Ram Setu Teaser: ರಾಮ ಸೇತುವೆ ಉಳಿಸಲು ಮುಂದಾದ ಅಕ್ಷಯ್ ಕುಮಾರ್; ನಿರೀಕ್ಷೆ ಹುಟ್ಟಿಸಿತು ಟೀಸರ್
Akshay Kumar: ‘ರಾಮ್ ಸೇತು’ ಚಿತ್ರದಲ್ಲಿ ಆರ್ಯನ್ ಕುಲಶ್ರೇಷ್ಠ ಹೆಸರಿನ ಪಾತ್ರವನ್ನು ಅಕ್ಷಯ್ ಮಾಡಿದ್ದಾರೆ. ಆರ್ಯನ್ ರಾಮ ಸೇತುವೆ ವಿಚಾರದಲ್ಲಿ ನಾಸ್ತಿಕನಾಗಿರುತ್ತಾನೆ. ಆ ಬಗ್ಗೆ ಅಧ್ಯಯನ ಮಾಡುತ್ತಾ ಆಸ್ತಿಕನಾಗಿ ಬದಲಾಗುತ್ತಾನೆ.
ನಟ ಅಕ್ಷಯ್ ಕುಮಾರ್ (Akshay Kumar) ಅವರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುತ್ತಿದ್ದವು. ಏಕ ಕಾಲಕ್ಕೆ ಹಲವು ಚಿತ್ರಗಳನ್ನು ಒಪ್ಪಿಕೊಂಡು ನಟಿಸುವ ಅವರು ಇತ್ತೀಚೆಗೆ ಸತತ ಸೋಲು ಕಾಣುತ್ತಿದ್ದಾರೆ. ಅವರ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗುತ್ತಿವೆ. ಇದಕ್ಕೆ ಕಾರಣ ಹಲವು. ನಷ್ಟಕ್ಕೆ ಹೆದರಿರುವ ನಿರ್ಮಾಪಕರು ಅವರ ಚಿತ್ರಗಳನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಈಗ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರಲು ಅಕ್ಷಯ್ ಕುಮಾರ್ ರೆಡಿ ಆಗಿದ್ದಾರೆ. ಅವರ ನಟನೆಯ ‘ರಾಮ್ ಸೇತು’ (Ram Setu) ಚಿತ್ರ ಅಕ್ಟೋಬರ್ 25ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.
ರಾಮ ಸೇತುವೆ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಾಗಿದೆ. ರಾಮಾಯಣದ ಪ್ರಕಾರ ಸೀತೆಯನ್ನು ರಾವಣ ಅಪಹರಣ ಮಾಡಿ ಲಂಕೆಯಲ್ಲಿ (ಶ್ರೀಲಂಕಾ) ಇರಿಸಿದ್ದ. ರಾಮನಿಗೆ ಸಮುದ್ರ ದಾಟಿ ಶ್ರೀಲಂಕಾ ಹೋಗಬೇಕಿತ್ತು. ಲಂಕೆಗೆ ಹೋಗುವುದಕ್ಕೆ ಸೇತುವೆ ನಿರ್ಮಿಸಲು ವಾನರ ಸೈನ್ಯ ಸಹಾಯ ಮಾಡಿತ್ತು. ಅಲ್ಲಿ ಸೇತುವೆ ಇತ್ತು ಎಂಬುದನ್ನು ಕೆಲವರು ಒಪ್ಪಿದರೆ ಇನ್ನೂ ಕೆಲವರು ಸೇತುವೆ ಇಲ್ಲ ಎಂಬ ಮಾತನ್ನು ಹೇಳುತ್ತಾರೆ. ಈಗ ರಾಮ ಸೇತುವೆ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.
‘ರಾಮ್ ಸೇತು’ ಚಿತ್ರದಲ್ಲಿ ಆರ್ಯನ್ ಕುಲಶ್ರೇಷ್ಠ ಹೆಸರಿನ ಪಾತ್ರವನ್ನು ಅಕ್ಷಯ್ ಮಾಡಿದ್ದಾರೆ. ಆರ್ಯನ್ ರಾಮ ಸೇತುವೆ ವಿಚಾರದಲ್ಲಿ ನಾಸ್ತಿಕನಾಗಿರುತ್ತಾನೆ. ಆ ಬಗ್ಗೆ ಅಧ್ಯಯನ ಮಾಡುತ್ತಾ ಆಸ್ತಿಕನಾಗಿ ಬದಲಾಗುತ್ತಾನೆ. ರಾಮ ಸೇತುವೆ ಇತ್ತು ಎಂಬುದನ್ನು ಸಾಬೀತು ಮಾಡಲು ಮುಂದಾಗುತ್ತಾನೆ ಆರ್ಯನ್. ಈ ರೇಸ್ನಲ್ಲಿ ಅವನು ಗೆಲ್ಲುತ್ತಾನೋ ಅಥವಾ ಇಲ್ಲವೋ ಎಂಬುದು ಸಿನಿಮಾದ ಕಥೆ. ಇದಿಷ್ಟು ವಿಚಾರವನ್ನು ಟೀಸರ್ನಲ್ಲಿ ತೋರಿಸಲಾಗಿದೆ. ‘ರಾಮ ಸೇತುವೆ ಉಳಿಸಲು ನಮ್ಮ ಬಳಿ ಕೇವಲ ಮೂರು ದಿನ ಇದೆ’ ಎಂದು ಅಕ್ಷಯ್ ಕುಮಾರ್ ಹೇಳುವ ಮಾತು ಸಾಕಷ್ಟು ಗಮನ ಸೆಳೆದಿದೆ.
ಅಕ್ಷಯ್ ಕುಮಾರ್ಗೆ ಒಂದು ಗೆಲುವು ಬೇಕಾಗಿದೆ. ಈ ಕಾರಣಕ್ಕೆ ಅವರು ‘ರಾಮ್ ಸೇತು’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ಮುಂದಾಗಿದ್ದಾರೆ. ಅಜಯ್ ದೇವಗನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಥ್ಯಾಂಕ್ ಗಾಡ್’ ಚಿತ್ರದ ಜತೆ ಈ ಚಿತ್ರ ಸೆಣೆಸಲಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಹಬ್ಬಿದೆ ಗಾಸಿಪ್; ನಿರ್ಮಾಪಕರೇ ನೀಡಿದ್ರು ಸ್ಪಷ್ಟನೆ
ಬಾಲಿವುಡ್ ಚಿತ್ರಗಳು ಸೊರಗುತ್ತಿವೆ ಎಂಬ ಚರ್ಚೆಯ ಮಧ್ಯೆ ‘ಬ್ರಹ್ಮಾಸ್ತ್ರ’ ಸಿನಿಮಾ ಗೆದ್ದು ಬೀಗಿದೆ. ಇದರಿಂದ ಬಾಲಿವುಡ್ಗೆ ಹೊಸ ಬೂಸ್ಟ್ ಸಿಕ್ಕಿದೆ. ಇದು ‘ರಾಮ್ ಸೇತು’ಗೆ ಸಹಕಾರಿ ಆಗುವ ನಿರೀಕ್ಷೆ ಇದೆ. ಅಭಿಷೇಕ್ ಶರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ವಿಶ್ವಾದ್ಯಂತ ಚಿತ್ರ ಬಿಡುಗಡೆ ಆಗಲಿದೆ.