ಟಿವಿ9 ಇಂಪ್ಯಾಕ್ಟ್: ಅವಾಚ್ಯ ಶಬ್ದ ಬಳಕೆ, ಕನ್ನಡಿಗರ ಕ್ಷಮೆ ಕೇಳಿದ ದುಲ್ಕರ್ ಸಲ್ಮಾನ್
Dulquer Salmaan asks apology: ಖ್ಯಾತ ನಟ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರುವ ಮಲಯಾಳಂ ಸಿನಿಮಾ ‘ಲೋಕಾ: ಚಾಪ್ಟರ್ 1’ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾನಲ್ಲಿ ಬೆಂಗಳೂರಿನ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದವೊಂದನ್ನು ಬಳಸಲಾಗಿತ್ತು. ಈ ಬಗ್ಗೆ ಟಿವಿ9 ಮೊದಲ ವರದಿ ಮಾಡಿತ್ತು. ಇದೀಗ ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆ ಬೇಷರತ್ ಕ್ಷಮೆ ಯಾಚಿಸಿದೆ.

ಬೆಂಗಳೂರು, ತನ್ನ ವೈವಿಧ್ಯತೆ, ಸಹಿಷ್ಣುತೆ, ಅಭಿವೃದ್ಧಿ, ಪರಂಪರೆ, ಹಸಿರು ಪ್ರೀತಿ, ವಿಫುಲ ಅವಕಾಶಗಳಿಂದಾಗಿ ವಿಶ್ವ ಮಟ್ಟದಲ್ಲಿ ಗುರುತು ಪಡೆದುಕೊಂಡಿರುವ ನಗರ. ಆದರೆ ಇತ್ತೀಚೆಗೆ ಬಿಡುಗಡೆ ಆದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರುವ ‘ಲೋಕಾ’ ಹೆಸರಿನ ಸಿನಿಮಾನಲ್ಲಿ ಬೆಂಗಳೂರಿನ ಜನರ ಬಗ್ಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಮಹಿಳೆಯರ ಬಗ್ಗೆ ಅವಾಚ್ಯ ಪದ ಬಳಕೆ ಆಗಿತ್ತು. ಇದನ್ನು ಖಂಡಿಸಿ ಟಿವಿ9 ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೆ ಇದೀಗ ನಟ, ನಿರ್ಮಾಪಕ ದುಲ್ಕರ್ ಸಲ್ಮಾನ್ ಕ್ಷಮೆ ಕೇಳಿದ್ದಾರೆ.
ದುಲ್ಕರ್ ಸಲ್ಮಾನ್ ಅವರ ವೇಯ್ಫೇರ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿರುವ ಸೂಪರ್ ಹೀರೋ ಸಿನಿಮಾ ‘ಲೋಕಾ’ ಇದೇ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾದ ಕತೆ ನಡೆಯುವುದು ಬೆಂಗಳೂರಿನಲ್ಲೇ. ಸಿನಿಮಾನಲ್ಲಿ ಸಾಕಷ್ಟು ಕನ್ನಡದ ಸಂಭಾಷಣೆಗಳು ಸಹ ಇವೆ. ಆದರೆ ಸಿನಿಮಾದ ಪಾತ್ರವೊಂದು ಬೆಂಗಳೂರಿನ ಯುವತಿಯರ ಬಗ್ಗೆ ಕೀಳು ಪದವೊಂದರ ಬಳಕೆ ಮಾಡಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಕ್ಷಮೆ ಕೋರಿದೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ, ‘ನಮ್ಮ ನಿರ್ಮಾಣದ ‘ಲೋಕಾ: ಚಾಪ್ಟರ್ 1’ ಸಿನಿಮಾದ ಪಾತ್ರವೊಂದು ಹೇಳಿರುವ ಸಂಭಾಷಣೆ ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ’ ಎಂದಿದೆ.
ಇದನ್ನೂ ಓದಿ:ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ‘ಡಗಾರ್’ ಪದ ಬಳಕೆ; ಭುಗಿಲೆದ್ದ ಆಕ್ರೋಶ
ಮುಂದುವರೆದು, ‘ನಮ್ಮ ವೇಯ್ಫೇರ್ ಫಿಲಮ್ಸ್ನಲ್ಲಿ ನಾವು ಎಲ್ಲದಕ್ಕೂ ಮೊದಲ ಆದ್ಯತೆ ನೀಡುವುದು ಜನರಿಗೆ. ನಮ್ಮ ಕಣ್ತಪ್ಪಿನಿಂದ ಆಗಿರುವ ಈ ಪ್ರಮಾದಕ್ಕೆ ನಾವು ಬೇಷರತ್ ಕ್ಷಮೆ ಕೋರುತ್ತೇವೆ ಹಾಗೂ ಈ ಕೂಡಲೇ ಆ ನಿರ್ದಿಷ್ಟ ಸಂಭಾಷಣೆಯನ್ನು ತೆಗೆದು ಹಾಕುತ್ತೇವೆ ಅಥವಾ ಬದಲಾಯಿಸುತ್ತೇವೆ. ಆಗಿರುವ ಸಮಸ್ಯೆಗೆ ನಾವು ಕ್ಷಮೆ ಕೇಳುತ್ತೇವೆ ಮತ್ತು ನಮ್ಮ ಕ್ಷಮೆಯನ್ನು ಸ್ವೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ’ ಎಂದಿದ್ದಾರೆ.
‘ಲೋಕಾ: ಚಾಪ್ಟರ್ 1’ ಸಿನಿಮಾನಲ್ಲಿ ಬೆಂಗಳೂರಿನ ಮಹಿಳೆಯರ ಬಗ್ಗೆ ಮಾಡಲಾಗಿರುವ ಅವಾಚ್ಯ ಪದದ ಬಳಕೆ ಬಗ್ಗೆ ಟಿವಿ9 ಡಿಜಿಟಲ್ ಮೊದಲು ವರದಿ ಮಾಡಿತ್ತು. ವರದಿಯನ್ನು ಗಮನಿಸಿದ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ತೀವ್ರ ವಿರೋಧವನ್ನು, ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಟಿವಿ9 ವರದಿ ಬೆನ್ನಲ್ಲೇ ಸಂಭಾಷಣೆಯನ್ನು ತೆಗೆದು ಹಾಕಲಾಗಿದೆ.
‘ಲೋಕಾ’ ಸಿನಿಮಾವು ಮಲಯಾಳಂನ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಆಗಿದ್ದು, ಸಿನಿಮಾ ನೋಡಿದವರು ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಡಿಮೆ ಬಜೆಟ್ನಲ್ಲಿಯೇ ಸುಂದರ ಸಿನಿಮಾ ಮಾಡಿದ್ದಾರೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Tue, 2 September 25




