್ಲಿ ‘ರಾಜಾ ಶಿವಾಜಿ’ ಚಿತ್ರ ಸಿದ್ಧವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








