ನಟ ಸಲ್ಮಾನ್ ಖಾನ್ ಮನೆಯಲ್ಲಿ ಹಾವು ಪತ್ತೆ: ಸುರಕ್ಷಿತವಾಗಿ ಹಿಡಿದ ಸಿಬ್ಬಂದಿ
ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಒಳಗೆ ಹಾವು ನುಗ್ಗಿದೆ. ಕೂಡಲೇ ಹಾವು ಹಿಡಿಯುವವರನ್ನು ಕರೆಸಲಾಗಿದೆ. ಹಾವನ್ನು ರಕ್ಷಿಸಿದ ಫೋಟೋ, ವಿಡಿಯೋ ವೈರಲ್ ಆಗಿದೆ. ಈ ಮೊದಲು, 2021ರಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿತ್ತು. ಆದರೆ ಈ ಬಾರಿ ಯಾರಿಗೂ ತೊಂದರೆ ಆಗಿಲ್ಲ.

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (Galaxy Apartment) ಆವರಣದಲ್ಲಿ ಸೋಮವಾರ (ಮೇ 18) ಹಾವೊಂದು ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿ ಹಾವು (Snake) ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಾವು ಹಿಡಿಯುವ ತಜ್ಞರು ಅತ್ಯಂತ ಜಾಣ್ಮೆಯಿಂದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ (Salman Khan) ಅವರಿಗೆ ಹಾವು ಕಚ್ಚಿದ್ದ ಘಟನೆಯನ್ನು ಫ್ಯಾನ್ಸ್ ಈಗ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ರಕ್ಷಕನು ಹಾವಿನ ಬಾಲವನ್ನು ಹಿಡಿದು, ಅದನ್ನು ಹತೋಟಿಗೆ ತಂದು, ತದನಂತರ ಅತ್ಯಂತ ಜಾಗರೂಕತೆಯಿಂದ ತನ್ನ ಕೈಗೆ ಸುತ್ತಿಕೊಂಡು ಬ್ಯಾಗ್‌ನಲ್ಲಿ ತುಂಬಿಸುತ್ತಿರುವುದು ಕಂಡುಬಂದಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು ನೆರವಾಗಿದ್ದಾರೆ. ರಕ್ಷಕನು ಹಾವನ್ನು ಹ್ಯಾಂಡಲ್ ಮಾಡಿದ ವಿಧಾನವನ್ನು ನೋಡಿದರೆ, ಇದು ವಿಷಕಾರಿಯಲ್ಲದ ಹಾವು ಎಂದು ಅಂದಾಜಿಸಲಾಗಿದೆ.
ಮುಂಬೈನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ನಿವಾಸಗಳಲ್ಲಿ ಒಂದಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿರುವುದರಿಂದ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾವು ಹಿಡಿಯುವ ಕಾರ್ಯಾಚರಣೆಯನ್ನು ನೋಡಲು ಅಪಾರ್ಟ್‌ಮೆಂಟ್ ಹೊರಗಡೆ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಅಭಿಮಾನಿಗಳು ಜಮಾಯಿಸಿದ್ದರು.
ವೈರಲ್ ವಿಡಿಯೋ:
ಈ ಹಿಂದೆ 2021ರಲ್ಲಿ, ಸಲ್ಮಾನ್ ಖಾನ್ ಅವರು ತಮ್ಮ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿದ್ದಾಗ ಹಾವಿನ ಕಡಿತಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಅವರಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಘಟನೆಯ ಬಗ್ಗೆ ಸಲ್ಮಾನ್ ಖಾನ್ ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ನನ್ನ ಫಾರ್ಮ್‌ಹೌಸ್‌ಗೆ ಹಾವೊಂದು ನುಗ್ಗಿತ್ತು, ನಾನು ಅದನ್ನು ಕೋಲಿನ ಸಹಾಯದಿಂದ ಹೊರಗೆ ಹಾಕಲು ಯತ್ನಿಸಿದೆ. ಆದರೆ ಅದು ನಿಧಾನವಾಗಿ ನನ್ನ ಕೈಗೆ ಹತ್ತಿತು. ನಾನು ಅದನ್ನು ಬಿಡುಗಡೆ ಮಾಡಲು ಹಿಡಿದಾಗ, ಅದು ನನಗೆ ಮೂರು ಬಾರಿ ಕಚ್ಚಿತು. ಅದು ಒಂದು ರೀತಿಯ ವಿಷಪೂರಿತ ಹಾವಾಗಿತ್ತು. ನಾನು 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಸದ್ಯ ನಾನು ಆರಾಮವಾಗಿದ್ದೇನೆ’ ಎಂದು ತಿಳಿಸಿದ್ದರು.
ಇದನ್ನೂ ಓದಿ: ‘ರಾಜ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅಬ್ಬರ: ಜೀವಾ ಮಹಾಲಾ ಪಾತ್ರ ಕಂಡು ಫ್ಯಾನ್ಸ್ ಫಿದಾ
2023ರ ಸೂಪರ್ ಹಿಟ್ ಸಿನಿಮಾ ‘ಟೈಗರ್ 3’ ನಂತರ, ಸಲ್ಮಾನ್ ಖಾನ್ 2025ರಲ್ಲಿ ‘ಸಿಕಂದರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸಲಿಲ್ಲ. ಈಗ ಸಲ್ಮಾನ್ ಖಾನ್ ಅವರು ನಿರ್ದೇಶಕ ಅಪೂರ್ವ ಲಖಿಯಾ ಅವರೊಂದಿಗೆ ‘ಮಾತೃಭೂಮಿ’ ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:29 am, Tue, 19 May 26





